ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಕುರಿತು ಜಿಲ್ಲಾಡಳಿತ, ತಾಲೂಕಾಡಳಿತಗಳು ಕೇವಲ 24 ಗಂಟೆಯಲ್ಲಿ ಎರಡೆರಡು ಆದೇಶ ಹೊರಡಿಸುವುದರ ಮುಖಾಂತರ ಗೊಂದಲ ಉಂಟು ಮಾಡಿದ್ದು, ಇದರಿಂದಾಗಿ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳವರು ರಾಜ್ಯೋತ್ಸವ ಆಚರಣೆಯ ವಿಚಾರದಲ್ಲಿ ಫಜೀತಿ ಅನುಭವಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಕುರಿತು ಜಿಲ್ಲಾಡಳಿತ, ತಾಲೂಕಾಡಳಿತಗಳು ಕೇವಲ 24 ಗಂಟೆಯಲ್ಲಿ ಎರಡೆರಡು ಆದೇಶ ಹೊರಡಿಸುವುದರ ಮುಖಾಂತರ ಗೊಂದಲ ಉಂಟು ಮಾಡಿದ್ದು, ಇದರಿಂದಾಗಿ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳವರು ರಾಜ್ಯೋತ್ಸವ ಆಚರಣೆಯ ವಿಚಾರದಲ್ಲಿ ಫಜೀತಿ ಅನುಭವಿಸುವಂತಾಗಿದೆ.ಪ್ರತಿ ವರ್ಷದಂತೆ ನ.1ರಂದು ಕರ್ನಾಟಕ ರಾಜ್ಯೋತ್ಸವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ, ಅದೇ ರೀತಿ ಈ ಬಾರಿಯೂ ಆಚರಿಸುವ ವಿಚಾರವಾಗಿ ಜಿಲ್ಲಾಡಳಿತ, ವಿವಿಧ ತಾಲೂಕಾಡಳಿತಗಳು ಆದೇಶ ಹೊರಡಿಸುತ್ತಿದ್ದವು, ಅದೇ ರೀತಿ ಈ ಬಾರಿ ರಾಜ್ಯೋತ್ಸವ ಆಚರಣೆಯ ನಿಯಮಗಳ ವಿಚಾರದಲ್ಲಿ ಅ.30 ರಂದು ಒಂದು ಆದೇಶವನ್ನು ಹೊರಡಿಸಲಾಗಿತ್ತು, ಇದಾದ 24 ತಾಸಿನಲ್ಲಿ ಅಂದರೆ ಅ.31ರಂದು ಸಂಜೆ ನಿಯಮಗಳನ್ನು ಬದಲಿಸಿ, ಕಡ್ಡಾಯವೆಂದು ನಮೂದಿಸಿ ಆದೇಶ ನೀಡಿದ್ದು, ಇದರಿಂದಾಗಿ ಯಾವುದೇ ರೀತಿಯ ಪೂರ್ವ ಸಿದ್ಧತೆಗಳು ನಡೆಸದ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳ ಅಧಿಕಾರಿ,ಸಿಬ್ಬಂದಿ ಫಜೀತಿ ಎದುರಿಸುವಂತಾಗಿದೆ.
ಎರಡೆರಡು ಆದೇಶ: ಅ.30ರಂದು ಸಿರವಾರ ತಹಸೀಲ್ದಾರ್ ಕಚೇರಿಯು ಹೊರಡಿಸಿದ ಆದೇಶದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲು ತಿಳಿಸಲಾಗಿತ್ತು. ಆದರೆ ಅ.31ರ ಸಂಜೆ ಹೊರಡಿಸಿದ ಆದೇಶದಲ್ಲಿ ಅ. 30ರ ಆದೇಶದಲ್ಲಿ ತಿಳಿಸಲಾಗಿದ್ದ ಧ್ವಜಾರೋಹಣ ನಿಯಮವನ್ನು ಮಾರ್ಪಡಿಸಿ/ಹಿಂಪಡೆದು, ತಾಲೂಕಿನ ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಗೌರವ ಸಮರ್ಪಿಸಲು ತಿಳಿಸಿದ್ದಾರೆ.ಎಲ್ಲಿ ಗೊಂದಲ, ಯಾಕೆ ಫಜೀತಿ: ಕೆಲ ತಾಲೂಕುಗಳಲ್ಲಿ ಹೊರಡಿಸಿದ ಆದೇಶದಲ್ಲಿ ಧ್ವಜಾರೋಹಣ ನೆರವೇರಿಸಲು ತಿಳಿಸಿದ್ದು, ಇನ್ನು ಕೆಲ ತಾಲೂಕಾಡಳಿತಗಳು ಕಡ್ಡಾಯವಾಗಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ, ಅದು ಸಹ ಸಂಜೆ ಸಮಯದಲ್ಲಿ ಆದೇಶ ನೀಡಿದ್ದರಿಂದ ಸರ್ಕಾರಿ ಕಚೇರಿ, ಶಾಲಾ-ಕಾಲೇಜಿನಲ್ಲಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲು ಸಮಯವಿಲ್ಲದಂತಾಗಿದೆ.
ಅಷ್ಟೇ ಅಲ್ಲದೇ ಶಿಷ್ಠಾಚಾರದ ರೀತ್ಯ ಧ್ವಜಾರೋಹಣ ನೆರವೇರಿಸಬೇಕಾಗಿದ್ದರಿಂದ ನ.1ರಂದು ಭಾನುವಾರ ಆಗಿರುವ ಕಾರಣಕ್ಕೆ ಆಯಾ ಶಾಲಾಗಳ ಎಸ್ಡಿಎಂಸಿ ಅಧ್ಯಕ್ಷರು, ಕಾಲೇಜುಗಳಲ್ಲಿ ಆಡಳಿತ ಮಂಡಳಿಯವರು, ಶಿಕ್ಷಕರು, ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರಾಗುವುದು ಕಷ್ಟಸಾಧ್ಯವಾಗಿದ್ದು, ಇಷ್ಟೇ ಅಲ್ಲದೇ ಪೂರ್ವ ಸಿದ್ಧತೆಗೆ ಸಮಯನೂ ನೀಡದ ಆಡಳಿತ ವರ್ಗದ ವಿರುದ್ಧ ಆಚರಣೆ ಮಾಡುವವರು ಬೇಸರಗೊಳ್ಳುವಂತಾಗಿದೆ.