ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಮ್ಮನ್ನಾಳುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಇದರಿಂದ ರೈತರ ಒಕ್ಕಲುತನ ಹಾಳಾಗಿ ಆತ್ಮಹತ್ಯೆಯತ್ತ ಮುಖ ಮಾಡಿದ್ದಾರೆ. ಆದ್ದರಿಂದ ರೈತರಲ್ಲಾ ಸಂಘಟನೆ ಕಟ್ಟುವ ಮುಖಾಂತರ ಸಂಘಟಿತರಾಗಿ ರೈತ ವಿರೋಧಿ ನೀತಿ ಹಿಮ್ಮೆಟ್ಟಿಸಬೇಕಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಸದಸ್ಯ ಬಿ.ಎನ್. ಮುನಿಕೃಷ್ಣಪ್ಪ ರೈತರಿಗೆ ಕರೆ ನೀಡಿದರು.ನಗರದ ವಾಪಸಂದ್ರ ಪ್ರಾಂತ್ಯ ರೈತ ಸಂಘದ ಕಚೇರಿ ಬಳಿ ತಾಲೂಕು ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ನಡೆದ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ದ 90ನೇ ವಾರ್ಷಿಕೋತ್ಸವ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಿಸಾನ್ ಸಭಾ ಚಳುವಳಿಯು ಬಿಹಾರದಲ್ಲಿ ಪ್ರಾರಂಭವಾಯಿತು, ಸಹಜಾನಂದ ಸರಸ್ವತಿ ಅವರು 1929 ರಲ್ಲಿ ಬಿಹಾರ ಪ್ರಾಂತೀಯ ಕಿಸಾನ್ ಸಭಾ (ಬಿಪಿಕೆಎಸ್) ಅನ್ನು ಸ್ಥಾಪಿಸಿದರು. ಇದು ಭಾರತದ ರೈತರ ಚಳುವಳಿಯ ಕಿಚ್ಚನ್ನು ಹೊತ್ತಿಸಿತು. ಇದು ಅವರ ಒಕ್ಕಲುತನ ಹಕ್ಕುಗಳ ಮೇಲಿನ ಜಮೀನ್ದಾರಿ ದಾಳಿಯ ವಿರುದ್ಧ ರೈತರ ಕುಂದುಕೊರತೆಗಳನ್ನು ಸಜ್ಜುಗೊಳಿಸಲು ಕಾರಣವಾಯಿತು ಎಂದರು.
ರೈತ ಚಳವಳಿ ಕ್ರಮೇಣ ಬಲಗೊಂಡು ಭಾರತದ ಉಳಿದ ಭಾಗಗಳಾದ್ಯಂತ ಹರಡಿತು. ಈ ಎಲ್ಲಾ ಆಮೂಲಾಗ್ರ ರೈತ ಬೆಳವಣಿಗೆಗಳು ಏಪ್ರಿಲ್ 1936 ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಲಕ್ನೋ ಅಧಿವೇಶನದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ರಚನೆಯಲ್ಲಿ ಪರಾಕಾಷ್ಠೆಯಾದವು, ಸ್ವಾಮಿ ಸಹಜಾನಂದ ಸರಸ್ವತಿ ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು ಎಂದರು.ಆಗಸ್ಟ್ 1936ರಲ್ಲಿ ಹೊರಡಿಸಲಾದ ಕಿಸಾನ್ ಪ್ರಣಾಳಿಕೆಯು ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಗೊಳಿಸಲು ಮತ್ತು ಗ್ರಾಮೀಣ ಸಾಲಗಳನ್ನು ರದ್ದುಗೊಳಿಸಲು ಒತ್ತಾಯಿಸಿತು. ಅಕ್ಟೋಬರ್ 1937 ರಲ್ಲಿ, ಅದು ಕೆಂಪು ಧ್ವಜವನ್ನು ತನ್ನ ಧ್ವಜವಾಗಿ ಅಳವಡಿಸಿಕೊಂಡಿತು. ಶೀಘ್ರದಲ್ಲೇ, ಅದರ ನಾಯಕರು ಕಾಂಗ್ರೆಸ್‌ನಿಂದ ಹೆಚ್ಚು ದೂರವಾದರು ಮತ್ತು ಬಿಹಾರ ಮತ್ತು ಸಂಯುಕ್ತ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳೊಂದಿಗೆ ಘರ್ಷಣೆ ನಡೆಸಿದರು.
