ಕಾಂಗ್ರೆಸ್ ಅಲಿಬಾಬಾ 40 ಕಳ್ಳರ ಮನೆ: ಆರ್.ಅಶೋಕ

| Published : Apr 30 2024, 02:04 AM IST

ಸಾರಾಂಶ

₹ 2000 ಕೊಟ್ಟು, ಎಲ್ಲದರ ಬೆಲೆ ಏರಿಕೆ ಮಾಡಿ, ತೆರಿಗೆ ಜಾಸ್ತಿ ಮಾಡಿ ಮೋಸ

ರೋಣ: ಕಾಂಗ್ರೆಸ್‌ ಅಲಿಬಾಬಾ 40 ಕಳ್ಳರ ಮನೆಯಾಗಿದೆ. ಅಲ್ಲಿರುವವರೆಲ್ಲರೂ ಕಳ್ಳರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಳ್ಳರನ್ನು ಮನೆ ಬಾಗಿಲಿಗೆ ಬರದಂತೆ ನೋಡಿಕೊಳ್ಳಿ. ಅವರು ನಿಮಗೆ ಮೋಸ ಮಾಡುವುದರ ಜತೆಗೆ ಕಳ್ಳತನ ಮಾಡುತ್ತಾರೆ ಎಂದು ವಿರೋಧ ಪಕ್ಷ ನಾಯಕ ಆರ್. ಅಶೋಕ ಆರೋಪಿಸಿದರು.

ಸೋಮವಾರ ಸಂಜೆ ಪಟ್ಟಣದ ಹೊಸ ಸಂತೆ ಮಾರುಕಟ್ಟೆ ಆವರಣದಲ್ಲಿ ಜರುಗಿದ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರಿಗೆ ಕಾಂಗ್ರೆಸ್ ಮೋಸ ಮಾಡುತ್ತಿದೆ. ₹ 2000 ಕೊಟ್ಟು, ಎಲ್ಲದರ ಬೆಲೆ ಏರಿಕೆ ಮಾಡಿ, ತೆರಿಗೆ ಜಾಸ್ತಿ ಮಾಡಿ ಮೋಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನವರು ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತು ಅಲ್ಪಸಂಖ್ಯಾತರಿಗೆ ಕೊಡುವ ಹುನ್ನಾರ ನಡೆಸಿದ್ದಾರೆ ಎಂದರು.

ರಾಮ ಮಂದಿರ ಕಟ್ಟುವವರ ಮೇಲೆ ಗುಂಡು ಹಾರಿಸುವವರಿಗೆ ವೋಟು ಹಾಕಬೇಡಿ, ರಾಮಮಂದಿರ ಕಟ್ಟುವವರಿಗೆ ವೋಟು ಹಾಕಿ. ಅಮೂಲ್ ಬೇಬಿಗೆ ವೋಟ್ ಹಾಕಿದರೆ ದೇಶದ ಕಥೆ ಅಧೋಗತಿಯಾಗುವುದು. ಆದ್ದರಿಂದ ಬಿಜೆಪಿಗೆ ಮತ ನೀಡಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿಸಬೇಕು. ಈ ಮೂಲಕ ಹಾವೇರಿ- ಗದಗ ಲೋಕಸಭೆ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಮತ ನೀಡಬೇಕು ಎಂದು ವಿನಂತಿಸಿದರು.

ಹಿರಿಯ ನಟಿ ತಾರಾ ಮಾತನಾಡಿ, ಲೋಕಸಭೆ ಚುನಾವಣೆಯು ಬಿಜೆಪಿಯ ವಿಜಯ ಯಾತ್ರೆಯಂತೆ ಕಾಣುತ್ತಿದೆ‌ ಎಂದರು.

ಹಾವೇರಿ- ಗದಗ ಲೋಕಸಭೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಏನೇನು ಅಭಿವೃದ್ಧಿ ಮಾಡಿದ್ದೇನೆ ಎಂಬುದರ ಪಟ್ಟಿ ಕೊಡುತ್ತೇನೆ. ಗ್ರಾಮೀಣ ಪ್ರದೇಶದಲ್ಲಿ ಜಲ ಜೀವನ ಮಷಿನ್ ಯೋಜನೆಯಡಿ ಕರ್ನಾಟಕದಲ್ಲಿ 30 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ. ರೋಣ ತಾಲೂಕಿನ ಶಾಂತಗೇರಿ ಭಾಗದ 21 ಕೆರೆಗಳಿಗೆ ನೀರು ಹರಿಸಿದ್ದು ಬಿಜೆಪಿ ಸರ್ಕಾರ, ಜಾಲವಾಡಗಿ ಏತ ನೀರಾವರಿ ಯಶಸ್ವಿಗೊಳಿದ್ದು ನಾವು, ಅದನ್ನು ನಿಲ್ಲಿಸಿದ್ದ ಕಾಂಗ್ರೆಸ್ ಸರ್ಕಾರ.‌ನೀರು ಕೊಡುವದರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ನೀರು ಕೊಡುವದರಲ್ಲಿ ರಾಜಕಾರಣ ಮಾಡಬಾರದು. ಸಿಂಗಟಾಲೂರ ಏತ ನೀರಾವರಿಗೆ ₹800 ಕೋಟಿ ಕೊಟ್ಟಿದ್ದು ಬಸವರಾಜ ಬೊಮ್ಮಾಯಿ ಎಂಬುದು ಕಾಂಗ್ರೆಸ್ ಅರಿಯಬೇಕು ಎಂದರು.

ಮಾಜಿ ಸಚಿವ ಕಳಕಪ್ಪ ಬಂಡಿ, ಎಸ್.ಕೆ. ಬೆಳ್ಳುಬ್ಬಿ, ಹಿರಿಯ ಮುಖಂಡ ಅಶೋಕ ನವಲಗುಂದ ಮಾತನಾಡಿದರು.

ಪ್ರಚಾರ ಸಭೆಯಲ್ಲಿ ಸಭೆಯಲ್ಲಿ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ಅನೀಲಕುಮಾರ ಪಲ್ಲೇದ, ಶಿವಾನಂದ ಮಠದ, ಮುತ್ತಣ್ಣ ಲಿಂಗನಗೌಡ್ರ, ಎಂ.ಬಿ.ಸಜ್ಜನ, ಇಂದಿರಾ ತೇಲಿ, ವಿಜಯಲಕ್ಷ್ಮೀ ಕೊಟಗಿ, ರೇಣುಕಾ ರಂಗನಗೌಡ್ರ, ವೀರನಗೌಡ ಗೌಡರ, ಲಕ್ಷ್ಮೀ , ಅಶೋಕ‌‌‌‌‌ ದೇಶಣ್ಣವರ ಮುಂತಾದವರು ಉಪಸ್ಥಿತರಿದ್ದರು . ಉಮೇಶ ಮಲ್ಲಾಪೂರ ನಿರೂಪಿಸಿದರು.