ಸಾರಾಂಶ
ಕಾರ್ಕಳ : ಈಗಿರುವ ಪರಶುರಾಮ ಮೂರ್ತಿ ಇದ್ದ ಹಾಗೆಯೇ ಇರಲಿ. ನೈಜ ಸ್ಥಿತಿ ಎಲ್ಲರಿಗೂ ತೋರಿಸಿ, ಟೂರಿಸಂ ಜೊತೆ ಪರಶುರಾಮ ಮೂರ್ತಿಯನ್ನು ತೋರಿಸಿ ಬಿಜೆಪಿ ನಾಯಕರ ಸಾಧನೆಯನ್ನು ಎಲ್ಲರಿಗೂ ತಿಳಿಸಿ. ಮುಂದಿನ ಚುನಾವಣೆಯನ್ನು ಪರಶುರಾಮ ಥೀಮ್ ಪಾರ್ಕ್ ವಿಷಯದಲ್ಲೇ ಎದುರಿಸಿ ಗೆಲ್ಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾರ್ಕಳ ಗಾಂಧಿ ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನೆಲೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ಆಪರೇಷನ್ ಕಮಲದ ಸಂದರ್ಭದಲ್ಲಿ ಬಿಜೆಪಿ ನಾಯಕರು ರಾಜಕೀಯವನ್ನೇ ಸಮಾಧಿ ಮಾಡಲು ಹೊರಟಿದ್ದಾರೆ ಎಂದು ಬಗ್ಗೆ ಹೇಳಿದ್ದೆ, ಈಗ ಆ ಮಾತು ನಿಜವಾಗಿದೆ. ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಅವರೇ ತಮ್ಮ ಪಕ್ಷದ ಆಂತರಿಕ ಜಗಳದಿಂದ ರಾಜಕೀಯ ಸಮಾಧಿಯಾಗುವ ಬಗ್ಗೆ ಮಾತಾಡುತ್ತಿದ್ದಾರೆ. ನಾನು ಸದನದಲ್ಲೇ ಎಲ್ಲಾ ಬಿಜೆಪಿ ಅಸಮಾಧಾನಿತ ಶಾಸಕರ ಪಟ್ಟಿಯನ್ನು ಓದುವೆ. ಬೇರೆ ಪಕ್ಷದ ಸುದ್ದಿ ನಿಮಗೇಕೆ ಬಿಜೆಪಿ ಪಕ್ಷವನ್ನು ಕುಟುಕಿದರು.
ಗೆದ್ದಿರುವ ಹಾಗೂ ಸೋತ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳ ಸಭೆ ಈಗಾಗಲೇ ನಡೆದಿದ್ದು, ಮಾ. 23ರಿಂದ ಏ.1ರ ವರೆಗೆ ವಿಮರ್ಶೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ಸಭೆಗಳನ್ನು ರಾಜ್ಯಾದ್ಯಂತ ನಡೆಸಿ ಪಕ್ಷವನ್ನು ತಳ ಮಟ್ಟದಲ್ಲಿ ಬಲಪಡಿಸುವ ಕಾರ್ಯ ನಡೆಯಲಿದೆ ಎಂದರು.
ಸುನಿಲ್ ಕುಮಾರ್ ಕರಾವಳಿ ಹಿಂದು ಭದ್ರಕೋಟೆಗೆ ಡಿಕೆಶಿ ಅವರಿಗೆ ಸುಸ್ವಾಗತ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಮಾತನಾಡಿದ ಅವರು, ಸುನಿಲ್ ಕುಮಾರ್ ಅವರೇ ಬಿಜೆಪಿ ಪಕ್ಷದ ಕಾರ್ಯದರ್ಶಿ ಹುದ್ದೆಗೆ ಯಾಕೆ ರಾಜಿನಾಮೆ ಕೊಟ್ಟಿರಿ? ಎಂದು ಪ್ರಶ್ನಿಸಿದರು.
ಸನ್ಮಾನ ಸ್ವೀಕರಿಸಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿದರು. ಸುಧೀರ್ ಮರೋಳಿ ಮಾತನಾಡಿದರು.
ಸಹಕಾರಿ ಧುರೀಣ ಎಂ.ಎನ್. ರಾಜೇಂದ್ರ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಮುಖಂಡರಾದ ರಮಾನಾಥ ರೈ, ಮಿಥುನ್ ರೈ, ರಕ್ಷಿತ್ ಶಿವರಾಂ, ರಮೇಶ್ ಕಾಂಚನ್, ಜಿ.ಎ. ಬಾವ, ನೀರೆ ಕೃಷ್ಣ ಶೆಟ್ಟಿ, ಮಂಜುನಾಥ ಪೂಜಾರಿ, ಐವಾನ್ ಡಿಸೋಜ, ಅಭಯಚಂದ್ರ ಜೈನ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ವಿನಯ ಕುಮಾರ್ ಸೊರಕೆ, ಸುರೇಂದ್ರ ಶೆಟ್ಟಿ, ನವೀನ್, ಕಿರಣ್ ಹೆಗ್ಡೆ, ಅಶ್ವಿನ್ ರೈ, ಬಿಪಿನ್ ಚಂದ್ರಪಾಲ್, ಸೋಮನಾಥ, ಪದ್ಮರಾಜ್, ರಮೇಶ್ ಕಾಂಚನ್, ಕಾರ್ಕಳ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅಜಿತ್ ಹೆಗ್ಡೆ, ಹೆಬ್ರಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಂಕರ ಸೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ಸೇರಿದಂತೆ ಇತರ ಕಾಂಗ್ರೆಸ್ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಅಶೋಕ ಕೊಡವೂರ್ ಸ್ವಾಗತಿಸಿದರು. ಮುನಿಯಾಲು ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿಲ್ ರೈ ನಿರೂಪಿಸಿದರು.