ಕಾಂಗ್ರೆಸ್ ಅಭ್ಯರ್ಥಿ ಸದನದಲ್ಲಿ ಆಕಳಿಸುತ್ತಿದ್ರು: ಕೇಂದ್ರ ಸಚಿವ ಜೋಶಿ

| Published : May 25 2024, 12:49 AM IST

ಕಾಂಗ್ರೆಸ್ ಅಭ್ಯರ್ಥಿ ಸದನದಲ್ಲಿ ಆಕಳಿಸುತ್ತಿದ್ರು: ಕೇಂದ್ರ ಸಚಿವ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಲ್ಯಾಣ ಕರ್ನಾಟಕ ಪ್ರದೇಶ ಶೈಕ್ಷಣಿಕವಾಗಿ ದುರ್ಬಲವಾಗಿದೆ. 45 ಸಾವಿರ ತರಗತಿ ಕೋಣೆಗಳು ಸೋರುತ್ತಿವೆ.

ಬಳ್ಳಾರಿ: ಈ ಹಿಂದಿನ ಚುನಾವಣೆಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಈ ಭಾಗದ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಸದನದಲ್ಲೂ ಧ್ವನಿ ಎತ್ತಲಿಲ್ಲ. ನಿದ್ರೆಯಲ್ಲಿ ಆಕಳಿಸುವಾಗಷ್ಟೇ ಅವರು ಬಾಯಿ ತೆರೆದಿರಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಶೈಕ್ಷಣಿಕವಾಗಿ ದುರ್ಬಲವಾಗಿದೆ. 45 ಸಾವಿರ ತರಗತಿ ಕೋಣೆಗಳು ಸೋರುತ್ತಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬರೀ ಶೇ.53ರಷ್ಟು ಫಲಿತಾಂಶ ಬಂದಿದೆ. ಸಿಇಟಿ ಪರೀಕ್ಷೆಯಲ್ಲಿ ಔಟ್‌ಆಫ್ ಸಿಲಬಸ್ ನೀಡಲಾಗುತ್ತಿದೆ. ಶೈಕ್ಷಣಿಕವಾಗಿ ಪ್ರತಿ ಹಂತದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ತಪ್ಪು ಎಸಗುತ್ತಲೇ ಬಂದಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ ಎಂದರು.

ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕಾದ ಈ ಹಿಂದಿನ ಪದವೀಧರ ಕ್ಷೇತ್ರದ ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್‌ ಒಂದೇ ಒಂದು ಕೆಲಸ ಮಾಡದೇ ಟೈಮ್ ಪಾಸ್ ಮಾಡಿದ್ದಾರೆ. ಇನ್ನು ಕನ್ನಡವೇ ಬಾರದವರನ್ನು ಶಿಕ್ಷಣ ಮಂತ್ರಿಯನ್ನಾಗಿ ಮಾಡಿರುವ ಕಾಂಗ್ರೆಸ್ ಸರ್ಕಾರ, ರಾಜ್ಯದ ಇಡೀ ಶಿಕ್ಷಣ ವ್ಯವಸ್ಥೆಯೇ ದುರ್ಬಲವಾಗಿಸಿದೆ ಎಂದು ದೂರಿದರು.

ರಾಜ್ಯದ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಇವರಿಂದ ಯಾವ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಅಮರನಾಥ ಪಾಟೀಲ್ ಅವರನ್ನು ಚುನಾಯಿಸುವ ಮೂಲಕ ಕಲ್ಯಾಣ ಕರ್ನಾಟಕದ ಪ್ರಗತಿಗೆ ಪದವೀಧರರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಮೋದಿ 3ನೇ ಬಾರಿ ಪ್ರಧಾನಿ ಖಚಿತ:

ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ವಿದ್ಯುತ್, ರಸ್ತೆ, ಮೂಲ ಸೌಕರ್ಯ ಒದಗಿಸುವ ವಿಚಾರದಲ್ಲಿ ಭಾರತ ಮುಂಚೂಣಿಯಲ್ಲಿದೆ. ಮೋದಿ ಪ್ರಧಾನಿಯಾದ ಬಳಿಕ ದೇಶದ 18100 ಹಳ್ಳಿಗಳು ವಿದ್ಯುತ್‌ ಸಂಪರ್ಕ ಪಡೆದಿವೆ. ಭಾರತ ಆರ್ಥಿಕ ಶಕ್ತಿ ವೃದ್ಧಿಸಿಕೊಂಡ ಬಳಿಕ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಾಗಿದೆ ಎಂದು ಜೋಶಿ ತಿಳಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿದರು. ವಿಪ ಸದಸ್ಯ ಎನ್.ರವಿಕುಮಾರ್ ಪ್ರಾಸ್ತಾವಿಕ ಮಾತನಾಡಿದರು.

ಪಕ್ಷದ ಮುಖಂಡರಾದ ಕೆ.ಎಂ. ಮಹೇಶ್ವರಸ್ವಾಮಿ, ಡಾ.ಮಹಿಪಾಲ್, ಎಂ.ಎಸ್. ಸೋಮಲಿಂಗಪ್ಪ, ಬಿಐಟಿಎಂ ಕಾಲೇಜಿನ ಪ್ರಾಂಶುಪಾಲ ಭೂಪಾಲ್, ಎಸ್‌.ಗುರುಲಿಂಗನಗೌಡ, ಕೆ.ಎ.ರಾಮಲಿಂಗಪ್ಪ, ಹರಿಕುಮಾರ್, ಪ್ರಭು ಕಪ್ಪಗಲ್, ದಮ್ಮೂರು ಶೇಖರ್, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ ನಾಯ್ಡು, ಮಾರುತಿ ಪ್ರಸಾದ್ , ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಇದ್ದರು. ಉಡೇದ ಸುರೇಶ್, ಗುರುರಾಜ್ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು.