ಟಿಎಪಿಸಿಎಂಎಸ್ ಚುನಾವಣೆಗೆ ಕಾಂಗ್ರೆಸ್ ಬಹಿಷ್ಕಾರ

| Published : Dec 23 2023, 01:47 AM IST

ಸಾರಾಂಶ

ಚನ್ನಪಟ್ಟಣ: ಚನ್ನಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ತಮಗೆ ಬೇಕಾದವರಿಗೆ ಮತದಾನದ ಹಕ್ಕು ನೀಡಿ ವಾಮಮಾರ್ಗದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಜೆಡಿಎಸ್ ಹುನ್ನಾರ ನಡೆಸಿದ್ದು, ಮತ್ತೊಮ್ಮೆ ಅಧಿಕಾರ ಹಿಡಿದು ಅಕ್ಕಿ ಹಗರಣ ಮುಚ್ಚಿಹಾಕುವ ಹುನ್ನಾರ ನಡೆಸಿದೆ. ಆದ್ದರಿಂದ ಭಾನುವಾರ ನಡೆಯಲಿರುವ ಚುನಾವಣೆಯನ್ನು ಕಾಂಗ್ರೆಸ್ ಬಹಿಷ್ಕರಿಸಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ತಿಳಿಸಿದರು.

ಚನ್ನಪಟ್ಟಣ: ಚನ್ನಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ತಮಗೆ ಬೇಕಾದವರಿಗೆ ಮತದಾನದ ಹಕ್ಕು ನೀಡಿ ವಾಮಮಾರ್ಗದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಜೆಡಿಎಸ್ ಹುನ್ನಾರ ನಡೆಸಿದ್ದು, ಮತ್ತೊಮ್ಮೆ ಅಧಿಕಾರ ಹಿಡಿದು ಅಕ್ಕಿ ಹಗರಣ ಮುಚ್ಚಿಹಾಕುವ ಹುನ್ನಾರ ನಡೆಸಿದೆ. ಆದ್ದರಿಂದ ಭಾನುವಾರ ನಡೆಯಲಿರುವ ಚುನಾವಣೆಯನ್ನು ಕಾಂಗ್ರೆಸ್ ಬಹಿಷ್ಕರಿಸಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಎಪಿಸಿಎಂಎಸ್ ಗೋದಾಮಿನಿಂದ ಅಕ್ಕಿ ನಾಪತ್ತೆ ಪ್ರಕರಣ ತನಿಖೆ ಪೂರ್ಣಗೊಳ್ಳುವವರೆಗೆ ಸಂಸ್ಥೆಯ ಆಡಳಿತ ಮಂಡಳಿಗೆ ಚುನಾವಣೆ ನಡೆಸಬಾರದು ಎಂದು ಕಾಂಗ್ರೆಸ್ ಆಗ್ರಹಿಸಿತ್ತು. ಆದರೆ, ವಾಮಮಾರ್ಗದಲ್ಲಿ ಅಧಿಕಾರಕ್ಕೆ ಏರಲು ಜೆಡಿಎಸ್ ಹವಣಿಸಿದ್ದು, ಚುನಾವಣೆಯಲ್ಲಿ ಭಾಗಿಯಾಗಬಾರದು ಎಂಬ ಕಾರಣಕ್ಕೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಅಕ್ಕಿ ಹಗರಣ ಮುಚ್ಚಲು ಹುನ್ನಾರ:

ಟಿಎಪಿಸಿಎಂಎಸ್ ಗೋದಾಮಿನಿಂದ ಅನ್ನಭಾಗ್ಯದ 1600 ಕ್ವಿಂಟಲ್ ಅಕ್ಕಿ ಹಾಗೂ ರಾಗಿ ನಾಪತ್ತೆಯಾಗಿರುವ ಪ್ರಕರಣದ ತನಿಖೆ ಇನ್ನು ಮುಗಿದಿಲ್ಲ. ಆದರೆ, ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದು ಅಕ್ಕಿ ಹಗರಣ ಮುಚ್ಚಿಹಾಕುವ ಹುನ್ನಾರ ನಡೆಸಿದೆ. ಹಗರಣ ನಡೆದ ವೇಳೆ ಸಂಸ್ಥೆ ನಿರ್ದೇಶಕರಾಗಿದ್ದ ಬಹುತೇಕರು ಚುನಾವಣೆಗೆ ಸ್ಪರ್ಧಿಸಿರುವುದೇ ಇದಕ್ಕೆ ಸಾಕ್ಷಿ. ಟಿಎಪಿಸಿಎಂಎಸ್‌ನಲ್ಲಿ ತಮಗೆ ಬೇಕಾದವರನ್ನು ಷೇರುದಾರರನ್ನಾಗಿ ಮಾಡಿಕೊಡು ಮತದಾನದ ಹಕ್ಕು ನೀಡಲಾಗಿದೆ. ಅರ್ಹ ಷೇರುದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಆ ಮೂಲಕ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತಮಗಿಷ್ಟ ಬಂದಂತೆ ಚುನಾವಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಸಂಸ್ಥೆಯ ಅವ್ಯವಹಾರಗಳನ್ನು ಮುಚ್ಚಿಹಾಕಲು ನಡೆಸುತ್ತಿರುವ ಹುನ್ನಾರಗಳನ್ನು ತಡೆಯುವ ಉದ್ದೇಶದಿಂದ ನಾವು ಚುನಾವಣೆ ನಡೆಸದಂತೆ ಮನವಿ ಮಾಡಿದ್ದೆವು. ಆದರೆ, ಇದೀಗ ಸಂಸ್ಥೆಯ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಿಗದಿಯಾಗಿದೆ. ಒಳ್ಳೆಯ ಉದ್ದೇಶದಿಂದ ಚುನಾವಣೆ ನಡೆಸುತ್ತಿಲ್ಲ. ಆದ್ದರಿಂದ ಜನತೆಗೆ ಸಂಸ್ಥೆಯಲ್ಲಿ ನಡೆದಿರುವ ಹಗರಣಗಳನ್ನು ತಿಳಿಸಬೇಕು ಎಂಬ ಉದ್ದೇಶದಿಂದ ಈ ಅಕ್ರಮ ಚುನಾವಣೆಯಲ್ಲಿ ಭಾಗಿಯಾಗಬಾರದು ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರು ನಿರ್ಧರಿಸಿದ್ದಾರೆ ಎಂದರು.

