ಹಿಂದುತ್ವದ ಪ್ರತಿಪಾದಕರು ಎಂದು ಹೇಳಿಕೊಳ್ಳುವ ಬಿಜೆಪಿಯವರು ಅಷ್ಟಮಂಗಲ ಪದ್ಧತಿಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಆರೋಪಿಸಿದರು. ಅಷ್ಟಮಂಗಲ ಪ್ರಶ್ನೆ ಹಾಕಿದರೆ ಪರಶುರಾಮನಿಗೆ ಬಿಜೆಪಿ ಪಕ್ಷದವರು ಮಾಡಿರುವ ಮೋಸ ಬಯಲಾಗುತ್ತದೆ
ಕಾರ್ಕಳ: ಹಿಂದುತ್ವದ ಪ್ರತಿಪಾದಕರು ಎಂದು ಹೇಳಿಕೊಳ್ಳುವ ಬಿಜೆಪಿಯವರು ಅಷ್ಟಮಂಗಲ ಪದ್ಧತಿಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಆರೋಪಿಸಿದರು. ಅಷ್ಟಮಂಗಲ ಪ್ರಶ್ನೆ ಹಾಕಿದರೆ ಪರಶುರಾಮನಿಗೆ ಬಿಜೆಪಿ ಪಕ್ಷದವರು ಮಾಡಿರುವ ಮೋಸ ಬಯಲಾಗುತ್ತದೆ ಎಂದು ಅವರು ಹೇಳಿದರು.
ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಟ್ಟದ ಮೇಲೆ ಬೆಂಕಿ ಕಾಣಿಸಿಕೊಳ್ಳುವುದು, ಮೂರ್ತಿ ಕಳ್ಳತನ ಹಾಗೂ ವಸ್ತುಗಳ ಕಳ್ಳತನದಂತಹ ದುರ್ಘಟನೆಗಳು ಏಕೆ ಸಂಭವಿಸುತ್ತವೆ ಎಂಬುದನ್ನು ತಿಳಿಯಲು ವಿದ್ವಾಂಸರು ಹಾಗೂ ಪುರೋಹಿತರನ್ನು ಒಳಗೊಂಡು ಅಷ್ಟಮಂಗಲ ಪ್ರಶ್ನೆ ಹಾಕಬೇಕು. ಇದರಿಂದ ತಪ್ಪು ಎಲ್ಲಿದೆ ಎಂಬ ನೈಜತೆ ಜನರಿಗೆ ತಿಳಿಯಬೇಕು ಎಂದರು.ಪರಶುರಾಮ ಥೀಮ್ ಪಾರ್ಕ್‌ನ ನಕಲಿ ಪ್ರತಿಮೆ ಹಗರಣದಿಂದ ಕಂಗೆಟ್ಟಿರುವ ಶಾಸಕ ಸುನಿಲ್ ಕುಮಾರ್ ತಮ್ಮ ಮೇಲಿನ ಆರೋಪಗಳಿಂದ ಪಾರಾಗಲು ತಮ್ಮ ಹಿಂಬಾಲಕರ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ತೇಜೋವಧೆಗೆ ಯತ್ನಿಸಿರುವುದು ಖಂಡನೀಯ ಎಂದರು. ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕಾಗಿ ಕಾರ್ಕಳದ ನಾಗರಿಕರು ಯಾರೂ ಮನವಿ ಸಲ್ಲಿಸಿರಲಿಲ್ಲ. ಸ್ವಯಂ ಪ್ರೇರಣೆಯಿಂದ ಅನುದಾನ ಬಿಡುಗಡೆಗೊಳಿಸಿ, ಚುನಾವಣಾ ದೃಷ್ಟಿಯಿಂದ ತರಾತುರಿಯಲ್ಲಿ ಆಗಿನ ಮುಖ್ಯಮಂತ್ರಿಗಳನ್ನು ಕರೆಸಿ ಅಪೂರ್ಣ ಪ್ರತಿಮೆಯನ್ನು ಉದ್ಘಾಟಿಸಲಾಯಿತು. ಮಳೆಗಾಲ ಆರಂಭವಾಗುತ್ತಿದ್ದಂತೆ “ಕಂಚಿನ ಪ್ರತಿಮೆ”ಯ ಬಣ್ಣ ಬಯಲಾಗಿದ್ದು, ಅದನ್ನು ಮುಚ್ಚಲು ಟಾರ್ಪಲ್ ಸುತ್ತಿ ಬಣ್ಣ ಬಳಿಯಲು ಯತ್ನಿಸಲಾಯಿತು ಎಂದು ಆರೋಪಿಸಿದರು.
ಉದ್ಘಾಟನಾ ಸಂದರ್ಭದಲ್ಲಿ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರ ಎಂದಿದ್ದ ಶಾಸಕರು, ಬಳಿಕ ಅದನ್ನು ಪ್ರವಾಸಿ ತಾಣ ಎಂದು ಹೇಳುತ್ತಿರುವುದು ದ್ವಂದ್ವ ನೀತಿಯಾಗಿದೆ. ಅದು ಪ್ರವಾಸಿ ತಾಣವಾಗಿದ್ದರೆ ಪರಶುರಾಮನ ಕಾಲಿನಡಿ ತುಳುನಾಡಿನ ದೈವಗಳನ್ನು ಚಿತ್ರಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಇದು ತುಳುನಾಡಿನ ಭಕ್ತರ ಭಾವನೆಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದರು.ಯುತ್ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ ಮಾತನಾಡಿ, ನಕಲಿ ಪ್ರತಿಮೆ ವಿಚಾರದಲ್ಲಿ ಬಿಜೆಪಿ ಆತ್ಮಸಾಕ್ಷಿಯಿಂದ ಸ್ಪಷ್ಟನೆ ನೀಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಸಂತೋಷ್ ದೇವಾಡಿಗ, ಮಂಜುನಾಥ ಜೋಗಿ, ಅನಿಲ್ ಪೂಜಾರಿ ನೆಲ್ಲಿಗುಡ್ಡೆ, ವಿವೇಕಾನಂದ ಶೆಣೈ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.