ಬಿ.ಎಚ್.ಎಂ.ಗುರುಶಾಂತ ಶಾಸ್ತ್ರಿ
ಕಂಪ್ಲಿ: ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎಂಬ ಐತಿಹಾಸಿಕ ಖ್ಯಾತಿಗೆ ಪಾತ್ರವಾಗಿರುವ ಕಂಪ್ಲಿ ಪಟ್ಟಣಕ್ಕೆ ಉತ್ಸವದ ಮೆರುಗು ತುಂಬಿದೆ. ಶತಮಾನಗಳ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಹೊತ್ತ ಕಂಪ್ಲಿಯಲ್ಲಿ ಫೆ.11ರಂದು ಕಂಪ್ಲಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.ಫೆ.11, 12ರಂದು ಎರಡು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳಿಗೆ ಪಟ್ಟಣ ಸಾಕ್ಷಿಯಾಗಲಿದೆ. ಉತ್ಸವದ ಮೊದಲ ದಿನವಾದ ಇಂದು ಬೆಳಗ್ಗೆ 9 ಗಂಟೆಗೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಿಂದ ಕೆ.ಎಸ್. ಭವನದವರೆಗಿನ ಮುಖ್ಯ ರಸ್ತೆಯಲ್ಲಿ ಭವ್ಯ ರಂಗೋಲಿ ಸ್ಪರ್ಧೆ ಜರುಗಲಿದೆ. ಬಣ್ಣ ಬಣ್ಣದ ರಂಗೋಲಿಗಳ ಮೂಲಕ ಕಲಾವಿದರು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲಿದ್ದು, ಉತ್ಸವಕ್ಕೆ ಇನ್ನಷ್ಟು ಕಳೆ ತುಂಬಲಿದೆ. ಇದೇ ವೇಳೆ ಬಿಎಸ್‌ವಿ ಶಾಲಾ ಆವರಣದಲ್ಲಿ ಮೆಹಂದಿ ಸ್ಪರ್ಧೆ ಆಯೋಜಿಸಲಾಗಿದ್ದು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೋಟೆಯ ಐತಿಹಾಸಿಕ ಪಂಪಾಪತಿ ದೇವಸ್ಥಾನದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸೋಮಪ್ಪ ಕೆರೆಯವರೆಗೂ ಅದ್ಧೂರಿ ಉತ್ಸವ ಮೆರವಣಿಗೆ ಜರುಗಲಿದೆ. ಮೆರವಣಿಗೆಯಲ್ಲಿ ನಾನಾ ರೀತಿಯ ಸಾಂಸ್ಕೃತಿಕ, ಜನಪದ ಹಾಗೂ ಕಲಾ ತಂಡಗಳು ಭಾಗವಹಿಸಲಿದ್ದು, ಡೊಳ್ಳು ಕುಣಿತ, ವೀರಗಾಸೆ, ತಮಟೆ, ಜನಪದ ವೇಷಧಾರಿಗಳು ಮೆರವಣಿಗೆಯ ಆಕರ್ಷಣೆಯಾಗಲಿದ್ದಾರೆ.ಸಂಜೆ 6 ಗಂಟೆಗೆ ಸೋಮಪ್ಪ ಕೆರೆ ಆವರಣದಲ್ಲಿನ ಸೋಮಪ್ಪ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 7 ಗಂಟೆಗೆ ಸೋಮಪ್ಪ ಕೆರೆಯಲ್ಲಿ ತುಂಗಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಭಕ್ತಿಭಾವದೊಂದಿಗೆ ಉತ್ಸವಕ್ಕೆ ವಿಶೇಷ ಶೋಭೆ ತರಲಿದೆ. ಸಂಜೆ 8 ಗಂಟೆಗೆ ಕಂಪ್ಲಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಫೆ.12ರ ಕಾರ್ಯಕ್ರಮಗಳು: ಇದೇ ಫೆ.12ರಂದು ಸಕ್ಕರೆ ಕಾರ್ಖಾನೆ ಸಮೀಪದ ಗಂಡುಗಲಿ ಕುಮಾರ ರಾಮನ ವೇದಿಕೆಯಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೂ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 6 ಗಂಟೆಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರಿಂದ ವೇದಿಕೆ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.
ಸಂಜೆ 7 ಗಂಟೆಯಿಂದ ಸರಿಗಮಪ ಖ್ಯಾತಿಯ ಗಾಯಕ ಹಾಗೂ ಬಿಗ್ ಬಾಸ್ ವಿಜೇತ ಹನುಮಂತ, ಸರಿಗಮಪ ಖ್ಯಾತಿಯ ಗಾಯಕ ಬಾಳು ಬೆಳಗುಂದಿ ಹಾಗೂ ಕಾಮಿಡಿ ಕಿಲಾಡಿ ಶೋ ಖ್ಯಾತಿಯ ಹಾಸ್ಯ ಕಲಾವಿದರಿಂದ ಮನೋರಂಜನ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 9 ಗಂಟೆಗೆ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ಅವರ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಯುವಜನರನ್ನು ಮಂತ್ರಮುಗ್ಧಗೊಳಿಸುವ ನಿರೀಕ್ಷೆಯಿದೆ. ರಾತ್ರಿ 11 ಗಂಟೆಗೆ ಬಾಣ ಬಿರುಸು ಪ್ರದರ್ಶನ ಕಾರ್ಯಕ್ರಮ ಜರುಗಲಿದ್ದು, ಆಕಾಶವಿಡೀ ಬೆಳಗಲಿದೆ. ರಾತ್ರಿ 12 ಗಂಟೆಯಿಂದ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯಲಿವೆ.
ಜಗಮಗಿಸುತ್ತಿರುವ ಕಂಪ್ಲಿ: ಉತ್ಸವದ ಹಿನ್ನೆಲೆಯಲ್ಲಿ ಕಂಪ್ಲಿ ಪಟ್ಟಣ ಸಂಪೂರ್ಣವಾಗಿ ಜಗಮಗಿಸುತ್ತಿದೆ. ಹೊಸಪೇಟೆ ಬೈಪಾಸ್ ರಸ್ತೆ, ಕುರುಗೋಡು ರಸ್ತೆ, ಬಳ್ಳಾರಿ ರಸ್ತೆ, ಸಿರುಗುಪ್ಪ ರಸ್ತೆ, ಗಂಗಾವತಿ ರಸ್ತೆ, ಸೋಮಪ್ಪ ಕೆರೆ ಆವರಣ, ಪ್ರಮುಖ ದೇವಸ್ಥಾನಗಳು, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಇಡೀ ಪಟ್ಟಣ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಉತ್ಸವದ ಸಂಭ್ರಮ ಮನೆ ಮಾಡಿದೆ.ಇತಿಹಾಸ, ಸಂಸ್ಕೃತಿ ಹಾಗೂ ವೈಭವದ ಸಂಗಮವಾಗಿರುವ ಕಂಪ್ಲಿ ಉತ್ಸವಕ್ಕೆ ಜನಸಾಮಾನ್ಯರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಪಟ್ಟಣವು ಎರಡು ದಿನಗಳ ಕಾಲ ಸಂಭ್ರಮದ ಕೇಂದ್ರಬಿಂದುವಾಗಿ ಪರಿಣಮಿಸಿದೆ.