ಸೋಲಿನ ಭೀತಿಯಿಂದ ಕಾಂಗ್ರೆಸ್‌ ಹಣ ಹಂಚಿಕೆ

| Published : May 06 2024, 12:35 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಕಾಂಗ್ರೆಸ್‌ಗೆ ಸೋಲಿನ ಭೀತಿ ಕಾಡುತ್ತಿರುವುದರಿಂದ ಅಧಿಕಾರ ದುರುಪಯೋಗಪಡಿಸಿಕೊಂಡು ಬೆಳಗಾವಿ ದಕ್ಷಿಣ ಮತಕ್ಷೇತ್ರ, ಗೋಕಾಕನಲ್ಲಿ ಹಣ ಹಂಚುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಆರೋಪಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಿನ ಭಿತಿಯಿಂದ ಹಣ ಹಂಚುತ್ತಿರುವ ಕಾಂಗ್ರೆಸ್‌ನವರು ಸಿಕ್ಕಿ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಾಂಗ್ರೆಸ್‌ಗೆ ಸೋಲಿನ ಭೀತಿ ಕಾಡುತ್ತಿರುವುದರಿಂದ ಅಧಿಕಾರ ದುರುಪಯೋಗಪಡಿಸಿಕೊಂಡು ಬೆಳಗಾವಿ ದಕ್ಷಿಣ ಮತಕ್ಷೇತ್ರ, ಗೋಕಾಕನಲ್ಲಿ ಹಣ ಹಂಚುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಆರೋಪಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಿನ ಭಿತಿಯಿಂದ ಹಣ ಹಂಚುತ್ತಿರುವ ಕಾಂಗ್ರೆಸ್‌ನವರು ಸಿಕ್ಕಿ ಬಿದ್ದಿದ್ದಾರೆ. ಹಣ ಹಂಚುತ್ತಿರುವುದು ಗೊತ್ತಾಗಿದೆ. ಶಹಾಪುರ ಪೊಲೀಸ್ ಠಾಣೆ ಹಂಚುವವರನ್ನು ಹಿಡಿದುಕೊಡಲಾಗಿದೆ‌.‌ ಆದರೆ, ಹಿಡಿದುಕೊಟ್ಟವರನ್ನು ತಡರಾತ್ರಿವರೆಗೆ ಠಾಣೆಯಲ್ಲಿ ಇರಿಸಿಕೊಂಡು ಅವರ ಮೇಲೆ ಪ್ರಕರಣ ದಾಖಲಿಸುವ ಯತ್ನ ನಡೆದಿದೆ ಎಂದು ದೂರಿದರು.

ಇದು ಲೋಕಸಭೆ ಚುನಾವಣೆ ಆಗಿದ್ದು, ಜನರು ಹಣ ತೆಗೆದುಕೊಂಡು ಬಿಜೆಪಿಗೆ ಮತಹಾಕಲಿದ್ದಾರೆ‌. ಕಾಂಗ್ರೆಸ್‌ನವರು ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾನೇ ಪೊಲೀಸ್ ಕಮೀಷನರ್‌ಗೆ ಕರೆ ಮಾತನಾಡಿದೆ ಎಂದು ತಿಳಿಸಿದರು.

