ವಿಕಸಿತ ಭಾರತಕ್ಕಾಗಿ ನರೇಗಾ ಯೋಜನೆಯಲ್ಲಿ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ ಭಾರತದ ಸಮಗ್ರ ಗ್ರಾಮೀಣಾಭಿವೃದ್ಧಿಗೆ ಅಭಿವೃದ್ಧಿಯ ಬಲ ತುಂಬಿದೆ. ಆದರೆ, ಕಾಂಗ್ರೆಸ್ ಸರ್ಕಾರ ಸುಖಾಸುಮ್ಮನೆ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

- ಹೊನ್ನಾಳಿಯ ಬೇಲಿಮಲ್ಲೂರಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಜಾಗೃತಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ವಿಕಸಿತ ಭಾರತಕ್ಕಾಗಿ ನರೇಗಾ ಯೋಜನೆಯಲ್ಲಿ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ ಭಾರತದ ಸಮಗ್ರ ಗ್ರಾಮೀಣಾಭಿವೃದ್ಧಿಗೆ ಅಭಿವೃದ್ಧಿಯ ಬಲ ತುಂಬಿದೆ. ಆದರೆ, ಕಾಂಗ್ರೆಸ್ ಸರ್ಕಾರ ಸುಖಾಸುಮ್ಮನೆ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ವಿಬಿ-ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಅವರು ಮಾತನಾಡಿದರು. ವಿಕಸಿತ ಭಾರತದ ನಿರ್ಮಾಣವೇ ವಿಬಿ-ಜಿ ರಾಮ್‌ ಜಿ ಮೂಲ ಆಶಯವಾಗಿದೆ. 100 ದಿನ ಇದ್ದ ದಿನಗಳ ಖಾತ್ರಿಯನ್ನು 125 ದಿನಕ್ಕೆ ಹೆಚ್ಚಿಸಿದೆ. ₹174 ಇದ್ದ ಕೂಲಿಯನ್ನು 379ಕ್ಕೆ ಏರಿಸಿದೆ. ಬೇಡಿಕೆಗೆ ಅನುಗುಣವಾಗಿ ಕೇಂದ್ರದಿಂದ ನಿಗದಿತ ಮೊತ್ತವನ್ನು ಒದಗಿಸಲಾಗುವುದು. ಹೆಚ್ಚುವರಿ ಹಣದ ಅವಶ್ಯಕತೆ ಇದ್ದರೆ ಅದನ್ನು ರಾಜ್ಯ ಸರ್ಕಾರ ಒದಗಿಸಬೇಕು. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಒದಗಿಸಲು ವಿಫಲವಾದ ಕಾರಣ ಕೇಂದ್ರ ಸರ್ಕಾರದ ಈ ಯೋಜನೆ ಬಗ್ಗೆ ವಿರೋಧಿಸಿ ಅಪಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಸ್ಥಳೀಯ ಗ್ರಾ.ಪಂ.ಗಳ ಗ್ರಾಮಸಭೆಗಳಲ್ಲೇ ಕಾಮಗಾರಿಗಳ ಬಗ್ಗೆ ನಿರ್ಧಾರವಾಗುತ್ತದೆ. ಶಾಶ್ವತವಾದ ಆಸ್ತಿಗಳ ನಿರ್ಮಾಣದ ಜೊತೆಗೆ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ ಈ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಯುಪಿಎ ಸರ್ಕಾರವು 2007 ರಿಂದ 2013-14 ರವರೆಗೆ ಕರ್ನಾಟಕಕ್ಕೆ ₹8739.32 ಕೋಟಿ ಬಿಡುಗಡೆ ಮಾಡಿತ್ತು. ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರವು ₹48549.82 ಕೋಟಿ ಬಿಡುಗಡೆ ಮಾಡಿದೆ ಎಂದರು.

ಮನರೇಗಾದಲ್ಲಿ ಭ್ರಷ್ಟಾಚಾರ ಪತ್ತೆಯಾದಾಗ, ಕೇಂದ್ರ ಸರ್ಕಾರವು ಸುಧಾರಣಾ ಯೋಜನೆ ಅಗತ್ಯವಿದೆ ಎಂದು ಮನಗಂಡು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಬಿ- ಜಿ ರಾಮ್ ಜಿ ಯೋಜನೆ ಘೋಷಿಸಿತ್ತು. ಕೆಲಸ ಇಲ್ಲದಿದ್ದಾಗಲೂ ನಿರುದ್ಯೋಗ ಭತ್ಯೆಯನ್ನು ಪಾವತಿಸಬೇಕು ಎಂದು ಕಾನೂನಿನಲ್ಲಿ ಬಲವಾದ ನಿಬಂಧನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡಿದೆ ಎಂದರು.

ಬಿಜೆಪಿ ತಾಲೂಕಾಧ್ಯಕ್ಷ ನಾಗರಾಜ್,ಬಿಜೆಪಿ ಮುಖಂಡ ಎಸ್.ಎಸ್.ಬೀರಪ್ಪ,ಸಿದ್ದಪ್ಪ ಹಾಗೂ ಗ್ರಾಮಸ್ಥರು ಇದ್ದರು.

- - -

(ಕೋಟ್‌) ಕಾಂಗ್ರೆಸ್ ಸರ್ಕಾರ ಪತ್ರಿಕೆಗಳಲ್ಲಿ ಕೇಂದ್ರ ಸರ್ಕಾರದ ವಿಬಿ-ಜಿ ರಾಮ್ ಜಿ ಬಗ್ಗೆ ತಪ್ಪು ಕಲ್ಪನೆ ಮೂಡುವಂತೆ ಜಾಹಿರಾತು ನೀಡಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ. ಇದಕ್ಕೆ ಜನರೇ ಕಾಂಗ್ರೆಸ್‌ಗೆ ಬುದ್ಧಿ ಹೇಳುವ ಕಾಲ ಬರುತ್ತದೆ.

- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.

- - -

-30ಎಚ್.ಎಲ್.ಐ2:

ಬೇಲಿಮಲ್ಲೂರು ಗ್ರಾಮದಲ್ಲಿ ವಿಬಿ-ಜಿ ರಾಮ್ ಜಿ ಕುರಿತು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಜನರಿಗೆ ಜಾಗೃತಿ ಮೂಡಿಸಿದರು. ಬಿಜೆಪಿ ,ಬಿಜೆಪಿ ಮುಖಂಡರು ಇದ್ದರು.