ಸಾರಾಂಶ
ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಹಳೇ ಶಿಥಿಲಗೊಂಡ ವಿಎಲ್‌ಡಬ್ಲ್ಯೂಕಟ್ಟಡದ ಜಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಕುರಿತಂತೆ ಗ್ರಾಮದ ಕುರುಬ ಮತ್ತು ನಾಯಕ ಸಮಾಜದ ಬಂಧುಗಳಲ್ಲಿ ಅಸಮಧಾನ ಮೂಡಿದ ಬಗ್ಗೆ ಡಿವೈಎಸ್ಪಿ ಕಚೇರಿಯಲ್ಲಿ ಎರಡೂ ಸಮುದಾಯದ ಮುಖಂಡರೊಂದಿಗೆ ಡಿವೈಎಸ್ಪಿ ಟಿ.ಬಿ. ರಾಜಣ್ಣ ಮತ್ತು ತಹಸೀಲ್ದಾರ್ ರೇಹಾನ್‌ಪಾಷ ಸಮ್ಮುಖದಲ್ಲಿ ಸುಧೀರ್ಘ ಚರ್ಚೆ ನಡೆಯಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಹಳೇ ಶಿಥಿಲಗೊಂಡ ವಿಎಲ್‌ಡಬ್ಲ್ಯೂಕಟ್ಟಡದ ಜಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಕುರಿತಂತೆ ಗ್ರಾಮದ ಕುರುಬ ಮತ್ತು ನಾಯಕ ಸಮಾಜದ ಬಂಧುಗಳಲ್ಲಿ ಅಸಮಧಾನ ಮೂಡಿದ ಬಗ್ಗೆ ಡಿವೈಎಸ್ಪಿ ಕಚೇರಿಯಲ್ಲಿ ಎರಡೂ ಸಮುದಾಯದ ಮುಖಂಡರೊಂದಿಗೆ ಡಿವೈಎಸ್ಪಿ ಟಿ.ಬಿ. ರಾಜಣ್ಣ ಮತ್ತು ತಹಸೀಲ್ದಾರ್ ರೇಹಾನ್‌ಪಾಷ ಸಮ್ಮುಖದಲ್ಲಿ ಸುಧೀರ್ಘ ಚರ್ಚೆ ನಡೆಯಿತು.ಕುರುಬ ಸಮಾಜದ ಪರವಾಗಿ ಮಾತನಾಡಿದ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಸದರಿ ಜಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಕುರಿತಂತೆ ಈಗಾಗಲೇ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಒಪ್ಪಿಗೆ ಸೂಚಿಸಿವೆ. ಗ್ರಾಮದಲ್ಲಿದ್ದ ಹಳೇ ವಿಎಲ್‌ಡಬ್ಲ್ಯೂ ಕ್ವಾಟ್ರಸ್ ಶಿಥಿಲಗೊಂಡು ಬಿದ್ದು ಹೋಗಿದೆ. ಆ ಜಾಗದಲ್ಲೇ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೋರಿದ್ದೇವೆ. ಜತೆಯಲ್ಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ವಾಲ್ಮೀಕಿ ಸಮುದಾಯದ ಪರವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಯಮ್ಮ, ಸದಸ್ಯೆ ಬೋರಯ್ಯ, ಕರಿಯಮ್ಮ, ಚಂದ್ರಣ್ಣ, ಯರಗುಂಟಪ್ಪ ಮುಂತಾದವರು ವೀರಸಂಗೊಳ್ಳಿರಾಯಣ್ಣ ಪ್ರತಿಮೆ ಸ್ಥಾಪನೆಗೆ ನಮ್ಮದು ಯಾವುದೇ ತಕರಾರು ಇಲ್ಲ. ಆದರೆ, ಕೆಲವೇ ಅಡಿಗಳ ದೂರದಲ್ಲಿ ವಾಲ್ಮೀಕಿಯವರ ಮೂರ್ತಿ ಇದ್ದು, ಮುಖ್ಯ ರಸ್ತೆ ಮತ್ತು ಸಮುದಾಯದ ಹಟ್ಟಿಯಲ್ಲಿ ಪ್ರತಿಮೆ ನಿರ್ಮಿಸಿಕೊಳ್ಳಲು ನಮ್ಮದು ಯಾವುದೇ ಅಭ್ಯಂತರವಿಲ್ಲವೆಂದು ತಿಳಿಸಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿದ ತಹಸೀಲ್ದಾರ್ ರೇಹಾನ್‌ಪಾಷ, ಡಿವೈಎಸ್ಪಿ ಟಿ.ಬಿ. ರಾಜಣ್ಣ, ಎರಡೂ ಸಮುದಾಯದ ಮುಖಂಡರೊಂದಿಗೆ ಸೌಹಾರ್ದಿತವಾಗಿ ಚರ್ಚೆ ನಡೆಸಲಾಗಿದೆ. ಈಗಿರುವ ಸ್ಥಿತಿಯನ್ನೇ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದೆ. ಮತ್ತೊಮ್ಮೆ ಎರಡೂ ಸಮುದಾಯಗಳ ಮುಖಂಡರನ್ನು ಚರ್ಚಿಸಿ, ಸ್ಥಳಕ್ಕೆ ಭೇಟಿ ನೀಡಿ ತೀರ್ಮಾನಿಸಲಾಗುವುದು ಎಂದರು.