ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸಂಘಟನೆ ಸೃಜನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜತೆಗೆ, ಕಾರ್ಯಕರ್ತರ ಅಭಿಪ್ರಾಯ ಹಾಗೂ ತಳಮಟ್ಟದ ಮುಖಂಡರೊಂದಿಗೆ ಚರ್ಚಿಸಿ ಸಮರ್ಥರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಎಐಸಿಸಿ ವೀಕ್ಷಕ, ಆಂಧ್ರ ಕಾಂಗ್ರೆಸ್‌ ಕಮಿಟಿ ಕಾರ್ಯಾಧ್ಯಕ್ಷ ಶೇಖ್ ಮಸ್ತಾನ್ ವಲಿ ಹೇಳಿದರು.

ಹಾವೇರಿ: ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸಂಘಟನೆ ಸೃಜನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜತೆಗೆ, ಕಾರ್ಯಕರ್ತರ ಅಭಿಪ್ರಾಯ ಹಾಗೂ ತಳಮಟ್ಟದ ಮುಖಂಡರೊಂದಿಗೆ ಚರ್ಚಿಸಿ ಸಮರ್ಥರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಎಐಸಿಸಿ ವೀಕ್ಷಕ, ಆಂಧ್ರ ಕಾಂಗ್ರೆಸ್‌ ಕಮಿಟಿ ಕಾರ್ಯಾಧ್ಯಕ್ಷ ಶೇಖ್ ಮಸ್ತಾನ್ ವಲಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಬದ್ಧರಾಗಿರುವ ಸಮರ್ಥ ಕಾರ್ಯಕರ್ತರಿಗೆ ಪಕ್ಷದಲ್ಲಿ ಸೂಕ್ತ ಅವಕಾಶ ಕಲ್ಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಬ್ಲಾಕ್ ಮಟ್ಟದಲ್ಲಿ ಹಲವು ಸಕ್ರಿಯ ಕಾರ್ಯಕರ್ತರಿದ್ದರೆ, ಅವರಲ್ಲಿ ನಾಯಕತ್ವದ ಸಾಮರ್ಥ್ಯ ಮತ್ತು ಅರ್ಹತೆ ಹೊಂದಿರುವವರನ್ನು ಗುರುತಿಸಿ ಅವಕಾಶ ನೀಡಲಾಗುವುದು. ಹೊಸ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯನ್ನು ಮೊದಲೇ ನಿರ್ಧರಿಸಿ ನೇಮಕ ಮಾಡುವುದಿಲ್ಲ. ಎಲ್ಲ ಆಕಾಂಕ್ಷಿಗಳ ಅಭಿಪ್ರಾಯ, ಸಾಮರ್ಥ್ಯ ಮತ್ತು ಅರ್ಹತೆಯನ್ನು ಪರಿಗಣಿಸಿ ಪ್ರಜಾಪ್ರಭುತ್ವದ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಕ್ಷದ ಸಂಘಟನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಯುವಕರಿಗೆ ಶೇ.50ರಷ್ಟು ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ. ಎಲ್ಲ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ನೀಡುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವಿದೆ ಎಂದರು.

ಪ್ರತಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅರ್ಜಿ ನಮೂನೆಗಳನ್ನು ಕಳುಹಿಸಲಾಗುವುದು. ಪ್ರತಿ ಬ್ಲಾಕ್ ಮಟ್ಟಕ್ಕೆ ಭೇಟಿ ನೀಡಿ ಅರ್ಧ ದಿನ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಅವರ ಅಭಿಪ್ರಾಯ, ಸಮಸ್ಯೆ ಹಾಗೂ ಸಲಹೆಗಳನ್ನು ವೈಯಕ್ತಿಕವಾಗಿ ಆಲಿಸಲಾಗುವುದು. ಈ ಅಭಿಪ್ರಾಯಗಳನ್ನು ಪಕ್ಷದ ಮೇಲ್ಮಟ್ಟದ ನಾಯಕತ್ವಕ್ಕೆ ತಲುಪಿಸಿ, ಪಕ್ಷದ ಮೂಲಕ ಹಾಗೂ ಸರ್ಕಾರದ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜಕೀಯದಲ್ಲಿ ಭಾಗವಹಿಸಿ ಜನಸೇವೆ ಮಾಡಲು ಅನೇಕ ಯುವಕರು, ವಿದ್ಯಾರ್ಥಿಗಳು, ರೈತರು ಹಾಗೂ ಮಹಿಳೆಯರು ಆಸಕ್ತಿ ಹೊಂದಿದ್ದಾರೆ. ರೈತರ ಸಮಸ್ಯೆ, ಯುವಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲು ಬಯಸುವವರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ಹೇಳಿದರು.

ಪಕ್ಷವನ್ನು ಬೂತ್ ಮಟ್ಟಕ್ಕೆ ಮಾತ್ರ ಸೀಮಿತಗೊಳಿಸದೆ, ಬ್ಲಾಕ್ ಹಾಗೂ ಪಂಚಾಯಿತಿ ಮಟ್ಟಕ್ಕೂ ಸಂಘಟನೆಯನ್ನು ವಿಸ್ತರಿಸಲಾಗುವುದು. ಬೂತ್ ಮಟ್ಟದಲ್ಲಿ ಈಗಾಗಲೇ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಶೇ.75ರಿಂದ 90ರಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಮುಂದಿನ ಹಂತದಲ್ಲಿ ಪ್ರತಿಯೊಂದು ಬ್ಲಾಕ್ ಹಾಗೂ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ಜನರ ಅಭಿಪ್ರಾಯ ಸಂಗ್ರಹಿಸಿ, ಅದರ ಆಧಾರದ ಮೇಲೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ದೇಶದ ಅತ್ಯಂತ ಬಲಿಷ್ಠ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪಾಲಿಸುವ ಸಂಘಟನೆಯಾಗಿ ರೂಪಿಸುವ ವಿಶ್ವಾಸವಿದೆ. ಜನರ ಸಮಸ್ಯೆಗಳನ್ನು, ವಿಶೇಷವಾಗಿ ಭೂ ವಿವಾದ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಜನರ ಪರವಾಗಿ ಕೈಗೆತ್ತಿಕೊಂಡು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪಕ್ಷ ಕಾರ್ಯನಿರ್ವಹಿಸಲಿದೆ ಎಂದರು.ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ನಮೂನೆಯನ್ನು ಮುಖಂಡರು ಬಿಡುಗಡೆಗೊಳಿಸಿದರು.

ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಯಾಸೀರ್‌ಖಾನ್ ಪಠಾಣ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ನೆಹರು ಓಲೇಕಾರ, ಡಿ. ಬಸವರಾಜ, ಕೊಟ್ರೇಶಪ್ಪ ಬಸೇಗಣ್ಣಿ, ಆನಂದಸ್ವಾಮಿ ಗಡ್ಡದೇವರಮಠ, ಷಣ್ಮುಖ ಶಿವಳ್ಳಿ ಇತರರು ಇದ್ದರು.