ಟೆಲಿಸ್ಕೋಪ್ ತಯಾರಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ

| Published : Oct 11 2025, 01:00 AM IST

ಸಾರಾಂಶ

ರಾಮನಗರ: ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಇಸ್ರೋ ಸಂಯುಕ್ತಾಶ್ರಯದಲ್ಲಿ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ನಲ್ಲಿ ನಡೆದ ನಾನು ವಿಜ್ಞಾನಿ-2025 ಎಂಬ ತರಬೇತಿ ಶಿಬಿರದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಟೆಲಿಸ್ಕೋಪ್(ದೂರದರ್ಶಕ) ತಯಾರಿಸಿ ಗಮನ ಸೆಳೆದಿದ್ದಾರೆ.

ರಾಮನಗರ: ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಇಸ್ರೋ ಸಂಯುಕ್ತಾಶ್ರಯದಲ್ಲಿ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ನಲ್ಲಿ ನಡೆದ ನಾನು ವಿಜ್ಞಾನಿ-2025 ಎಂಬ ತರಬೇತಿ ಶಿಬಿರದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಟೆಲಿಸ್ಕೋಪ್(ದೂರದರ್ಶಕ) ತಯಾರಿಸಿ ಗಮನ ಸೆಳೆದಿದ್ದಾರೆ.

ಈ ಕುರಿತು ರಾಮನಗರದ ಎಬಿಸಿಡಿ ನೃತ್ಯ ಶಾಲೆಯಲ್ಲಿ ಶುಕ್ರವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರೇಣುಕ ಪ್ರಸಾದ್ , ನಾನೂ ವಿಜ್ಞಾನಿ-2025 ಶಿಬಿರದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರು ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ವಿತರಿಸಿ ಅಭಿನಂದಿಸಿದ್ದಾರೆ ಎಂದರು.

ಇಸ್ರೋ ವಿಜ್ಞಾನಿ ಡಾ.ಎ.ಎಸ್.ಕಿರಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರದಲ್ಲಿ 30 ವಿಜ್ಞಾನಿಗಳು ಟೆಲಿಸ್ಕೋಪ್ ತಯಾರಿಕೆ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಶಿಬಿರದಲ್ಲಿ 160 ವಿದ್ಯಾರ್ಥಿಗಳು ಟೆಲಿಸ್ಕೋಪ್ ತಯಾರಿಸಿದ್ದಾರೆ. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯ ಬುಕ್ ಆಫ್ ರೆಕಾರ್ಡ್ ಹಾಗೂ ವಲ್ಡ್ರ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ವಿಜ್ಞಾನ ಮತ್ತು ಮೌಢ್ಯತೆ ನಡುವೆ ಇರುವ ಅಂತರದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ನಾನೂ ವಿಜ್ಞಾನಿ ಎಂಬ ಕಾರ್ಯಗಾರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಒಂಬತ್ತು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ರಾಮನಗರದ ಶಾಂತಿನಿಕೇತನ ಕಾಲೇಜಿನ ಆರ್. ಚಂದನ್ , ಬೆತೆಲ್ ಶಾಲೆಯ ಪೂರ್ವಿಕಾ, ಲೂರ್ದು ಪಬ್ಲಿಕ್ ಶಾಲೆಯ ಮಹಾಲಕ್ಷ್ಮಿ, ಶಿವಗಂಗಾ ಶಾಲೆಯ ವರುಣ್ ಗೌಡ, ಚನ್ನಪಟ್ಟಣ ಕಣ್ವ ಮಹರ್ಷಿ ಶಾಲೆಯ ಪೃಥ್ವಿ, ಹರಿಸಂದ್ರ ಸರ್ಕಾರಿ ಶಾಲೆಯ ತನುಶ್ರೀ, ಬಿಡದಿ ಜ್ಞಾನ ವಿಕಾಸ್ ಶಾಲೆಯ ದೀಪ್ತಿ, ರಾಮನಗರ ಸರ್ಕಾರಿ ಶಾಲೆಯ ಬಿಂದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಂದನ ಅವರು ಟೆಲಿಸ್ಕೋಪ್ ತಯಾರಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಇಂತಹ ಕಾರ್ಯಕ್ರಮಗಳಿಂದ ಬಾಹ್ಯಾಕಾಶ ಸಂಶೋಧನೆ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡುತ್ತದೆ. ಬಾಹ್ಯಾಕಾಶದ ಕುರಿತು ಇರುವ ಅಪನಂಭಿಕೆಗಳು ದೂರವಾಗುತ್ತವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೊಡುಗೆ ಅಪಾರವಾಗಿದೆ. ಈ ಹಿಂದೆ ಆರ್ಯಭಟ, ಭಾಸ್ಕರಾಚಾರ್ಯ, ಬ್ರಹ್ಮಗುಪ್ತ ಸೇರಿದಂತೆ ಅನೇಕ ಮಹನೀರಯ ಖಗೋಳ ಶಾಸ್ತ್ರ, ಭೌತಶಾಸ್ತ್ರ ಕ್ಷೇತ್ರದಲ್ಲಿ ತಮ್ಮದೆ ಆದ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ.

ಇಂದು ಪದಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರ ನೀಡುತ್ತಾರೆ ಎಂದು ರೇಣುಕ ಪ್ರಸಾದ್ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಟೆಲಿಸ್ಕೋಪ್ ತಯಾರಿಸಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಹಾಜರಿದ್ದರು.

--------------------------

10ಕೆಆರ್ ಎಂನ್ 4.ಜೆಪಿಜಿ

ರಾಮನಗರದ ಎಬಿಸಿಡಿ ನೃತ್ಯ ಶಾಲೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಟೆಲಿಸ್ಕೋಪ್ ತಯಾರಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

------------------------