ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯದಲ್ಲಿ ಆರಂಭಿಸಲು ಉದ್ದೇಶಿಸಿರುವ ಕೃಷಿ ವಿಶ್ವವಿದ್ಯಾಲಯದ ವಿಧೇಯಕಕ್ಕೆ ರಾಜ್ಯಪಾಲರಿಂದ ಅನುಮೋಧನೆ ದೊರಕಿಸುವಲ್ಲಿ ಯಶಸ್ವಿಯಾಗಿರುವ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಮೇ ಕೊನೆಯ ವಾರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿರುವುದಾಗಿ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.ಜಿಲ್ಲೆಯ ಸಮಗ್ರ ಕೃಷಿ ಅಭಿವೃದ್ಧಿಗೆ ಕೃಷಿ ವಿಶ್ವವಿದ್ಯಾಲಯ ಅತ್ಯಗತ್ಯವಾಗಿದ್ದು, ಅದನ್ನು ಮಂಜೂರು ಮಾಡಿಸುವಲ್ಲಿ ಏಕಾಂಗಿ ಹೋರಾಟ ನಡೆಸಿ, ೨೫ ಕೋಟಿ ರು. ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಚಿವರ ಈ ಕಾರ್ಯವನ್ನು ಪಕ್ಷಾತೀತವಾಗಿ ಪ್ರತಿಯೊಬ್ಬರೂ ಅಭಿನಂದಿಸಲೇಬೇಕು. ಈ ವಿಶ್ವವಿದ್ಯಾಲಯದಿಂದ ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆಗಳ ವ್ಯಾಪ್ತಿಯ ರೈತರ ಸಮಗ್ರ ಕೃಷಿ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಅದರ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ಕೃಷಿ ಕಾಲೇಜುಗಳನ್ನು ಸೇರಿಸುವುದಕ್ಕೆ ಸಚಿವರು ಶ್ರಮಪಟ್ಟಿದ್ದಾರೆ. ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ಹಾಸನ ಜಿಲ್ಲೆಯ ಕೃಷಿ ಕಾಲೇಜುಗಳನ್ನು ಮಂಡ್ಯ ಕೃಷಿ ವಿವಿಗೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ನಿಲುವು ಸರಿಯಲ್ಲ. ಅಭಿವೃದ್ಧಿಗೆ ಎಲ್ಲಾ ಪಕ್ಷಗಳ ರಾಜಕಾರಣಿಗಳು ಕೈ ಜೋಡಿಸಬೇಕು. ಇದರಲ್ಲಿ ಯಾವುದೇ ಪಕ್ಷಭೇದ ಮಾಡಬಾರದು ಎಂದು ಸಲಹೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೆಆರ್‌ಎಸ್‌ನಲ್ಲಿ ಆರಂಭಿಸಲು ಉದ್ದೇಶಿಸಿರುವ ಅಮ್ಯೂಸ್‌ಮೆಂಟ್ ಪಾರ್ಕಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬೇಕ್ರಿ ರಮೇಶ್, ಅಮ್ಯೂಸ್‌ಮೆಂಟ್ ಪಾರ್ಕ್‌ನಿಂದ ಅಣೆಕಟ್ಟೆಗೆ ಧಕ್ಕೆಯಾಗಲಿದೆ. ಅಣೆಕಟ್ಟೆ ಇರುವ ಕಡೆ ಹೊಟೇಲ್, ರೆಸ್ಟೋರೆಂಟ್ ಮಾಡಲು ನಿಯಮದಲ್ಲಿ ಅವಕಾಶವಿಲ್ಲ. ವೈಜ್ಞಾನಿಕ ದೃಷ್ಟಿಯಿಂದ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಯನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಪ್ರವಾಸೋಧ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಸಾಕಷ್ಟು ಸ್ಥಳಗಳಿವೆ. ಅಲ್ಲಿ ಎಲ್ಲಿ ಬೇಕಾದರೂ ಅಮ್ಯೂಸ್‌ಮೆಂಟ್ ಪಾರ್ಕಿಗೆ ಅವಕಾಶ ಕಲ್ಪಿಸಿಕೊಳ್ಳಲಿ. ಕೃಷಿಗೆ ಆಧಾರವಾಗಿರುವ ಕೆಆರ್‌ಎಸ್ ಅಣೆಕಟ್ಟೆ ಬಳಿಯೇ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡುವ ಹಠಕ್ಕೆ ಬಿದ್ದಿರುವುದು ಏಕೆ ಎಂದು ಪ್ರಶ್ನಿಸಿದರು.
ಬೆಂಗಳೂರಿಗೆ ಈಗಾಗಲೇ ಐದು ಹಂತಗಳಲ್ಲಿ ಕುಡಿಯುವ ನೀರು ಹರಿದುಹೋಗುತ್ತಿದೆ. ಆರನೇ ಹಂತದ ಯೋಜನೆಗೆ ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದ್ದು, ಇದರಿಂದ ಕೃಷಿಗೆ ನೀರಿನ ಅಭಾವ ಎದುರಾಗುವುದು ನಿಶ್ಚಿತವಾಗಿದೆ. ಕೃಷಿ ಉದ್ದೇಶಕ್ಕಾಗಿ ಅಣೆಕಟ್ಟೆಯನ್ನು ನಿರ್ಮಿಸಲಾಗಿದ್ದು, ಕುಡಿಯುವ ನೀರಿನ ಸಲುವಾಗಿ ಹೆಚ್ಚು ನೀರನ್ನು ಬೆಂಗಳೂರಿಗೆ ಹರಿಸಿಕೊಂಡರೆ ರೈತರ ಭವಿಷ್ಯದ ಗತಿ ಏನು, ಸರ್ಕಾರ ಈ ಬಗ್ಗೆ ಆಲೋಚಿಸದೆ ಅವೈಜ್ಞಾನಿಕವಾಗಿ ನೀರನ್ನು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ, ದಸಂಸದ ಮೋಹನ್ ಚಿಕ್ಕಮಂಡ್ಯ, ಕರವೇ ಡಿ.ಅಶೋಕ್, ಕದಂಬ ಸೈನ್ಯದ ಸಲ್ಮಾನ್, ಹೊಳಲು ಶಿವಣ್ಣ, ಕಲ್ಲೇಶ್, ರಾಮು ಇತರರು ಗೋಷ್ಠಿಯಲ್ಲಿದ್ದರು.