ಮಾತನಾಡದ ಎಚ್‌ಡಿಕೆ:

ತಾಲೂಕಿನಲ್ಲಿ ಆಡಳಿತ ಪಕ್ಷವಾಗಿರುವ ಜೆಡಿಎಸ್ ಸಂಸ್ಥೆಯಲ್ಲಿ ನಡೆದಿರುವ ಅಕ್ಕಿ ಹಗರಣವನ್ನು ಖಂಡಿಸಲಿಲ್ಲ. ಆದರೆ, ಚುನಾವಣೆ ಮುಂದೂಡಿಕೆಯಾಗಿದ್ದಕ್ಕೆ ಪ್ರತಿಭಟನೆ ನಡೆಸಿದರು. ಕ್ಷೇತ್ರದ ಶಾಸಕರು ಆದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಗರಣದ ಕುರಿತು ಇದುವರೆಗೆ ಒಂದು ಮಾತನಾಡಿಲ್ಲ. ಆದರೆ, ಸಂಸದ ಡಿ.ಕೆ.ಸುರೇಶ್ ಚನ್ನಪಟ್ಟಣದಲ್ಲಿ ನಡೆಸಿರುವ ಜನಸಂಪರ್ಕ ಸಭೆ ಕುರಿತಂತೆ ವಿಧಾನಸಭೆಯಲ್ಲಿ ಬೇರೆಯವರ ಮೂಲಕ ಹಕ್ಕುಚ್ಯುತಿ ಮಂಡಿಸಿದ್ದಾರೆ ಎಂದು ಕಿಡಿಕಾರಿದರು.

ಸಂಸದ ಡಿ.ಕೆ.ಸುರೇಶ್ ಜನರ ಸಮಸ್ಯೆ ಅರಿತು ಅದನ್ನು ಪರಿಹರಿಸಲು ಜನಸಂಪರ್ಕ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಕಂಡುಬಂದ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಬಹುತೇಕ ಎಲ್ಲ ಕಡೆ ಜನ ರಸ್ತೆ ಸಮಸ್ಯೆಯ ಕುರಿತು ಗಮನ ಸೆಳೆದಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನ ರಸ್ತೆ ಅಭಿವೃದ್ಧಿಗೆ 9 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಕುಮಾರ್, ಮುಖಂಡರಾದ ರಮೇಶ್, ಪಾಪಣ್ಣ, ಕೆ.ಟಿ.ಲಕ್ಷ್ಮಮ್ಮ, ಕೋಕಿಲರಾಣಿ, ಎಂ.ಎ.ಕರಣ್ ಇತರರಿದ್ದರು.ಬಾಕ್ಸ್‌............

ಹಳಿತಪ್ಪಿದ ತಾಲೂಕು ಆಡಳಿತ

ನಗರಸಭೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಅಲ್ಲಿನ ಭ್ರಷ್ಟಾಚಾರ ಕಂಡು ರೋಸಿ ಹೋಗಿ ಜೆಡಿಎಸ್‌ನಿಂದ ನಗರಸಭೆ ಅಧ್ಯಕ್ಷ ಪ್ರಶಾಂತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದೇ ಅಲ್ಲಿನ ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಆಶ್ರಯ ಬಡಾವಣೆ, ಕಣ್ವ ಲೇಔಟ್ ಸಮಸ್ಯೆ ದಶಕಗಳಿಂದ ಹಾಗೆಯೇ ಇದೆ. 20 ವರ್ಷದಿಂದ ಆಡಳಿತ ನಡೆಸಿದ ಸಿ.ಪಿ.ಯೋಗೇಶ್ವರ್ ಆಗಲಿ ಈಗ ಆಡಳಿತ ನಡೆಸುತ್ತಿರುವ ಕುಮಾರಸ್ವಾಮಿ ಆಗಲಿ ಇದನ್ನು ಪರಿಹರಿಸುವ ಕೆಲಸ ಮಾಡಲಿಲ್ಲ. ಆದರೆ ಜನರ ಸಮಸ್ಯೆ ಪರಿಹರಿಸಲು ಸಂಸದರು ಜನಸಂಪರ್ಕ ಸಭೆ ನಡೆಸಿದರೆ ಅದನ್ನು ಎಚ್‌ಡಿಕೆ ಪ್ರಶ್ನಿಸುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್‌ ಆಕ್ರೋಶ ವ್ಯಕ್ತಪಡಿಸಿದರು.

ಪೊಟೋ೨೨ಸಿಪಿಟಿ೧: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.