ಕುರುಬ ಸಮಾಜ ಅಭಿವೃದ್ಧಿ ವೇದಿಕೆ ವತಿಯಿಂದ ರಾಜ್ಯಸಭೆಗೆ ನೂತನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಮಾ. ನಾಗರಾಜ ಅವರ ರಾಜ್ಯಮಟ್ಟದ ಅಭಿನಂದನಾ ಸಮಾರಂಭ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಜೂ. ೨೮ರಂದು ಬೆಳಗ್ಗೆ ೧೧ಕ್ಕೆ ನಡೆಯಲಿದೆ.

ಹುಬ್ಬಳ್ಳಿ:

ಕುರುಬ ಸಮಾಜ ಅಭಿವೃದ್ಧಿ ವೇದಿಕೆ ವತಿಯಿಂದ ರಾಜ್ಯಸಭೆಗೆ ನೂತನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಮಾ. ನಾಗರಾಜ ಅವರ ರಾಜ್ಯಮಟ್ಟದ ಅಭಿನಂದನಾ ಸಮಾರಂಭ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಜೂ. ೨೮ರಂದು ಬೆಳಗ್ಗೆ ೧೧ಕ್ಕೆ ನಡೆಯಲಿದೆ ಎಂದು ಸಂಚಾಲಕ ರವೀಂದ್ರ ದಂಡಿನ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿನಂದನಾ ಸಮಾರಂಭವು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಮಾ. ನಾಗರಾಜ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸ್ಥಳೀಯ ಶಾಸಕರು ಮತ್ತು ಮುಖಂಡರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಸ್ವಾತಂತ್ರ್ಯ ದೊರೆತು ಇಷ್ಟು ವರ್ಷ ಕಳೆದರೂ ಕುರುಬ ಸಮಾಜದಿಂದ ರಾಜ್ಯಸಭೆಗೆ ಆಯ್ಕೆಯಾದವರ ಸಂಖ್ಯೆ ಕಡಿಮೆ. ಈ ವರೆಗೆ ಬರೀ ಇಬ್ಬರೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಮಾ. ನಾಗರಾಜ ಮೂರನೆಯವರು ಎಂದ ಅವರು, ಹಿಂದುಳಿದ ವರ್ಗಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬ ಸಮಾಜ ಸಂದರ್ಭಕ್ಕೆ ತಕ್ಕಂತೆ ಸಂಘಟನಾತ್ಮಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಿದೆ. ಈ ದಿಶೆಯಲ್ಲಿ ಬಿಜೆಪಿ ನಾಯಕರು ಮಾ. ನಾಗರಾಜ ಅವರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಅಖಂಡ ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ 3000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಮಕ್ಕಳಗಿರಿ, ಬೀರಪ್ಪ ಖಂಡೇಕರ್, ಪರಶುರಾಮ ದಿವಾನದ, ಸಿದ್ದಪ್ಪ ಮುರಗೋಡ, ದೇವರಾಜ ಕಂಬಳಿ, ಡಿ.ಟಿ. ಪಾಟೀಲ, ಎಚ್.ಡಿ. ಪಾಟೀಲ, ರಾಜೇಶ್ವರಿ ಸಾಲಗಟ್ಟಿ ಇದ್ದರು.