ದೇಶ ತುಂಡರಿಸುವುದೇ ಕಾಂಗ್ರೆಸ್ ಸಂಸ್ಕೃತಿ: ಕೋಟ ಶ್ರೀನಿವಾಸ್ ಪೂಜಾರಿ

| Published : Feb 03 2024, 01:48 AM IST

ದೇಶ ತುಂಡರಿಸುವುದೇ ಕಾಂಗ್ರೆಸ್ ಸಂಸ್ಕೃತಿ: ಕೋಟ ಶ್ರೀನಿವಾಸ್ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿಯಲ್ಲಿ ಶುಕ್ರವಾರ, ಕೊಡಗು ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಕಾರ್ಯಕ್ರಮದಲ್ಲಿ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂಬ ಸಂಸದ ಡಿ.ಕೆ ಸುರೇಶ್ ಹೇಳಿಕೆಯ ವಿಚಾರಕ್ಕೆ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ನ ಒಟ್ಟು ನೀತಿ ಯಾವತ್ತೂ ದೇಶವನ್ನು ಜೋಡಿಸುವುದಾಗಿರಲಿಲ್ಲ. ತುಂಡು ಮಾಡುವುದೇ ಅವರ ನೀತಿ ಆಗಿತ್ತು ಎಂದು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಡಿಕೇರಿ ಒಂದೆಡೆ ರಾಹುಲ್ ಗಾಂಧಿಯವರು ಭಾರತ್ ಜೋಡೋ ಎನ್ನುತ್ತಾರೆ, ಮತ್ತೊಂದೆಡೆ ಸಂಸದ ಡಿ.ಕೆ. ಸುರೇಶ್ ಅವರು ಭಾರತವನ್ನು ತುಂಡು ಮಾಡಬೇಕು ಎನ್ನುತ್ತಾರೆ. ಕಾಂಗ್ರೆಸ್ ನ ಒಟ್ಟು ಸಂಸ್ಕೃತಿಯೇ ಅಂಥದ್ದು ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. ಕೊಡಗು ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಕಾರ್ಯಕ್ರಮದಲ್ಲಿ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂಬ ಸಂಸದ ಡಿ.ಕೆ ಸುರೇಶ್ ಹೇಳಿಕೆಯ ವಿಚಾರಕ್ಕೆ ಮಡಿಕೇರಿಯಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನ ಒಟ್ಟು ನೀತಿ ಯಾವತ್ತೂ ದೇಶವನ್ನು ಜೋಡಿಸುವುದಾಗಿರಲಿಲ್ಲ. ತುಂಡು ಮಾಡುವುದೇ ಅವರ ನೀತಿ ಆಗಿತ್ತು. ಅವರ ನಡವಳಿಕೆ, ಭಾವನೆ ಮತ್ತು ಅವರ ಹೃದಯದ ಭಾಷೆಯನ್ನು ಡಿ.ಕೆ. ಸುರೇಶ್ ಹೇಳಿದ್ದಾರೆ. ಹಾಗಾಗಿ ಇದು ಅತ್ಯಂತ ಖಂಡನಾರ್ಹವಾದಂತ ಹೇಳಿಕೆ ಎಂದರು. ನರೇಂದ್ರ ಮೋದಿ ಅವರು ಪ್ರಧಾನಿ ಆಗುವಾಗ ಭಾರತವನ್ನು ತುಂಡು ತುಂಡು ಮಾಡುತ್ತೇವೆ ಎಂದು ಕೆಲವು ಶಕ್ತಿಗಳು ಹೇಳುತ್ತಿದ್ದವು. ಆ ಮಾದರಿ ಮಾತುಗಳನ್ನು ಡಿ.ಕೆ. ಸುರೇಶ್ ಮಾತನಾಡಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಭಾರತ ಎಂದೂ ಒಂದಾಗಿರಬೇಕು ಎನ್ನುವುದು ಬಿಜೆಪಿಯ ನಿಲುವು ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರೆಲ್ಲರೂ ಸುರೇಶ್ ಅವರ ಹೇಳಿಕೆಯನ್ನು ತೀವ್ರ ಪದಗಳಲ್ಲಿ ಖಂಡಿಸುತ್ತಾರೆ ಎಂದುಕೊಂಡಿದ್ದೆವು. ಮತ್ತು ಅವರಿಗೆ ಎಚ್ಚರಿಕೆ ಕೊಡುತ್ತಾರೆ, ಕ್ರಮ ಕೈಗೊಳ್ಳುತ್ತಾರೆ ಎಂದುಕೊಂಡಿದ್ದೆವು. ಆದರೆ ಡಿ.ಕೆ. ಸುರೇಶ್ ವಿಷಯದಲ್ಲಿ ಮೃದು ಧೋರಣೆ ತಳೆದಿರುವುದು ಕೂಡ ಖಂಡನಾರ್ಹ ವಿಷಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಬಜೆಟ್ ನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭವಿಷ್ಯವಿಲ್ಲದ ಬಜೆಟ್ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಕೋಟ ಪೂಜಾರಿ ಅವರು, ನಿರ್ಮಲಾ ಸೀತರಾಮನ್ ಮಂಡಿಸಿರುವುದು ಮಧ್ಯಂತರ ಬಜೆಟ್. ಯಾವುದೇ ಸರ್ಕಾರಗಳು ಚುನಾವಣೆ ಸಂದರ್ಭದಲ್ಲಿ ಚುನಾವಣಾ ಗಿಮಿಕ್ ಬಜೆಟ್ ಮಂಡಿಸುತ್ತವೆ. ಆದರೆ ನರೇಂದ್ರ ಮೋದಿಯವರ ಸರ್ಕಾರ ಮುಂದಿನ ತಲೆಮಾರಿಗೆ ಬೇಕಾದ ಬಜೆಟ್ ಮಂಡಿಸಿದೆ. ಯಾವುದೇ ಚುನಾವಣಾ ಗಿಮಿಕ್ ಮಾಡಿಲ್ಲ. ಮೀನುಗಾರರಿಗೆ, ಪ್ರವಾಸೋದ್ಯಮಕ್ಕೆ ನೀಡಿರುವ ಯೋಜನೆಗಳು ದೇಶವನ್ನು ಪ್ರಗತಿಯೆಡೆಗೆ ಕೊಡೊಯ್ಯಬಲ್ಲವು. ಹೀಗಾಗಿ ಇದೊಂದು ಅಭೂತಪೂರ್ವ ಬಜೆಟ್ ಎಂದು ಮೇಲ್ಮನೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.