ಸಾರಾಂಶ
ಬೆಳಗಾವಿಯ ನೂತನ ಸಂಸದ ಜಗದೀಶ ಶೆಟ್ಟರ್ ಮತ್ತು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ಜು.12ರಂದು ರಾಮದುರ್ಗ ಬಿಜೆಪಿ ಮಂಡಲದಿಂದ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ರಾಮದುರ್ಗ
ಬೆಳಗಾವಿಯ ನೂತನ ಸಂಸದ ಜಗದೀಶ ಶೆಟ್ಟರ್ ಮತ್ತು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ಜು.12ರಂದು ರಾಮದುರ್ಗ ಬಿಜೆಪಿ ಮಂಡಲದಿಂದ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.ಪಟ್ಟಣದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ರಂದು ಸಂಜೆ 4ಕ್ಕೆ ಪಟ್ಟಣದ ಹೊರವಲಯದ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಅಬ್ಬರದ ನಡುವೆಯೂ ಜಗದೀಶ ಶೆಟ್ಟರ್ 1.80 ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಶೆಟ್ಟರ್‌ಗೆ ಮತ್ತು ಮೂರು ದಶಕಕ್ಕೂ ಅಧಿಕ ಕಾಲ ಕಾರ್ಯಾಧ್ಯಕ್ಷರಾಗಿ ಕೆಎಲ್‌ಇ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ ಪ್ರಭಾಕರ ಕೋರೆ ಹಾಗೂ ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿರುವ ಸುಭಾಷ ಪಾಟೀಲ ಅವರನ್ನು ರಾಮದುರ್ಗ ಬಿಜೆಪಿ ಮಂಡಲದ ಪರವಾಗಿ ಅಭಿನಂಧಿಸಲಾಗುವುದು ಎಂದು ಹೇಳಿದರು.ಅಭಿವೃದ್ಧಿ ಮರೆತ ಸರ್ಕಾರ:
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಭರಾಟೆಯಲ್ಲಿ ಅಭಿವೃದ್ಧಿ ಕಾರ್ಯ ಮರೆತಿದೆ. ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದರೂ ತಾಲೂಕಿನಲ್ಲಿ ಯಾವುದೇ ಹೊಸ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ. ಪಟ್ಟಣದ ಬೀದಿದೀಪಗಳು ಸರಿಯಾಗಿ ಉರಿಯುತ್ತಿಲ್ಲ, ಶಾಸಕರು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು. ರಾಜ್ಯದಲ್ಲಿ ಡೆಂಘೀ ವ್ಯಾಪಕವಾಗುತ್ತಿದ್ದು, ತಾಲೂಕಿನ ಜನರ ಆರೋಗ್ಯದತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಕೊಪ್ಪದ, ಶ್ರೀ ಧನಲಕ್ಷ್ಮೀ ಶುಗರ್ಸ್ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಉಮೇಶ ಹಕಾಟಿ ಸೇರಿದಂತೆ ಹಲವರಿದ್ದರು.