ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.ಯಾದವಗಿರಿಯ ಚಾಮುಂಡಿ ಕ್ಲಬ್ ನಲ್ಲಿ ನಡೆದ ಅದ್ಧೂರಿ ಅಭಿನಂದನಾ ಸಮಾರಂಭದಲ್ಲಿ ಸುರಕ್ಷತಾ ಸಂಬಂಧಿತ ವಿಭಾಗಗಳಲ್ಲಿನ ಟ್ರ್ಯಾಕ್ (ಹಳಿ) ನಿರ್ವಾಹಕರು, ಸಂವಹನ ನಿರ್ವಾಹಕರು, ಪಾಯಿಂಟ್ಸ್ ಮನ್, ಪಾಯಿಂಟ್ಸ್ ವುಮನ್, ಲೋಕೋ ಪೈಲಟ್ ಗಳು, ರೈಲು ವ್ಯವಸ್ಥಾಪಕರು ಮತ್ತು ವಿವಿಧ ವಿಭಾಗಗಳ ಎಂಜಿನಿಯರ್ ಗಳಂತಹ 20 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶ್ಲಾಘನೀಯ ಸೇವೆಯನ್ನು ಸಲ್ಲಿಸಿರುವ 38 ಸಮರ್ಪಿತ ಸಿಬ್ಬಂದಿಯನ್ನು ಗೌರವಿಸಲಾಯಿತು.
ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಇದ್ದರು.ಅವರು ತಮ್ಮ ಭಾಷಣದಲ್ಲಿ, ರೈಲ್ವೆ ಸಂಘಟನೆಯ ಯಶಸ್ಸಿನಲ್ಲಿ ಕಾರ್ಮಿಕರ ಪ್ರಮುಖ ಪಾತ್ರದ ಬಗ್ಗೆ ತಿಳಿಸಿದರು. ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವೆ ಸೌಹಾರ್ಧಯುತ ಮತ್ತು ಸಹಯೋಗದ ವಾತಾವರಣ ಬೆಳೆಸುವ ಪ್ರಾಮುಖ್ಯತೆ ಬಗ್ಗೆ ಅವರು ಒತ್ತಿಹೇಳಿದರು. ಇದು ಅಭಿವೃದ್ಧಿ ಹೊಂದುತ್ತಿರುವ ಎಲ್ಲಾ ಸಂಸ್ಥೆಗಳ ಮೂಲಾಧಾರ ಎಂದು ಅವರು ವಿವರಿಸಿದರು.
ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವಿನ ಸಹ ಜೀವನದ ಸಂಬಂಧವನ್ನು ವಿವರಿಸುತ್ತ, ಶಿಲ್ಪಿ ಅಗರ್ವಾಲ್ ಅವರು ಪರಸ್ಪರ ಗೌರವ, ವಿಶ್ವಾಸ ಮತ್ತು ಸಹಕಾರಗಳು ಪರಿವರ್ತಕ ಶಕ್ತಿಯನ್ನು ನೀಡುತ್ತವೆ ಎಂದು ಹೇಳಿದರು.ಅವರು ಮೈಸೂರು ವಿಭಾಗದ ಸಿಬ್ಬಂದಿ ಪ್ರದರ್ಶಿಸಿದ ಸಮರ್ಪಣೆ ಮತ್ತು ಬದ್ಧತೆಯನ್ನು ಶ್ಲಾಘಿಸಿ, ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ಸಕಾರಾತ್ಮಕ ಕೆಲಸದ ಸಂಸ್ಕೃತಿ ಬೆಳೆಸಲು ಅವರು ನೀಡುವ ಪ್ರಯತ್ನಗಳೇ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಶಿಲ್ಪಿ ಅಗರ್ವಾಲ್ ಅವರು ರಾಷ್ಟ್ರೀಯ ಪ್ರಗತಿಯನ್ನು ಮುನ್ನಡೆಸುವಲ್ಲಿ ಸಿಬ್ಬಂದಿ ಪ್ರೇರಿತ, ಬೆಂಬಲಿತ ಮತ್ತು ಸಶಕ್ತ ಕಾರ್ಯಪಡೆಯ ಮಹತ್ವವನ್ನು ಪುನರುಚ್ಚರಿಸಿದರು. ವಿಭಾಗದೊಳಗೆ ವಿಶ್ವಾಸ ಮತ್ತು ಸೌಹಾರ್ಧತೆಯ ಬಾಂಧವ್ಯವನ್ನು ಪೋಷಿಸಲು ಮತ್ತು ಸಹಕಾರ ಹಾಗೂ ಏಕತೆಯ ಮನೋಭಾವವನ್ನು ಎತ್ತಿಹಿಡಿಯುವಂತೆ ಪ್ರತಿಜ್ಞೆ ಮಾಡಲು ಅವರು ಸಂಬಂಧಿಸಿದ ಎಲ್ಲರಿಗೂ ಕರೆ ನೀಡಿದರು.ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿನಾಯಕ ನಾಯಕ್, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ವಿಷ್ಣುಗೌಡ, ಗತಿ ಶಕ್ತಿ ಘಟಕದ ಮುಖ್ಯ ಯೋಜನಾ ವ್ಯವಸ್ಥಾಪಕ ಆನಂದ ಭಾರತಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಲೋಹಿತೇಶ್ವರ ಮತ್ತು ಇತರ ಶಾಖೆಗಳ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.