ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣ ಪಂಚಾಯ್ತಿಗೆ 15 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದರೆ, ಇತ್ತ 14ನೇ ವಾರ್ಡ್ ಮತಗಟ್ಟೆಯಲ್ಲಿ ಮಹಿಳೆಯೊಬ್ಬರ ಮತದಾನದ ಹಕ್ಕುನ್ನು ಅಭ್ಯರ್ಥಿ ಪತಿ ಚಲಾಯಿಸಿದ ವಿಷಯವಾಗಿ ಕೆಲ ಹೊತ್ತು ಅಧಿಕಾರಿಗಳು ಹಾಗೂ ಜೆಡಿಎಸ್ ಅಭ್ಯರ್ಥಿ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.ಜೆಡಿಎಸ್ ಅಭ್ಯರ್ಥಿ ಶಶಿಕಲಾ ಎನ್. ಬಿರಾದಾರ್ ಅವರು ಬೇರೊಬ್ಬರ ಮತ ಚಲಾಯಿಸಲು ಏಕೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಪಶ್ನೆ ಹಾಕಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಇದಕ್ಕೆ ಜೆಡಿಎಸ್ ಅಭ್ಯರ್ಥಿ ಸಹೋದರ ಅಧಿಕಾರಿಗಳ ತಪ್ಪಿನಿಂದ ಸಮಸ್ಯೆಯಾಗಿದೆ ಎಂದು ಹಠ ಹಿಡಿದು ಕುಳಿತಾಗ ಪೊಲೀಸ್ ಸಿಬ್ಬಂದಿ ಕೈಕಾಲು ಹಿಡಿದುಕೊಂಡು ಮತಗಟ್ಟೆಯಿಂದ ಹೊರಹಾಕಿದರು.
ಪೊಲೀಸ್ ನಡೆ ಖಂಡಿಸಿ ಅಭ್ಯರ್ಥಿ ಹಾಗೂ ಸಹೋದರ ಕುಟುಂಬ ಸಹಿತ ತಾಲೂಕು ತಹಸೀಲ್ ಕಾರ್ಯಾಲಯದ ಎದುರು ನ್ಯಾಯಕ್ಕಾಗಿ ಧರಣಿ ನಡೆಸಿದರು. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.ಮತಗಟ್ಟೆ ಬಗ್ಗೆ ದೂರು:
14ನೇ ವಾರ್ಡ್ ಮತಗಟ್ಟೆ ಕೇಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪತಿಯಿಂದ ಪಾರ್ಶ್ವವಾಯು ಮತದಾರಳ ಮತ ಚಲಾಯಿಸಿದ್ದಕ್ಕೆ ಜೆಡಿಎಸ್ ಅಭ್ಯರ್ಥಿ ಶಶಿಕಲಾ ಎನ್. ಬಿರಾದಾರ್ ಅವರು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.ಮತಗಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಏಜೆಂಟ್ ಮತೊಬ್ಬರ ಮತ ಚಲಾಯಿಸಿದ್ದ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಾಗ ಯಾವುದೇ ಸ್ಪಂದನೆ ನೀಡಲಿಲ್ಲ. ಇನ್ನೊಬರ ಮತ ಬೇರೊಬ್ಬರು ಚಲಾಯಿಸಲು ಅವಕಾಶ ಕೊಟ್ಟಿದ್ದು ಸರಿಯಲ್ಲ. ಹೀಗಾಗಿ 14ನೇ ಮತಗಟ್ಟೆ ವಿಡಿಯೋ ಪರಿಶೀಲಿಸಿ ಮತದಾನ ಮಾಡಿದವರ ಮೇಲೆ ಕ್ರಮಕೈಗೊಳ್ಳಬೇಕು ಹಾಗೂ ಮರುಮತದಾನ ನಡೆಸಬೇಕು ಎಂದು ಆಗ್ರಹಿಸಿದರು.
ಇನ್ನುಳಿದ 15 ಮತಗಟ್ಟೆ ಕೇಂದ್ರಗಳಲ್ಲಿ ಸರದಿ ಸಾಲಿನಲ್ಲಿ ಮತದಾರರು ಹಕ್ಕನ್ನು ಚಲಾಯಿಸಿದರು. ವಯೋವೃದ್ಧರು ಹಾಗೂ ವಿಕಲಚೇತನರಿಗೆ ವ್ಹೀಲ್‌ಚೇರ್ ಹಾಗೂ ಟೆಂಟ್ ಸೌಲಭ್ಯ ಕಲ್ಪಿಸಿಕೊಡಲಾಗಿತ್ತು. ಪ್ರತಿ ಮತಗಟ್ಟೆ ಕೇಂದ್ರದಲ್ಲಿ ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಿದ್ದರಿಂದ ಅಹಿತಕರ ಘಟನೆ ನಡೆಯಲು ಆಸ್ಪದ ಇರಲಿಲ್ಲ. ಕರ್ತವ್ಯಕ್ಕೆ ನಿರತ ಸಿಬ್ಬಂದಿಗೆ ಉಪಹಾರ, ಮತದಾರರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು.ಶೇ.69.12ರಷ್ಟು ಮತದಾನ: ಬೆಳಗ್ಗೆ 7ರಿಂದ ಸಂಜೆ 5ಗಂಟೆವರೆಗೂ ನಡೆದ ಚುನಾವಣೆಯಲ್ಲಿ ಶೇ.69.12ರಷ್ಟು ಮತದಾನವಾಗಿದೆ. 16 ವಾರ್ಡ್ ಸೇರಿ ಒಟ್ಟು 12465 ಮತಗಳು ಇದ್ದು, ಪುರುಷರು-6370 ಪೈಕಿ 4421 ಮತ ಚಲಾಯಿಸಿದ್ದಾರೆ. ಮಹಿಳೆಯರು-6094 ಪೈಕಿ 4195 ಮತಗಳು ಚಲಾಯಿಸಿದ್ದು, ಒಟ್ಟು 8616 ಮತಗಳು ಚಲಾವಣೆಗಳಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.