ಅಖಿಲ ಭಾರತ ಕಿಸಾನ್ ಸಭಾವು ಭಾರತೀಯ ಕಮ್ಯುನಿಸ್ಟ್ ಪಕ್ಷದ ರೈತ ಅಥವಾ ರೈತರ ವಿಭಾಗವಾಗಿದ್ದು, ರೈತರು ಮತ್ತು ಭೂಮಾಲೀಕರ ನಡುವೆ ಪರಸ್ಪರ ತಿಳಿವಳಿಕೆಯನ್ನು ಬೆಳೆಸುವುದು ಕಿಸಾನ್ ಸಭಾಗಳ ಆರಂಭಿಕ ಗುರಿಯಾಗಿತ್ತು. ಆದಾಗ್ಯೂ, ಭೂಮಾಲೀಕರ ಹಠಮಾರಿ ಮತ್ತು ದಬ್ಬಾಳಿಕೆಯ ಮನೋಭಾವದಿಂದಾಗಿ, ಕಿಸಾನ್ ಸಭಾಗಳು ಉಗ್ರಗಾಮಿ ನಿಲುವನ್ನು ಅಳವಡಿಸಿಕೊಳ್ಳಬೇಕಾಯಿತು. ಆದರೆ ಇಂದು ಆಳುತ್ತಿರುವ ಬಿಜೆಪಿ-ಕಾಂಗ್ರೆಸ್ ಸರ್ಕಾರಗಳು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದು, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ ಮಾಡದೆ ಕೃಷಿ ಕೂಲಿಕಾರನ್ನು ವಂಚಿತರನ್ನಾಗಿ ಮಾಡುತ್ತಿದೆ.
ದುಡಿಯುವ ಜನರ ಬದುಕನ್ನು ರಕ್ಷಣೆ ಮಾಡಬೇಕಾದ ಸರ್ಕಾರಗಳು ಇವತ್ತು ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತವೆ. ರೈತ ಕೂಲಿಕಾರ ಕಾರ್ಮಿಕರು ಸಂಘಟನೆ ಕಟ್ಟುವ ಮೂಲಕ ಒಂದಾಗಿ ಹೋರಾಟ ಮಾಡುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತರಾಗಿ ರೈತ ಸಂಘಟನೆ ದೊಡ್ಡ ಶಕ್ತಿಯಾಗಿ ಬೆಳೆಯಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ. ಕಾರ್ಯದರ್ಶಿ ಶಿವಪ್ಪ, ಖಜಾಂಚಿ ವೆಂಕಟರಮಣಪ್ಪ, ಸದಸ್ಯರಾದ ವೆಂಕಟೇಶಪ್ಪ, ನರಸಿಂಹರೆಡ್ಡಿ ಡಿ.ಎನ್, ಬಾಬು, ಶ್ರೀನಿವಾಸ್, ನಾರಾಯಣಸ್ವಾಮಿ, ಮುನಿರಾಜು, ರಾಮಕೃಷ್ಣಪ್ಪ, ವೆಂಕಟರೆಡ್ಡಿ, ಭೈರಪ್ಪ, ಬೈರಾರೆಡ್ಡಿ ಮತ್ತಿತರರು ಇದ್ದರು.ಸಿಕೆಬಿ-1 ನಗರದ ವಾಪಸಂದ್ರ ಪ್ರಾಂತ್ಯ ರೈತ ಸಂಘದ ಕಚೇರಿ ಬಳಿ ನಡೆದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ದ 90ನೇ ವಾರ್ಷಿಕೋತ್ಸವ ಹಿನ್ನೆಲೆ ಬಿ.ಎನ್ ಮುನಿಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು.