ಪುರಸಭೆ ಸದಸ್ಯರ ವಿಶ್ವಾಸ ಬಯಸದ ಕಾಂಗ್ರೆಸ್

| Published : Mar 18 2024, 01:47 AM IST

ಸಾರಾಂಶ

ಕಾಂಗ್ರೆಸ್ ಸ್ಥಳೀಯ ಮುಖಂಡರು ಪುರಸಭೆ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಆಡಳಿತ ನಡೆಸುವ ವೈಖರಿ ಸರಿಯಿಲ್ಲ. ತಿದ್ದಿಕೊಳ್ಳದಿದ್ದರೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಾಗುವುದು ಎಂದು ಸೊರಬ ಪುರಸಭೆ ಸದಸ್ಯ ಪ್ರಸನ್ನಕುಮಾರ್ ದೊಡ್ಮನೆ ಹೇಳಿದ್ದಾರೆ.

- ಸಚಿವ ಮಧು ಬಂಗಾರಪ್ಪ ಉತ್ತಮ ಆಡಳಿತ ಮಾಡುತ್ತಿದ್ದಾರೆ. ಆದರೆ, ಸ್ಥಳೀಯ ಮುಖಂಡರ ವರ್ತನೆ ಸರಿಯಿಲ್ಲ

- ಪಕ್ಷ ಸಂಘಟಿಸುವಾಗ ಇದ್ದ ನಮ್ಮಗಳ ಅಗತ್ಯ ಇಂದು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳವಾಗ ಏಕೆ ಇಲ್ಲ?

- - - ಕನ್ನಡಪ್ರಭ ವಾರ್ತೆ ಸೊರಬ

ಕಾಂಗ್ರೆಸ್ ಸ್ಥಳೀಯ ಮುಖಂಡರು ಪುರಸಭೆ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಆಡಳಿತ ನಡೆಸುವ ವೈಖರಿ ಸರಿಯಿಲ್ಲ. ತಿದ್ದಿಕೊಳ್ಳದಿದ್ದರೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಾಗುವುದು ಎಂದು ಪುರಸಭೆ ಸದಸ್ಯ ಪ್ರಸನ್ನಕುಮಾರ್ ದೊಡ್ಮನೆ ಹೇಳಿದರು.