ಕಳೆದೊಂದು ತಿಂಗಳಿನಿಂದ ಜಿಲ್ಲೆಯಲ್ಲಿ ಪ್ರಚಾರ ಮಾಡಿದ್ದೇವೆ. ಮಾರ್ಚ್‌ ತಿಂಗಳಲ್ಲಿ ಬೆಳಗಾವಿಗೆ ಬಂದಾಗ ದೊಡ್ಡ ಪ್ರಮಾಣದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸೇರಿ ರ್‍ಯಾಲಿ ಮಾಡಿ ಪ್ರೀತಿ ತೋರಿಸಿದರು. ನಾಮಪತ್ರ ಸಲ್ಲಿಸುವ ವೇಳೆ 50 ಸಾವಿರ ಜನ ಸೇರಿ ಬೆಂಬಲ ನೀಡಿದರು. ಪ್ರಧಾನಿ ಮೋದಿ ಬಂದು ಸಮಾವೇಶ ಮಾಡಿದಾಗಲೂ 1 ಲಕ್ಷ ಜನ ಸೇರಿದರು. ಇದನ್ನು ನೋಡಿದರೇ ದಿನಗಳು ಕಳೆದಂತೆ ಜನ ಹೆಚ್ಚೆಚ್ಚು ಬೆಂಬಲ ನೀಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಈ ಚುನಾವಣೆ 2ನೇ ಸ್ವಾತಂತ್ರ್ಯ ಹೋರಾಟವೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರೇ ಏನು ಹೇಳುತ್ತಿದ್ದಾರೆ? ಬ್ರಿಟಿಷರ ವಿರುದ್ಧ ಹೋರಾಟವೇ ಸ್ವಾತಂತ್ರ್ಯ ಹೋರಾಟ. ಕಾಂಗ್ರೆಸ್ ನಾಯಕರ ಬಳಿ ಮೋದಿ ಬಗ್ಗೆ ಮಾತನಾಡಲು ಏನು ವಿಷಯ ಇಲ್ಲ. ಅದಕ್ಕಾಗಿ ಹೀಗೆ ಮೋದಿ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬೆಳಗಾವಿ ಲೋಕಸಭಾ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ, ಸಭೆ ಸಮಾರಂಭ ನಡೆಸಿದ್ದಾಗ ಜನ ಬೆಂಬಲ ನೀಡಿದ್ದಾರೆ. ಗೋಕಾಕ್ ಹಾಗೂ ಅರಭಾವಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಭೆ ಮಾಡಿ ಜನ ಬೆಂಬಲ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರ, ಉತ್ತರ ಮತಕ್ಷೇತ್ರ ಹಾಗೂ ದಕ್ಷಿಣ ಮತಕ್ಷೇತ್ರದಲ್ಲಿ ಕೂಡ ಪಾದಯಾತ್ರೆ, ಸಮಾವೇಶ ಮಾಡಿದಾಗ ಜನ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ನಾನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಮೇಲೆ ಜಿಲ್ಲೆಯ ಎಲ್ಲ ನಾಯಕರು ಸಕ್ರಿಯವಾಗಿ ಭಾಗವಹಿಸಿ ಮತದಾರರಿಗೆ ಭೇಟಿಯಾಗಿ ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದ್ದಾರೆ. ಶಾಸಕರು, ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ತಾಲೂಕು ಮಟ್ಟದ ನಾಯಕರು ಸಕ್ರಿಯವಾಗಿ ಭಾಗವಹಿಸಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗಕ್ಕೆ ಭೂ ಸ್ವಾಧೀನ ನಡೆಯುತ್ತಿದೆ.‌ ಮಂಗಲ ಅಂಗಡಿಯವರು ₹310 ಕೋಟಿ ವೆಚ್ಚದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದ ಟರ್ಮಿನಲ್ ಎರಡರ ಕಾಮಗಾರಿ ನಡೆಯುತ್ತಿದೆ‌. ಇದರಿಂದ 10-15 ನಗರಗಳಿಗೆ ಸಂಪರ್ಕಕ ಆಗಲಿದೆ.‌ ಬರವು ದಿನಗಳಲ್ಲಿ ಬೆಳಗಾವಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ. ಕೈಗಾರಿಕೋದ್ಯಮಿ ಈ ಭಾಗದಲ್ಲಿ ಅಭಿವೃದ್ಧಿ ಮಾಡಲು ಅವಕಾಶ ಇದೆ.‌ ಸಾಂಬ್ರಾ ವಿಮಾನ ನಿಲ್ದಾಣ ಬೆಳವಣಿಗೆ ಆಗಲು ಹೊಸ ಕೈಗಾರಿಕೆಗಳು ಬರುವ ಸಾಧ್ಯತೆ ಇದೆ. ಖನಗಾಂವ ಕೈಗಾರಿಕಾ ಪ್ರದೇಶದಲ್ಲಿ ಭೂ ಸ್ವಾದಿನ ಮಾಡಿಕೊಂಡು ಇಡಲಾಗಿದೆ. ಆದರೆ, ಆ ಪ್ರದೇಶ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದರು.

ಗೋಷ್ಠಿಯಲ್ಲಿ ಸಂಸದೆ ಮಂಗಲ ಅಂಗಡಿ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ, ಡಾ.ವಿ.ಐ.ಪಾಟೀಲ, ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಗ್ರಾಮಿಣ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಎಂ.ಬಿ.ಜಿರಲಿ, ರಾಜೇಂದ್ರ ಹರಕುಣಿ, ಉಜ್ವಲಾ ಬಡವಣಾಚೆ, ಹನಮಂತ ಕೊಂಗಾಲಿ, ಶರತ ಹೆಗಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

--------

ಕೋಟ್‌....

