ಭದ್ರಕೋಟೆಯಲ್ಲಿ ಮತ್ತೆ ಕಾಂಗ್ರೆಸ್‌ ಸಂಭ್ರಮ

| Published : Jun 05 2024, 12:30 AM IST

ಸಾರಾಂಶ

ರಾಯಚೂರು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ.ಕುಮಾರ ನಾಯಕ ವಿಜಯ ಸಾಧಿಸಿ ಸಂಭ್ರಮಿಸಿದರು.

- ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಪರಿಶಿಷ್ಟ ಪಂಗಡಕ್ಕೆ ಮೀಸಲು ಹಾಗೂ ಪಕ್ಕದ ಯಾದಗಿರಿ ಜಿಲ್ಲೆಯನ್ನೊಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟಗೊಂಡಿದ್ದು, ಭದ್ರಕೋಟೆಯಾಗಿದ್ದ ಕ್ಷೇತ್ರ ಮತ್ತೆ ಕೈ ವಶವಾಗಿದೆ.

ಮಂಗಳವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಕ್ಷೇತ್ರದ ಮತದಾರರು ಜಿ.ಕುಮಾರ ನಾಯಕರ ಕೈ ಹಿಡಿದಿದ್ದು, ಹಾಲಿ ಸಂಸದ, ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಹೀನಾಯವಾಗಿ ಪರಾಭವಗೊಂಡಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಸ್ಥಳೀಯ ಎಸ್‌ಆರ್‌ಪಿಎಸ್‌ ಹಾಗೂ ಎಲ್‌ವಿಡಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರಸ್‌ ಆರಂಭದಿಂದ ಮುನ್ನಡೆ ಕಾಯ್ದುಕೊಂಡು ಭಾರಿ ಅಂತರದಲ್ಲಿ ಗೆಲುವು ಸಾಧಿಸಿದೆ.

ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 4,961 ಮತಗಳ ಮುನ್ನಡೆ ಸಾಧಿಸಿದ್ದು, ಉಳಿದ ಶೋರಾಪುರ (ಸುರಪುರ)ದಲ್ಲಿ 16,560, ಶಹಪುರ 9,585, ಯಾದಗಿರಿಯಲ್ಲಿ 5,722, ರಾಯಚೂರು ನಗರದಲ್ಲಿ 9,249, ಮಾನ್ವಿ 3,663, ದೇವದುರ್ಗ 22,005 ಮತ್ತು ಲಿಂಗಸುಗೂರಿನಲ್ಲಿ 18,424 ಮತಗಳಿಂದ ಕಾಂಗ್ರೆಸ್‌ ಪ್ರಾಬಲ್ಯ ಸಾಧಿಸಿದ್ದು ಗೆಲುವಿಗೆ ಮುಖ್ಯಕಾರಣವಾಗಿದೆ.

ಕಾಂಗ್ರೆಸ್‌ನ ಭದ್ರಕೋಟೆ: ಕಾಂಗ್ರೆಸ್ ಭದ್ರಕೋಟೆಯಂದೇ ಹೆಸರು ವಾಸಿಯಾಗಿರುವ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 1957 ರಿಂದ ನಡೆದ 17 ಚುನಾವಣೆಯಲ್ಲಿ 14 ಬಾರಿ ಕಾಂಗ್ರೆಸ್‌, ಎರಡು ಬಾರಿ ಬಿಜೆಪಿ ಮತ್ತು ತಲಾ ಒಂದು ಬಾರಿ ಜೆಡಿಎಸ್‌ ಹಾಗೂ ಪಕ್ಷೇತರರು ಗೆದಿದ್ದರು. ಆದರೆ 2009 ರಲ್ಲಿ ಬಳ್ಳಾರಿ ನಾಯಕರ ಪ್ರಭಾವ ಹಾಗೂ 2019 ರಲ್ಲಿ ಮೋದಿ ಅಲೆಯಿಂದಾಗಿ ಕ್ಷೇತ್ರದಲ್ಲಿ ಬಿಜೆಪಿ ವಿಜಯಗಳಿಸಿತ್ತು. ಈ ಬಾರಿ ನಡೆದ 18 ನೇ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ವಿಜಭೇರಿ ಮೊಳಗಿಸುವುದರ ಮುಖಾಂತರ 14ನೇ ಬಾರಿಗೆ ಗೆದ್ದು ದಾಖಲೆ ನಿರ್ಮಿಸಿದೆ.

ಜಿಲ್ಲೆಗೆ ಡಿಸಿಯಾಗಿ ಬಂದವರು ಇಂದು ಸಂಸದ 1999 ರಿಂದ 2002 ವರೆಗೆ ರಾಯಚೂರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜಿ.ಕುಮಾರ ನಾಯಕ ನಂತರದ ದಿನಗಳಲ್ಲಿ ರಾಯಚೂರು ಜಿಲ್ಲೆಯೊಂದಿಗೆ ನಿರಂತರವಾಗಿ ಒಡನಾಟ ಇಟ್ಟುಕೊಂಡಿದ್ದರು. ಬೆಂಗಳೂರು ಜನ್ಮಭೂಮಿಯಾಗಿದ್ದರು ರಾಯಚೂರು ಕರ್ಮಭೂಮಿ ಎಂದು ಭಾವಿಸಿರುವ ಜಿ.ಕುಮಾರ ನಾಯಕ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ನಂತರವೂ, ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ, ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾಗಿ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿ ಜಿಲ್ಲೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು. ಕಳೆದ 2023 ಸೆಪ್ಚೆಂಬರ್‌ನಲ್ಲಿ ನಿವೃತ್ತಿ ಹೊಂದಿದ ಜಿ.ಕುಮಾರ ನಾಯಕ ಅವರು ಪ್ರಸ್ತುತ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲಿಯೇ ಗೆದ್ದು ಲೋಕಸಭೆ ಪ್ರವೇಶಿಸಿ ದಾಖಲೆ ಬರೆದಿದ್ದಾರೆ.