ಸಾರಾಂಶ
ಕಾರವಾರ:
ಜಿಲ್ಲೆಯಲ್ಲಿ ಲಿಂಗಾನುಪಾತ ಹೆಚ್ಚಿಸಲು ಹೆಣ್ಣು ಹೆತ್ತವರನ್ನು ಅಭಿನಂದಿಸುವ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸನ್ಮಾನಿಸಿ, ವಿಶೇಷ ಗೌರವ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿ ವಿವಿಧ ಯೋಜನೆಗಳ ಪ್ರಗತಿ ಕುರಿತ ತ್ರೈ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಭ್ರೂಣ ಹತ್ಯೆ ತಡೆಯುವ ಸಲುವಾಗಿ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಣ್ಣು ಆರ್ಥಿಕವಾಗಿ ಹೊರೆಯಾಗುತ್ತಾರೆ ಎಂಬ ಭಾವನೆಯಿಂದ ಭ್ರೂಣ ಹತ್ಯೆ ಪ್ರಕರಣ ನಡೆಯುತ್ತಿವೆ.
ಹೆಣ್ಣು ಎಲ್ಲ ಕ್ಷೇತ್ರದಲ್ಲಿ ಪುರುಷರಂತೆ ಸಮಾನವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ತಾನೇ ದುಡಿದು ಕುಟುಂಬದ ಸಂಪೂರ್ಣ ಆರ್ಥಿಕ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಆದ್ದರಿಂದ ಹೆಣ್ಣು ಮಕ್ಕಳ ಜನನವನ್ನು ಪೋಷಕರು ಸಂಭ್ರಮಿಸುವಂತೆ ಮಾಡಬೇಕು ಎಂದರು.ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಬರುವ ರೋಗಿಗಳ ಕುರಿತು ಸಂಪೂರ್ಣ ವಿವರವನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ದಾಖಲಿಸಬೇಕು.
ತಮ್ಮ ಕೇಂದ್ರಗಳಲ್ಲಿ ಆರೋಗ್ಯ ಸಂಬಂಧಿತ ಸ್ಕ್ಯಾನಿಂಗ್ ಹೊರತುಪಡಿಸಿ, ಭ್ರೂಣ ಲಿಂಗ ಪತ್ತೆ ಮಾಡಬಾರದು. ಈ ಬಗ್ಗೆ ರೋಗಿಗಳಿಗೆ ಸ್ಪಷ್ಟವಾಗಿ ಕಾಣುವಂತೆ ಸೂಚನಾ ಫಲಕ ಹಾಗೂ ಭ್ರೂಣ ಲಿಂಗ ಪತ್ತೆ ಕುರಿತು ಶಿಕ್ಷೆಯ ಪ್ರಮಾಣ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾಣೆಯಾದ ಮಹಿಳೆ ಮತ್ತು ಮಕ್ಕಳು ಪತ್ತೆಗೆ ತಕ್ಷಣ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ಕಳೆದ 1 ವರ್ಷದಲ್ಲಿ ನಾಪತ್ತೆಯಾದ ಮತ್ತು ಪತ್ತೆಯಾದ ಮಹಿಳೆ ಮತ್ತು ಮಕ್ಕಳು ವಿವರ ಮತ್ತು ಪ್ರಸ್ತುತ ಅವರ ಸ್ಥಿತಿಗತಿ ಕುರಿತಂತೆ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಡಿಸಿ, ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ರಚಿಸಲಾಗಿರುವ ಸಮಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ನಿಯಮಿತವಾಗಿ ಸಭೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಅಂತಹ ಪ್ರಕರಣ ನಡೆಯುವಾಗ ಮತ್ತು ಈಗಾಗಲೇ ನಡೆದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಬಾಲ್ಯ ವಿವಾಹ ತಡೆ ಪ್ರಕರಣಗಳಲ್ಲಿ ಪುನಃ ವಿವಾಹ ಪ್ರಯತ್ನ ನಡೆಯದಂತೆ ತೀವ್ರ ನಿಗಾವಹಿಸಬೇಕು. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರೌಢಶಾಲೆಗಳಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್. ಕುಕನೂರು, ಪ್ರಸಕ್ತ ಸಾಲಿನಲ್ಲಿ ಈ ವರೆಗೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುವ 13 ಪ್ರಕರಣ ತಡೆದಿದ್ದು, ಈ ಬಗ್ಗೆ ಪೋಷಕರಿಗೆ ಸೂಕ್ತ ಅರಿವು ಮೂಡಿಸಲಾಗಿದೆ. ಈ ವರೆಗೆ ಯಾವುದೇ ಬಾಲ್ಯ ವಿವಾಹ ಪ್ರಕರಣ ನಡೆದಿಲ್ಲ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ಜಗದೀಶ್, ಡಿಎಚ್‌ಒ ಡಾ. ನೀರಜ್ ಬಿ.ವಿ., ಜಿಪಂ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.