ರಕ್ಷಾ, ಮೊಯ್ಲಿ, ರೆಡ್ಡಿ ಪರ ಪೈಪೋಟಿ ನಡೆದಿದ್ದು, ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ಇನ್ನೂ ಕಗ್ಗಂಟಾಗಿ ಉಳಿದಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಕೋಲಾರ ಕ್ಷೇತ್ರದ ಟಿಕೆಟ್‌ ಹಂಚಿಕೆ ಗೊಂದಲ ಸೃಷ್ಟಿಸಿರುವ ನಡುವೆಯೇ ಚಿಕ್ಕಬಳ್ಳಾಪುರ ಕ್ಷೇತ್ರವೂ ಸಹ ಕಾಂಗ್ರೆಸ್‌ ಹೈಕಮಾಂಡ್‌ ಪಾಲಿಗೆ ತುಸು ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.

ಚಿಕ್ಕಬಳ್ಳಾಪುರಕ್ಕೆ ರಾಜ್ಯ ನಾಯಕತ್ವ ರಕ್ಷಾ ರಾಮಯ್ಯ ಹೆಸರು ಶಿಫಾರಸು ಮಾಡಿದ್ದರೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನ ಕೈ ಬಿಟ್ಟಿಲ್ಲ.

ಇದರ ಜತೆಗೆ ಇದೀಗ ಜಿಲ್ಲೆಯ ಶಾಸಕರು ಮಾಜಿ ಸಚಿವ ಶಿವಶಂಕರ ರೆಡ್ಡಿ ಪರ ಒತ್ತಡ ಆರಂಭಿಸಿದ್ದಾರೆ. ಮತ್ತೊಂದೆಡೆ ರಕ್ಷಾ ರಾಮಯ್ಯ ಬದಲಿಗೆ ವೀರಪ್ಪ ಮೊಯ್ಲಿ ಅಥವಾ ಶಿವಶಂಕರ ರೆಡ್ಡಿ ಅವರಿಗೆ ಟಿಕೆಟ್‌ ನೀಡುವಂತೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ. 

ಹೀಗಾಗಿ ಈ ಕ್ಷೇತ್ರವೂ ಹೈಕಮಾಂಡ್‌ಗೆ ತಲೆನೋವು ತಂದೊಡ್ಡಿದೆ.ಉಳಿದಂತೆ ಬಳ್ಳಾರಿ (ಶಾಸಕ ತುಕಾರಾಂ) ಹಾಗೂ ಚಾಮರಾಜನಗರ (ಸಚಿವ ಡಾ. ಎಚ್.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್) ಕ್ಷೇತ್ರಗಳಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ.