ಸಾರಾಂಶ
ರಾಹುಲ್ ಗಾಂಧಿ ಅವರ ತೇಜೋವಧೆಗೆ, ದಡ್ಡ ಎಂದು ಬಿಂಬಿಸಲು 8 ಸಾವಿರ ಕೋಟಿ ರೂ. ಖರ್ಚು ಮಾಡಿದರೂ ಅವರ ವರ್ಚಸ್ಸು ಕಡಿಮೆ ಆಗಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ತಿಳಿಸಿದರು.
ಮೈಸೂರು: ಮಹಾತ್ಮ ಗಾಂಧಿ, ಡಾ. ಅಂಬೇಡ್ಕರ್, ಡಾ. ಬಾಬು ಜಗಜೀವರಾಂ ಅವರ ಜಯಂತಿಗಳನ್ನು ಆಚರಿಸಿದರೇ ಸಾಲದು. ಅವರ ಆದರ್ಶ, ಸಿದ್ಧಾಂತವನ್ನು ಪಾಲಿಸಬೇಕು ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ತಿಳಿಸಿದರು.
ಮೈಸೂರಿನ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯು ಶುಕ್ರವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಂ ಅವರ ಜಯಂತಿಯಲ್ಲಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರ ಕೊಡುಗೆಯನ್ನು ಎಲ್ಲಾ ಜಾತಿ, ಧರ್ಮಗಳು ಪಡೆದುಕೊಂಡಿವೆ. ಆದರೆ, ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗಿದೆ. ಡಾ. ಅಂಬೇಡ್ಕರ್, ಗಾಂಧೀಜಿ, ಬಾಬೂಜಿ ಸೇರಿದಂತ ಪುಣ್ಯಾತ್ಮರು ಮೇಲಿಂದ ನಮ್ಮನ್ನು ನೋಡುತ್ತಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ವರ್ಚಸ್ಸು ಕಡಿಮೆ ಆಗಿಲ್ಲ
ರಾಹುಲ್ ಗಾಂಧಿ ಅವರ ತೇಜೋವಧೆಗೆ, ದಡ್ಡ ಎಂದು ಬಿಂಬಿಸಲು 8 ಸಾವಿರ ಕೋಟಿ ರೂ. ಖರ್ಚು ಮಾಡಿದರೂ ಅವರ ವರ್ಚಸ್ಸು ಕಡಿಮೆ ಆಗಿಲ್ಲ. ರಾಹುಲ್ ಗಾಂಧಿ ಅವರಿಗೆ ದೇಶದ ಮೇಲಿರುವ ಕಾಳಜಿ ಮತ್ತು ಬದ್ಧತೆ ಯಾರಿಗೂ ಇಲ್ಲ. ಭಾರತ ಜೋಡೋ ಯಾತ್ರೆ, ಭಾರತ ನ್ಯಾಯ್ ಯಾತ್ರೆಯ ಮೂಲಕ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಿದ್ದಾರೆ ಎಂದರು.
ಇದು ರಾಜಕೀಯ ಅಧಿಕಾರಕ್ಕಾಗಿ ನಡೆಸುತ್ತಿರುವುದಲ್ಲ. ದೇಶಕ್ಕೆ ಅಪತ್ತಾಗಿರುವ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಟ ನಡೆಸುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆದರೂ ರಾಹುಲ್ ಗಾಂಧಿ ಪ್ರಧಾನಿ ಹುದ್ದೆ ಸ್ವೀಕರಿಸುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.
ಪತ್ರಕರ್ತ ಕೆ. ದೀಪಕ್ ಮಾತನಾಡಿ, ಡಾ. ಅಂಬೇಡ್ಕರ್, ಬಾಬೂಜಿ ಅವರು ಈ ದೇಶದ ಉಸಿರು ಮತ್ತು ಹಸಿರು. ಬದುಕಿಗೆ ಹಸಿರು- ಉಸಿರು ಎರಡು ಮುಖ್ಯ. ಇವೆರಡು ಇಲ್ಲದೆ ಬದುಕಿಲು ಸಾಧ್ಯವಿಲ್ಲ ಎಂದರು.
ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಮೇಯರ್ ನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಎಂ. ಶಿವಣ್ಣ, ಅಶೋಕ, ವೆಂಕಟೇಶ್, ಲೋಕೇಶ್ ಕುಮಾರ್ ಮೊದಲಾದವರು ಇದ್ದರು.