ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ನೀತಿ ಬಯಲು: ಹರಿಪ್ರಕಾಶ್‌ ಕೋಣೆಮನೆ

| Published : Sep 14 2024, 01:55 AM IST

ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ನೀತಿ ಬಯಲು: ಹರಿಪ್ರಕಾಶ್‌ ಕೋಣೆಮನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೆ ಪ್ರಧಾನಿ ನೆಹರೂ ಕೂಡ ತಾನು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಇಷ್ಟಪಡುವುದಿಲ್ಲ ಎಂದಿದ್ದರು. ಅಂದಿನಿಂದ ಇಂದಿನ ವರೆಗೂ ಕಾಂಗ್ರೆಸ್ ಮೀಸಲಾತಿಯ ವಿರೋಧಿಯಾಗಿದೆ ಎಂಬುದನ್ನು ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ತಮ್ಮ ಹೇಳಿಕೆ ಮೂಲಕ ತೋರಿಸಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಸೂಕ್ತ ಸಮಯದಲ್ಲಿ ದೇಶದಲ್ಲಿ ಮೀಸಲಾತಿಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವುದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಮತ್ತು ಕಾಂಗ್ರೆಸ್ ಪಕ್ಷದ ಮೀಸಲಾತಿ ವಿರೋಧಿ ನೀತಿಯ ವಿರುದ್ಧ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಹೇಳಿದ್ದಾರೆ.

ಅವರು ಶುಕ್ರವಾರ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಿಂದೆ ಪ್ರಧಾನಿ ನೆಹರೂ ಕೂಡ ತಾನು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಇಷ್ಟಪಡುವುದಿಲ್ಲ ಎಂದಿದ್ದರು. ಅಂದಿನಿಂದ ಇಂದಿನ ವರೆಗೂ ಕಾಂಗ್ರೆಸ್ ಮೀಸಲಾತಿಯ ವಿರೋಧಿಯಾಗಿದೆ ಎಂಬುದನ್ನು ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ತಮ್ಮ ಹೇಳಿಕೆ ಮೂಲಕ ತೋರಿಸಿದ್ದಾರೆ ಎಂದವರು ಹೇಳಿದರು.

ವಿದೇಶದಲ್ಲಿ ರಾಹುಲ್ ಗಾಂಧಿ ಅವರು ದೇಶದ, ಪ್ರಧಾನಿ ಮತ್ತು ಚುನಾಯಿತ ಸರ್ಕಾರದ ವಿರುದ್ಧ ಮಾತನಾಡಿ, ದೇಶಗ ಘನತೆಗೆ, ಸಾರ್ವಭೌಮತೆಗೆ ಧಕ್ಕೆ ತಂದಿದ್ದಾರೆ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ತಾವು ಸಂವಿಧಾನದ ರಕ್ಷಕ ಎಂದು ಕರೆದುಕೊಳ್ಳುವ ಕಾಂಗ್ರೆಸ್‌ ನಾಯಕರು ಜವಾಬ್ದಾರಿಯ ಕನಿಷ್ಟ ಪ್ರಜ್ಞೆ ಕೂಡ ಇಲ್ಲದೇ ದೇಶದ ಮಾನ ಕಳೆದಿದ್ದಾರೆ ಎಂದವರು ಆರೋಪಿಸಿದರು.

ಬಿಜೆಪಿ ದೇಶದ ಎಸ್ಸಿ ಎಸ್ಟಿ ಸಮುದಾಯಗಳ ಪರವಾಗಿದೆ. ಮೀಸಲಾತಿಯನ್ನು ಉಳಿಸಲು ಬಿಜೆಪಿ ಜನಜಾಗೃತಿಯ ಮೂಲಕ ಹೋರಾಟ ನಡೆಸಲಿದೆ ಎಂದರು.

*ಕಾಂಗ್ರೆಸ್ ಅಧಿಕಾರದಲ್ಲಿಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರವನ್ನು ನಡೆಸುತ್ತಿಲ್ಲ, ಇಲ್ಲಿ ಎಸ್‌ಡಿಪಿಐ, ಪಿಎಫ್‌ಐಗಳು ಆಡಳಿತ ನಡೆಸುತ್ತಿವೆ. ಸಿಎಂ ಸಿದ್ದರಾಮಯ್ಯ ಅವುಗಳ ಮುಖವಾಡವಾಗಿದ್ದಾರೆ ಎಂದು ಆರೋಪಿಸಿದ ಕೋಣೆಮನೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪಾಕ್ ಧ್ವಜ ಹಾರಾಟ, ಪಾಕ್ ಪರ ಘೋಷಣೆ, ಎಸ್‌ಡಿಪಿಐ - ಪಿಎಫ್‌ಐ ಮೇಲಿನ ಪ್ರಕರಣಗಳ ರದ್ದು, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ, ಹಿಂದು ನಂಬಿಕೆಗಳಿಗೆ ಘಾಸಿ ಇತ್ಯಾದಿಗಳು ನಿರಂತರವಾಗಿದ್ದು, ಅದಕ್ಕೀಗ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಮೇಲೆ ದಾಳಿಯೂ ಸೇರಿದೆ ಎಂದರು.

* ಕಾಂಗ್ರೆಸ್‌ನಿಂದ ಅಪಾಯ

ನಾಗಮಂಗಲದ ಘಟನೆಯನ್ನು ಗೃಹಸಚಿವರು ಕ್ಷುಲ್ಲಕ ಘಟನೆ ಎಂದಿದ್ದಾರೆ. ಪೆಟ್ರೋಲ್ ಬಾಂಬ್ ಎಸೆಯಲಾಗಿದೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ನಾವು ಪಾಕಿಸ್ತಾನದಲ್ಲಿದ್ದೇವೆಯೋ ಭಾರತದಲ್ಲಿದ್ದೇವೆಯೋ ಎಂಬ ಸಂಶಯ ಬರುತ್ತಿದೆ. ಅಂಗಡಿ ಸುಟ್ಟು ನಷ್ಟವಾದ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಬೇಕು, ಗಲಭೆಗೆ ಕಾರಣರಾದ ಮತಾಂಧರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ವಿಧಾನಸಭಾ ಚುನಾವಣೆ ನಡೆಯುತ್ತಿರುವ ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಆರ್ಟಿಕಲ್ 370 ಮತ್ತೆ ಜಾರಿಗೆ ತರುವುದಾಗಿ ಹೇಳಿದೆ. ದೇಶದ ಸಮಗ್ರತೆಗೆ ಕಾಂಗ್ರೆಸ್‌ನಿಂದ ಅಪಾಯವಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ರಾಜ್ಯ ಮಾಧ್ಯಮ ಸಂಚಾಲಕ ರತನ್ ಪೂಜಾರಿ, ಜಿಲ್ಲಾ ಮುಖಂಡರಾದ ರೇಶ್ಮಾ ಉದಯ ಶೆಟ್ಟಿ, ಸತೀಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ವಿಜಯಕುಮಾರ್ ಉದ್ಯಾವರ, ರಾಜೇಶ್ ಕಾವೇರಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.