ಎರಡು ರೀತಿಯ ಅನುಮತಿ ಪತ್ರಗಳಿಂದ ಗೊಂದಲ ಸೃಷ್ಟಿ...!

| Published : Jan 29 2024, 01:32 AM IST

ಸಾರಾಂಶ

ಕೆರಗೋಡು ಹನುಮ ಧ್ವಜ ಹಾರಾಟಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಎರಡೆರಡು ರೀತಿಯ ಪತ್ರಗಳು ಗೊಂದಲ ಸೃಷ್ಟಿಸಿರುವುದಾಗಿ ಹೇಳಿವೆ. ಧ್ವಜ ತೆರವು ಸಮರ್ಥಿಸಿಕೊಳ್ಳುವ ಭರದಲ್ಲಿ ಮಂಡ್ಯ ಜಿಲ್ಲಾಡಳಿತ ಕೂಡ ಎಡವಟ್ಟು ಮಾಡಿ ಇಕ್ಕಟ್ಟಿಗೆ ಸಿಲುಕಿದೆ. ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜ ಹಾಗೂ ಕನ್ನಡ ಧ್ವಜ ಮಾತ್ರ ಹಾರಿಸುವಂತೆ ಅನುಮತಿ ನೀಡಿರುವ ಪತ್ರದ ಜೊತೆಗೆ ಕೆರಗೋಡು ಗ್ರಾಪಂ ನೀಡಿರುವ ಅನುಮತಿ ಪತ್ರವನ್ನೂ ಬಿಡುಗಡೆ ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಕೆರಗೋಡು ಹನುಮ ಧ್ವಜ ಹಾರಾಟಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಎರಡೆರಡು ರೀತಿಯ ಪತ್ರಗಳು ಗೊಂದಲ ಸೃಷ್ಟಿಸಿರುವುದಾಗಿ ಹೇಳಿವೆ. ಧ್ವಜ ತೆರವು ಸಮರ್ಥಿಸಿಕೊಳ್ಳುವ ಭರದಲ್ಲಿ ಮಂಡ್ಯ ಜಿಲ್ಲಾಡಳಿತ ಕೂಡ ಎಡವಟ್ಟು ಮಾಡಿ ಇಕ್ಕಟ್ಟಿಗೆ ಸಿಲುಕಿದೆ.

ವಿವಾದ ಹೆಚ್ಚಾಗುತ್ತಿದ್ದಂತೆ ಸಮರ್ಥನೆ ಮಾಡಿಕೊಳ್ಳಲು ಮುಂದಾದ ಜಿಲ್ಲಾಡಳಿತ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜ ಹಾಗೂ ಕನ್ನಡ ಧ್ವಜ ಮಾತ್ರ ಹಾರಿಸುವಂತೆ ಅನುಮತಿ ನೀಡಿರುವ ಪತ್ರದ ಜೊತೆಗೆ ಕೆರಗೋಡು ಗ್ರಾಪಂ ನೀಡಿರುವ ಅನುಮತಿ ಪತ್ರವನ್ನೂ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲ ತಾಣದಲ್ಲಿ ಎರಡೆರಡು ಅನುಮತಿ ಪತ್ರ ಬಿಡುಗಡೆ ಮಾಡಿ ಗೊಂದಲ ಸೃಷ್ಟಿಸಿದೆ. ಒಂದು ಪತ್ರಕ್ಕೆ ಸೀಲ್ ಹಾಕಿದ್ದರೆ, ಮತ್ತೊಂದು ಪತ್ರಕ್ಕಿಲ್ಲ ಪಂಚಾಯ್ತಿ ಸೀಲ್ ಇಲ್ಲದಿರುವುದು ಕಂಡುಬಂದಿದೆ.

ಪಂಚಾಯ್ತಿ ಸೀಲ್ ಇರುವ ಪತ್ರದಲ್ಲಿ 19ನೇ ತಾರೀಖು ಎಂದು ಉಲ್ಲೇಖಿಸಿದ್ದರೆ, ಸೀಲು ಇಲ್ಲದ ಪತ್ರದಲ್ಲಿ 18ನೇ ತಾರೀಖು ಎಂದು ನಮೂದಿಸಲಾಗಿದೆ. ಎರಡೂ ಪತ್ರದಲ್ಲೂ ಪತ್ರ ನಮೂದಿಸದೇ ಅನುಮತಿ ಪತ್ರ ಹೊರಡಿಸಿರುವುದು ಅನುಮಾನಗಳಿಗೂ ಕಾರಣವಾಗಿದೆ.

ನಕಲಿ ಪತ್ರ ಸೃಷ್ಟಿ ಆರೋಪ:

ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಬಾವುಟ ಮಾತ್ರ ಹಾರಿಸಲು ಅನುಮತಿ ನೀಡಿ ಬಿಡುಗಡೆ ಮಾಡಿರುವ ಪತ್ರವೇ ನಕಲಿ ಎಂದ ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಧ್ವಜ ತೆರವು ಮಾಡುವ ಉದ್ದೇಶದಿಂದ ರಾತ್ರೋರಾತ್ರಿ ನಕಲಿ ಅನುಮತಿ ಪತ್ರ ಸೃಷ್ಟಿಸಿದ್ದಾರೆ. ನಾವು ಕೊಟ್ಟಿದ್ದ ಅರ್ಜಿಯಲ್ಲಿ ಸಂದರ್ಭಾನುಸಾರ ಬಾವುಟ ಹಾರಿಸುತ್ತೇವೆ ಎಂದು ಉಲ್ಲೇಖಿಸಲಾಗಿತ್ತು.

ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರಧ್ವಜ. ಕನ್ನಡ ರಾಜ್ಯೋತ್ಸವ ತಿಂಗಳಿನಲ್ಲಿ ಕನ್ನಡ ಬಾವುಟ, ಹನುಮ ಜಯಂತಿಯಲ್ಲಿ ಹನುಮ ಧ್ವಜ ಹಾರಿಸುವುದಾಗಿ ಬರೆಯಲಾಗಿತ್ತು. ಈ ವಿಷಯ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಗೊಂಡು ಹನುಮ ಧ್ವಜ ಹಾರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಜೆಡಿಎಸ್‌, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರೇ ಹನುಮ ಧ್ವಜ ಇರಲಿ ಎಂದು ಮತ ಹಾಕಿದ್ದರು. ಬಹುಮತದೊಂದಿಗೆ ಹನುಮ ಧ್ವಜ ಹಾರಾಟಕ್ಕೆ ನಡಾವಳಿ ರಚಿಸಲಾಗಿತ್ತು. ಈಗ ಏಕಾಏಕಿ ನಕಲಿ ಅನುಮತಿ ಪತ್ರ ಸೃಷ್ಟಿ ಮಾಡಿ ಹನುಮ ಧ್ವಜ ತೆರವು ಮಾಡಿದ್ದಾರೆಂದು ಆರೋಪಿಸಿದ್ದಾರೆ.