ಮೋದಿ ಸರ್ಕಾರದಲ್ಲಿ ಮಹದಾಯಿ ಯೋಜನೆ ತೀರ್ಪು ನಮ್ಮ ಅವಧಿಯಲ್ಲಿ ಬಂದಿದೆ. ನಮಗೆ 13 ಟಿಎಂಸಿ ನೀರು ಹಂಚಿಕೆ ಆಗಿದೆ. ಪರಿಸರ ಇಲಾಖೆ ಅನುಮತಿ ಪಡೆದು ಅನುಷ್ಠಾನ ಕೆಲಸ ಮಾಡುತ್ತೇವೆ. ನಾನು ಸಂಸದನಾಗಿ ಗೆದ್ದ ಬಳಿಕ ಬೆಳಗಾವಿ ಅಭಿವೃದ್ಧಿಗೆ ಕೆಲಸವನ್ನು ಮಾಡುತ್ತೇನೆ. ಬೆಳಗಾವಿಯಲ್ಲಿ ಕೈಗಾರಿಕೋದ್ಯಮಿಗಳ ಬೆಳವಣಿಗೆಗೆ ಶ್ರಮಿಸುವೆ. ಐಟಿ ಉದ್ಯಮವನ್ನ ಬೆಳಗಾವಿಗೆ ತೆಗೆದುಕೊಂಡು ಬರುತ್ತೇನೆ. ಬೆಳಗಾವಿ 2ನೇ ರಾಜಧಾನಿ ಮಾಡಲು ಶ್ರಮಿಸುತ್ತೇನೆ. ಸವದತ್ತಿಗೆ ರೈಲ್ವೆ ಯೋಜನೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತೇವೆ. ರಾಮದುರ್ಗ ತಾಲೂಕಿನಲ್ಲಿ ಇರೋ ಶಬರಿ ಕೊಳ್ಳದ ಅಭಿವೃದ್ಧಿ ಮಾಡುತ್ತೇವೆ. ಬೈಲಹೊಂಗಲದಲ್ಲಿ ರಾಣಿ ಚನ್ನಮ್ಮ ಸ್ಮಾರಕವನ್ನು ರಾಷ್ಟ್ರೀಯ ಸ್ಮಾರಕ ಮಾಡಲು ಕ್ರಮಕೈಗೊಳ್ಳಲಾಗುವುದು. ಗೋಕಾಕ ಫಾಲ್ಸ್ ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ.

-ಜಗದೀಶ ಶೆಟ್ಟರ್‌, ಬಿಜೆಪಿ ಅಭ್ಯರ್ಥಿ.

ಬಾಕ್ಸ್‌..............

ದೂರು ಪ್ರತಿದೂರು ದಾಖಲುಬೆಳಗಾವಿ: ಗೋಕಾಕ ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಹಣ ಹಂಚಿಕೆ ಮಾಡಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ದೂರುದಾರರ ಎದುರೇ ಪರಿಶೀಲನೆ ಮಾಡಿದ ಸಮಯದಲ್ಲಿ ಹಣ ಸಿಕ್ಕಿರಲಿಲ್ಲ. ಬಳಿಕ ಮನೆಯೊಂದರಲ್ಲಿ ಹಣ ಇಡಲಾಗಿದೆಂಬ ಮಾಹಿತಿ ಹಿನ್ನೆಯಲ್ಲಿ ₹76 ಸಾವಿರ ಮತ್ತೊಂದು ಕಡೆ ₹1 ಲಕ್ಷ ಸೇರಿದಂತೆ ಒಟ್ಟು ₹1.76 ಲಕ್ಷ ಹಣ ಪತ್ತೆಯಾಗಿದ್ದು, ಈ ಕುರಿತು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.ನಂತರ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದ ಸಮಯದಲ್ಲಿ ಹಲ್ಲೆ ನಡೆಸಿ ಮೈ ಮೇಲಿನ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆಂದು ಕಾಂಗ್ರೆಸ್‌ನವರು ಬಿಜೆಪಿಯವರ ವಿರುದ್ಧ ದೂರು ನೀಡಿದ್ದಾರೆ. ಹಣ ಹಂಚಿಕೆ ಮತ್ತು ಜಾತಿನಿಂದನೆ ಮಾಡಿದ್ದಾರೆ ಎಂದು ಬಿಜೆಪಿಯರು ಎರಡು ಪ್ರತ್ಯೇಕ ಪ್ರತಿದೂರು ದಾಖಲಿಸಿದ್ದಾರೆ. ಚುನಾವಣಾ ಆಯೋಗದ ನಿಯಮದಂತೆ ಅಭ್ಯರ್ಥಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದರು.

ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್ ಮಾತನಾಡಿ, ಇನ್ನೂ ನಗರದ ಶಹಪೂರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪಹರಣ ಕುರಿತು ಬಿಜೆಪಿಯ ಪ್ರವೀಣ, ಗಿರೀಶ, ನಿತೀನ, ಅನಿಲ, ಜಯಂತ ಸೇರಿದಂತೆ ಒಟ್ಟು ಐವರ ವಿರುದ್ಧ ರಾದೇಶ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಮೊದಲಿಗೆ ಕಾಂಗ್ರೆಸನವರು ಹಣ ಹಂಚುತ್ತಿದ್ದಾರೆಂದು ಮಾಹಿತಿ ನೀಡಿದರು. ಅದರಂತೆ ಪರಿಶೀಲನೆ ನಡೆಸಲಾಗಿದ್ದು, ಇದುವರೆಗೆ ಯಾವುದೇ ಸಾಕ್ಷ್ಯಗಳನ್ನು ಮತ್ತು ದೂರನ್ನು ಕೊಟ್ಟಿಲ್ಲ. ಅಂಗಡಿ ಸೇರಿದಂತೆ ಇನ್ನೀತರ ಕಡೆಗಳಲ್ಲಿರುವ ಸಿಸಿಟಿವಿ ಕಾಮೆರಾ ಫೂಟೇಜ್‌ ಪರಿಶೀಲನೆ ನಡೆಸಲಾಗುತ್ತಿದ್ದು, ಸಾಕ್ಷ್ಯಗಳು ಲಭ್ಯವಾದಲ್ಲಿ ಕಾನೂನು ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.