ಸಾರಾಂಶ
ಬೆಳಗಾವಿ : ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಮೈಸೂರು ದಸರಾಕ್ಕಿಂತ ಅತೀ ವಿಜೃಂಭಣೆಯಿಂದ ಬೆಳಗಾವಿಯಲ್ಲಿ ಆಚರಣೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿ ಎಐಸಿಸಿ ಅಧಿವೇಶನದ ಶತಮಾನೋತ್ಸವ ಆಚರಣೆ ಕುರಿತು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ 1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಐತಿಹಾಸಿಕ ಸ್ಥಳವಾಗಿರುವ ವೀರಸೌದದಿಂದ 2028 ಚುನಾವಣಾ ರಣಕಹಳೆ ಮೊಳಗಿಸಲಾವುದು ಎಂದು ತಿಳಿಸಿದರು.
ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.26 ಮತ್ತು 27 ರಂದು ಬೆಳಗಾವಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಮಾಹಿತಿ ನೀಡಿದ ಅವರು, ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಸಂಸದರು ಹಾಗೂ ಕಾರ್ಯಕಾರಿಣಿ ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.ಶತಮಾನೋತ್ಸವವನ್ನು ಮೆಲುಕು ಹಾಕಲು, ಎರಡು ದಿನಗಳ ಕಾಲ ಬೆಳಗಾವಿ ನಗರ ಹಬ್ಬದ ವಾತಾವರಣದಿಂದ ಮುಗಿಯಲಿದೆ. ಈ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಐತಿಹಾಸಿಕ ಪಯಣವನ್ನು ಸ್ಮರಿಸಿ ಭವಿಷ್ಯದ ಕಾರ್ಯಯೋಜನೆಗಳನ್ನು ರೂಪಿಸಲು ತಯಾರಾಗುತ್ತಿದೆ ಎಂದರು.
ನಡೆಯಲಿದೆ ಅದ್ಧೂರಿ ಕಾರ್ಯಕ್ರಮ:
ಶತಮಾನೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಭಾಗವಹಿಸುವ ಮೂಲಕ ಅದ್ಧೂರಿ ಸಮಾರಂಭದ ಸಿದ್ಧತೆಗಳು ನಡೆಯುತ್ತಿವೆ. ಬೆಳಗಾವಿಯ ಜನತೆ ಈ ಮಹತ್ವದ ಕ್ಷಣವನ್ನು ಸ್ಮರಿಸುವಂತೆ ಶತಮಾನೋತ್ಸವ ಆಯೋಜನೆಯು ಸಾಂಸ್ಕೃತಿಕ ಹಾಗೂ ರಾಜಕೀಯ ತಳಹದಿಯನ್ನು ಬಲಪಡಿಸಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಇಲ್ಲಿಂದಲೇ ಚುನಾವಣಾ ಅಬ್ಬರ ಶುರುವಾಗಲಿದೆ. ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಐತಿಹಾಸಿಕ ಕಾರ್ಯಕ್ರಮ ನೋಡಿ ಕಣ್ತುಂಬಿಕೊಳ್ಳಬೇಕು. ಯಾವುದೇ ಸಮಸ್ಯೆ ಆಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗುದು ಎಂದರು.ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಸ್ವಾಭಿಮಾನದ ಕಿಚ್ಚು ಇಲ್ಲಿಂದಲೇ ಮೊಳಗಿಸಬೇಕು. ಕಾಂಗ್ರೆಸ್ ಕಾರ್ಯಕರ್ತರು ಭವಿಷ್ಯಕ್ಕಾಗಿ, ನಮ್ಮ ಶಕ್ತಿ, ಇತಿಹಾಸ ಮುಂದೆ ಯಾವುದೇ ಇಲ್ಲ. ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಸಚಿವರು, ಶಾಸಕರು ಮುಂದಾಗಿ ಎಂದು ಕರೆ ನೀಡಿದರು.ಸಭೆಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಸತೀಶ ಜಾರಕಿಹೊಳಿ, ಆರ್.ಬಿ.ತಿಮ್ಮಾಪೂರ, ಸಂತೋಷ ಲಾಡ್, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಆಸೀಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ, ವಿನಯ ನಾವಲಗಟ್ಟಿ ಇತರರು ಉಪಸ್ಥಿತರಿದ್ದರು.
ಸಿಪಿಇಡಿ ಶಾಲಾ ಮೈದಾನಕ್ಕೆ ಡಿಸಿಎಂ ಭೇಟಿ, ಪರಿಶೀಲನೆ
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಡಿ.27 ರಂದು ಸಾರ್ವಜನಿಕ ಕಾರ್ಯಕ್ರಮ ನಡೆಯುವ ಬೆಳಗಾವಿ ಕ್ಲಬ್ ರಸ್ತೆಯ ಸಿಪಿಇಡಿ ಶಾಲಾ ಮೈದಾನಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ದೇಶದ ಕಾಂಗ್ರೆಸ್ ಗಣ್ಯ ನಾಯಕರು ಆಗಮಿಸಲಿದ್ದಾರೆ. ನೂರು ವರ್ಷದ ಇತಿಹಾಸಕ್ಕೆ ಸಮಾವೇಶ ಸಾಕ್ಷಿಯಾಗಲಿದೆ. ಈ ಸಮಾವೇಶಕ್ಕೆ 150 ಜನ ಎಂಪಿಗಳು 40 ಬಿಸಿಸಿ ಅಧ್ಯಕ್ಷರುಗಳು, ಕಾಂಗ್ರೆಸ್ ಸದಸ್ಯರು, ಸಿಎಂಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
-ಡಿ.ಕೆ.ಶಿವಕುಮಾರ್, ಡಿಸಿಎಂ.