ಮನರೇಗಾ ಯೋಜನೆಯನ್ನು ಬದಲಿಸಲು ಹೊರಟ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ ಮತ್ತು ಈ ಬಗ್ಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವ ಹೇಳಿದರು.

ಕುಮಟಾ: ಮನರೇಗಾ ಯೋಜನೆಯನ್ನು ಬದಲಿಸಲು ಹೊರಟ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ ಮತ್ತು ಈ ಬಗ್ಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನರೇಗಾ ಯೋಜನೆ ಬದಲಾಯಿಸಲು ಹೊರಟಿದ್ದಾರೆ. ಈ ಬಗ್ಗೆ ಪಾರ್ಲಿಮೆಂಟಿನಲ್ಲಿ ಚರ್ಚೆ ಆಗಿಲ್ಲ. ಯೋಜನೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೆಸರು ಬದಲಿಸಲು ಕಾರಣವೇನು? ಗ್ರಾಮೀಣ ಭಾಗ ಸೇರಿದಂತೆ ದುಡಿಯುವ ಕೈಗಳಿಗೆ ಕನಿಷ್ಠ ೧೦೦ ದಿನ ಕೆಲಸ ನೀಡುವ ಉತ್ತಮ ಯೋಜನೆಯಾಗಿತ್ತು. ಈ ಹಿಂದೆ ಪೂರ್ತಿ ಹಣ ಕೇಂದ್ರ ಸರ್ಕಾರ ಕೊಡುತ್ತಿತ್ತು. ಈಗ ಕೇಂದ್ರ ಮತ್ತು ರಾಜ್ಯದ ಪಾಲು ಶೇ. ೬೦ ಮತ್ತು ಶೇ. ೪೦ ಮಾಡಿರುವ ಜತೆಗೆ ಯಾವ ಯಾವ ಕಾಮಗಾರಿ ಮಾಡಬೇಕು ಎಂದು ಅವರೇ ತೀರ್ಮಾನ ತೆಗೆದುಕೊಳ್ಳುವುದಾದರೆ ರಾಜ್ಯ ಸರ್ಕಾರಕ್ಕೆ ಏನು ಕೆಲಸ? ದೆಹಲಿಯಲ್ಲಿ ಕುಳಿತು ದೂರದ ಗ್ರಾಮೀಣ ಭಾಗದಲ್ಲಿ ಆಗಬೇಕಾದ ಕೆಲಸಗಳ ನಿರ್ಣಯ ಸರಿ ಅಲ್ಲ. ಹೀಗಾಗಿ ಕಾಂಗ್ರೆಸ್‌ನಿಂದ ಎಲ್ಲ ರಾಜ್ಯಗಳಲ್ಲಿ ಪ್ರತಿಭಟಿಸಲು ಯೋಜಿಸಿದೆ ಎಂದರು.

ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ಉಪಯೋಗಿಸಿಕೊಂಡು ವಿರೋಧ ಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಚುನಾವಣಾ ಆಯೋಗ ಎಸ್‌ಐಆರ್ ನೆಪದಲ್ಲಿ ಬಿಹಾರ ಮತ್ತು ಇತರ ರಾಜ್ಯಗಳಲ್ಲಿ ಮತ ಕಡಿತ ಮಾಡಿದೆ. ಕರ್ನಾಟಕದಲ್ಲೂ ಎಸ್‌ಐಆರ್ ನಡೆಯಲು ಬಿಡುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವಕರ ಮಾತನಾಡಿ, ವಿಬಿ ಜಿ ರಾಮ್‌ ಜಿ ವಿರುದ್ಧ ಪ್ರತಿ ಗ್ರಾಪಂ ಎದುರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದರು.

ಬ್ಲಾಕ್ ಅಧ್ಯಕ್ಷ ಭುವನ್ ಭಾಗ್ವತ್, ಹೊನ್ನಪ್ಪ ನಾಯಕ, ರತ್ನಾಕರ ನಾಯ್ಕ, ಪದಾಧಿಕಾರಿಗಳಾದ ವಿ.ಎಲ್. ನಾಯ್ಕ, ಅಶೋಕ ಗೌಡ, ನಾಗೇಶ ನಾಯ್ಕ, ಮಧುಸೂದನ ಶೇಟ್, ಜಗದೀಶ ಹರಿಕಂತ್ರ, ಜಗದೀಶ ನಾಯಕ, ಕೃಷ್ಣಾನಂದ ವೆರ್ಣೇಕರ, ಪ್ರದೀಪ ನಾಯಕ ದೇವರಬಾವಿ, ಭಾಸ್ಕರ ಪಟಗಾರ, ವೈಭವ ನಾಯ್ಕ ಇದ್ದರು.