ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಳೆದ ೮ ದಶಕಗಳಿಂದ ಕಾಂಗ್ರೆಸ್ ಪಕ್ಷದ ಪರವಾಗಿದ್ದ ದಲಿತ ಸಮುದಾಯಕ್ಕೆ ಈಗ ಆ ಪಕ್ಷ ಮೋಸ ಮಾಡುತ್ತಿದೆ ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗ ಆರೋಪಿಸಿದೆ.ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಡಾ.ಎಚ್.ಸಿ. ಮಹದೇವಪ್ಪ ಅಭಿಮಾನಿ ಬಳಗ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲಿತ ನಾಯಕರಾಗಿದ್ದ ಬಿ. ಬಸವಲಿಂಗಪ್ಪ, ಬಿ.ರಾಚಯ್ಯ, ವಿ.ಶ್ರೀನಿವಾಸ ಪ್ರಸಾದ್ ಅವರ ನಂತರ ದಲಿತ ಸಮುದಾಯದಕ್ಕೆ ಬೆನ್ನಿಗೆ ನಿಂತವರು ಡಾ.ಎಚ್.ಸಿ.ಮಹದೇವಪ್ಪ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಸಚಿವರಾಗಿದ್ದ ಡಾ.ಮಹದೇವಪ್ಪ ಸಂವಿಧಾನದ ಆಶಯಗಳನ್ನು ಮನೆ-ಮನೆಗೆ ತಲುಪಿಸುವ ಕೆಲಸ ಮಾಡಿದರು. ಚಾಮರಾಜನಗರದಿಂದ ಬೀದರ್ ವರೆಗೆ ದಲಿತ ಮತ್ತು ಶೋಷಿತ ವರ್ಗಗಳ ಸಂಘಟನೆಗೆ ದುಡಿದಿದ್ದಾರೆ. ರಾಜ್ಯವ್ಯಾಪಿ ಸಂವಿಧಾನ ಜಾಗೃತಿ ಕಾರ್ಯಕ್ರಮದ ಮೂಲಕ ದಲಿತರು ಸ್ವಾಭಿಮಾನಿಗಳಾಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ ಪಕ್ಷ ಮತ್ತು ಸಂವಿಧಾನ ವಿರೋಧಿಗಳು ಸೇರಿ ದಲಿತ ಸಮುದಾಯದ ಮನೋಸ್ಥೈರ್ಯ ಕುಸಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರಲ್ಲದೆ, ಡಾ.ಎಚ್.ಸಿ.ಮಹದೇವಪ್ಪರನ್ನು ಸಂಪುಟದಿಂದ ಕೈಬಿಟ್ಟಿರುವುದು ಕಾಂಗ್ರೆಸ್‌ನ ದಲಿತ ವಿರೋಧಿ ನಿಲುವಿಗೆ ಸಾಕ್ಷಿ ಎಂದರು.
ದಲಿತರನ್ನು ಎತ್ತಿ ಕಟ್ಟಿ,ಮತ್ತೆ ಅಡಗಿಸುವ ಈ ದ್ವಂದ್ವ ನೀತಿಗಳು ಮುಂದೆ ನಡೆಯುವುದಿಲ್ಲ.೨೦೨೮ ರ ವಿಧಾನಸಭಾ ಚುನಾವಣೆಯಲ್ಲಿ ದಲಿತರು ಮತ್ತು ಹಿಂದುಳಿದವರು ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಬಿ.ಕೆ.ಬೊಮ್ಮಯ್ಯ,ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಜು,ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಅಧ್ಯಕ್ಷ ರಾಜೇಂದ್ರ ಹಂಗಳ,ಮುಖಂಡರಾದ ಕಬ್ಬಹಳ್ಳಿ ನಂಜುಂಡಸ್ವಾಮಿ,ಮಹೇಶ್ ರಾಘವಾಪುರ ಸೇರಿದಂತೆ ಹಲವರಿದ್ದರು.
ಸಿದ್ರಾಮಯ್ಯಗೆ ಪುತ್ರ ವ್ಯಾಮೋಹ?ಗುಂಡ್ಲುಪೇಟೆ: ಮಾಜಿ ಸಿಎಂ ಸಿದ್ದರಾಮಯ್ಯ ಹೆಸರಿಗೆ ಮಾತ್ರ ಅಹಿಂದ, ಜಾತ್ಯಾತೀತ ಎಂದು ಹೇಳುತ್ತಾರೆ. ತಮ್ಮ ಪುತ್ರನಿಗೆ ಮಾತ್ರ ಸಚಿವ ಸ್ಥಾನ ಕೊಡಿಸಿದ್ದಾರೆ ಎಂದು ಮುಖಂಡರು ಆರೋಪಿಸಿದರು.
ಸಿದ್ದರಾಮಯ್ಯ ಅವರು ಪುತ್ರ ವ್ಯಾಮೋಹಕ್ಕೆ ಒಳಗಾಗಿ ದಲಿತ ಗಟ್ಟಿ ಧ್ವನಿ ಡಾ.ಎಚ್.ಸಿ.ಮಹದೇವಪ್ಪರಿಗೆ ನಾಲ್ಕು ದಶಕದ ಗೆಳೆತನಕ್ಕೆ ಹಾಗೂ ದಲಿತರ ಏಳಿಗೆ ಸಹಿಸದೆ ಸಂಪುಟದಿಂದ ಹೊರಗಿಡಲು ನಡೆಸಿದ ಡೋಂಗಿತನ ಜನರಿಗೆ ಅರ್ಥವಾಗದೆ ಇರದು ಎಂದರು.