ಸೈನಿಕರಿಗೆ ಆತ್ಮಸ್ಥೈರ್ಯ ತುಂಬದ ಕಾಂಗ್ರೆಸ್: ಕೋಟಾ

| Published : Mar 26 2024, 01:21 AM IST

ಸಾರಾಂಶ

ಅಂದು ಚೀನಾ ಗಡಿಯಲ್ಲಿ ಶಸ್ತ್ರಾಸ್ತ್ರ, ಮದ್ದು ಗುಂಡುಗಳಿಲ್ಲದೆ ಅಸಹಾಯಕರಾದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿ ಸಹಕಾರ ನೀಡದ ಕಾಂಗ್ರೆಸ್ ಪಕ್ಷ ಇಂದು ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ನಾಚಿಗೆಗೇಡಿನ ಸಂಗತಿ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣದ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ಬಾಳೆಹೊನ್ನೂರು, ಖಾಂಡ್ಯ ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಅಂದು ಚೀನಾ ಗಡಿಯಲ್ಲಿ ಶಸ್ತ್ರಾಸ್ತ್ರ, ಮದ್ದು ಗುಂಡುಗಳಿಲ್ಲದೆ ಅಸಹಾಯಕರಾದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿ ಸಹಕಾರ ನೀಡದ ಕಾಂಗ್ರೆಸ್ ಪಕ್ಷ ಇಂದು ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ನಾಚಿಗೆಗೇಡಿನ ಸಂಗತಿ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣದ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಾಳೆಹೊನ್ನೂರು, ಖಾಂಡ್ಯ ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಆರ್ಥಿಕ ಸಮಾನತೆಗೆ ದೇಶದ ಚಿನ್ನವನ್ನು ಇನ್ನೊಂದು ದೇಶಕ್ಕೆ ಅಡವಿಟ್ಟು ಸಾಲ ಮಾಡಿಕೊಂಡಿದ್ದ ಭಾರತ ಇಂದು ವಿಶ್ವದ 5 ನೇ ಆರ್ಥಿಕ ಬಲಾಢ್ಯ ರಾಷ್ಟ್ರವಾಗಿದ್ದು, ಮೊದಲ ಸ್ಥಾನ ಪಡೆಯಬೇಕಾದರೆ ಮೋದಿಯನ್ನು ಮತ್ತೆ ಪ್ರಧಾನಿಯಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಹಿಂದೆ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದ 34 ಸಾವಿರ ಕೋಟಿ ನಿಧಿಯಲ್ಲಿ 11.5 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಸಿಕೊಂಡಿರುವ ಬಗ್ಗೆ ಸದನದಲ್ಲಿ ಪ್ರಶ್ನಿಸಿದಾಗ ಸಂಬಂಧಪಟ್ಟ ಸಚಿವರು ಉತ್ತರ ನೀಡಲಾಗದೇ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರವಾಗಿದ್ದರೂ ತಮಿಳುನಾಡಿಗೆ ನೀರು ಕೊಟ್ಟು ರಾಜ್ಯದ ಜನತೆಗೆ ದ್ರೋಹವೆಸಗಿದ್ದಾರೆ. ಹುಲಿಯುಗುರು ಪ್ರಕರಣ ಹುಟ್ಟು ಹಾಕಿ ಗೊಂದಲವೆಬ್ಬಿಸಿ ರಾಜಕಾರಣಗಳಿಗೆ ನೋಟೀಸ್ ನೀಡಿ ಅರ್ಚಕರನ್ನು ಜೈಲಿಗೆ ಕಳಿಸಿರುವುದೇ ರಾಜ್ಯ ಸರ್ಕಾರದ ಅತಿದೊಡ್ಡ ಸಾಧನೆ ಎಂದು ಲೇವಡಿ ಮಾಡಿದರು.

ಹಿಂದುಳಿದ ವರ್ಗದ ಅಧ್ಯಕ್ಷರನ್ನಾಗಿಸಿ ಬಿಜೆಪಿ ಸರ್ಕಾರ ಅಂದು ಜಯಪ್ರಕಾಶ್ ಹೆಗ್ಡೆಯವರನ್ನು ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಬಿಜೆಪಿ ಅಭ್ಯರ್ಥಿಗೆ ಹಿಂದಿ ಭಾಷಾಜ್ಞಾನದ ಅರಿವಿಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ.

ಅಯೋಧ್ಯೆ ರಾಮ ಮಂದಿರ ಗುದ್ದಲಿ ಪೂಜೆ ಸಮಯದಲ್ಲಿ ಸಿಎಂ ಸಿದ್ಧರಾಮಯ್ಯ ರಾಮ ಮಂದಿರ ನಿರ್ಮಾಣವಾದರೆ ರಕ್ತ ಪಾತವಾಗುತ್ತದೆ ಎಂದಿದ್ದು, ಅದ್ಯಾವುದನ್ನೂ ಲೆಕ್ಕಿಸದೆ ಮೋದಿ ಮಂದಿರವನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಲೋಕ ಸಭಾ ಚುನಾವಣೆ ಭಾರತ ದೇಶದ ಭವಿಷ್ಯ ರೂಪಿಸುವ ಚುನಾವಣೆ. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೊಷಣೆ ಕೂಗಿರುವುದನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದ್ದು, ಪರೋಕ್ಷವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ ದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಡಿ.ಎನ್.ಜೀವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಾಲತೇಶ್ ಸಿಗಸೆ, ಮುಖಂಡರಾದ ಎಸ್.ಎನ್.ರಾಮಸ್ವಾಮಿ, ಭಾಸ್ಕರ್ ವೆನಿಲ್ಲಾ, ಟಿ.ಎಂ.ಉಮೇಶ್, ಕಲ್ಮುರುಡಪ್ಪ, ಶೃಂಗೇರಿ ಶಿವಣ್ಣ, ಸಂತೋಷ್ ಕೋಟ್ಯಾನ್, ರಘು, ಟಿ.ಎಂ.ನಾಗೇಶ್, ಹೋಬಳಿ ಅಧ್ಯಕ್ಷ ಪ್ರಭಾಕರ್, ಪ್ರವೀಣ್ ಮಾಗಲು, ಕೆ.ಟಿ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.೨೫ಬಿಎಚ್‌ಆರ್ ೧:

ಬಾಳೆಹೊನ್ನೂರಿನ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ನಡೆದ ಬಾಳೆಹೊನ್ನೂರು, ಖಾಂಡ್ಯ ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿ ಶ್ರೀನಿವಾಸ ಪೂಜಾರಿ ಮಾತನಾಡಿದರು. ಡಿ.ಎನ್.ಜೀವರಾಜ್, ದೇವರಾಜಶೆಟ್ಟಿ, ಮಾಲತೇಶ್, ಭಾಸ್ಕರ್, ಪ್ರಭಾಕರ್ ಇದ್ದರು.