ಪಟ್ಟಣದ ನಾಮದೇವ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯ ೧೨ ವಾರ್ಡ್‌ಗಳಲ್ಲಿ ೪ ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದೇವೆ. ಪಕ್ಷದ ಸ್ಥಳೀಯ ಮುಖಂಡರು ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯರಾದ ನನ್ನನ್ನು ಒಳಗೊಂಡಂತೆ ಶ್ರೀರಂಜನಿ ಹಾಗೂ ಸುಲ್ತಾನ ಬೇಗಂ ಅವರನ್ನು ವಿಶ್ವಾಸಕ್ಕೆ ಪಡೆಯದೇ, ಪಟ್ಟಣದಲ್ಲಿ ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ನಾಮನಿರ್ದೇಶನ ಸದಸ್ಯರ ನೇಮಕ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಉತ್ತರ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಸಚಿವ ಮಧು ಬಂಗಾರಪ್ಪ ಉತ್ತಮ ಆಡಳಿತ ಮಾಡುತ್ತಿದ್ದಾರೆ. ಆದರೆ, ಸ್ಥಳೀಯ ಮುಖಂಡರ ವರ್ತನೆ ಸರಿಯಿಲ್ಲ. ಪಕ್ಷ ಸಂಘಟಿಸುವಾಗ ಇದ್ದ ನಮ್ಮಗಳ ಅಗತ್ಯ ಇಂದು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳವಾಗ ಏಕೆ ಇಲ್ಲ? ಕಾಂಗ್ರೆಸ್ ಬೆಂಬಲಿತ ಸದಸ್ಯರ ವಾರ್ಡ್‌ಗಳಲ್ಲಿಯೂ ಅಲ್ಪಸಂಖ್ಯಾತರಿದ್ದಾರೆ. ಆ ವಾರ್ಡ್‌ಗಳ ಅಭಿವೃದ್ಧಿಯೂ ಆಗಬೇಕಿದೆ. ಆದರೆ, ಸ್ಥಳೀಯ ಮುಖಂಡರು ನಮ್ಮ ಗಮನಕ್ಕೆ ತಾರದೇ ಕಾಂಗ್ರೆಸ್ಸೇತರ ಸದಸ್ಯರ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದಾರೆ. ಅನುದಾನ, ಕಾಮಗಾರಿ ಬಗ್ಗೆ ಯಾವುದೇ ಮಾಹಿತಿ ನೀಡದೆ ಹೊರಗಿನವರನ್ನು ಕರೆದಂತೆ, ನಮ್ಮನ್ನು ಕಾಮಗಾರಿಗಳ ಗುದ್ದಲಿ ಪೂಜೆಗೆ ಆಹ್ವಾನಿಸಲಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪುರಸಭಾ ಸದಸ್ಯರ ಗಮನಕ್ಕೆ ತರದೇ ನಡೆಯುತ್ತಿರುವ ಇಂಥ ಬೆಳವಣಿಗೆಗಳನ್ನು ಮಧು ಬಂಗಾರಪ್ಪ ಗಮನಿಸುವ ಅಗತ್ಯವಿದೆ. ಏಕೆಂದರೆ ಉಸ್ತುವಾರಿ ಸಚಿವರಾಗಿ ಜಿಲ್ಲೆಯನ್ನು ಉನ್ನತಮಟ್ಟಕ್ಕೆ ಏರಿಸುವಲ್ಲಿ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ಪಟ್ಟಣದಲ್ಲಿ ಕಾಂಗ್ರೆಸ್ ಕೆಲವೇ ಕೆಲವು ಮುಖಂಡರ ಕೈವಶವಾಗಿದೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಪಕ್ಷ ಮತ್ತು ಸಚಿವರ ಜನಪ್ರಿಯತೆಗೆ ಹಿನ್ನೆಡೆ ಆಗುವುದರಲ್ಲಿ ಅನುಮಾನವಿಲ್ಲ. ಈ ಬಗ್ಗೆ ಗಮನಹರಿಸದಿದ್ದರೆ ಸದ್ಯದಲ್ಲಿಯೇ ಕಾಂಗ್ರೆಸ್ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಲಾಗುವುದು ಎಂದು ಎಚ್ಚರಿಸಿದರು.

ಸದಸ್ಯೆ ಶ್ರೀರಂಜನಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿರುವ ಅಂಬೇಡ್ಕರ್ ಬಡಾವಣೆಯ ಅಭಿವೃದ್ಧಿ ಕುಂಠಿತವಾಗಿದೆ. ಅಲ್ಲಿನ ಅಭಿವೃದ್ಧಿಗೆ ಆದ್ಯತೆ ಸಿಗುತ್ತದೆ ಎಂದು ಭಾವಿಸಿಲಾಗಿತ್ತು. ಆದರೆ ಯಾವುದೇ ಅನುದಾನ ನೀಡಿಲ್ಲ. ಸಚಿವರ ಬಗ್ಗೆ ಗೌರವಿದೆ. ಆದರೆ, ಸ್ಥಳೀಯ ಮುಖಂಡರು ತಮ್ಮ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯಬೇಕು ಎಂಬ ಪ್ರಜ್ಞೆಯಿಲ್ಲದೇ ಮೈಮರೆತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸದಸ್ಯೆ ಸುಲ್ತಾನ ಬೇಗಂ, ಪುರಸಭೆ ವಾರ್ಡ್ ೮ರ ಕಾಂಗ್ರೆಸ್-೧೫೭ ಬೂತ್‌ನ ಅಧ್ಯಕ್ಷ ದತ್ತಾತ್ರೆಯ ಶೇಟ್ ಇದ್ದರು.

- - - -೧೬ಕೆಪಿಸೊರಬ೦೧:

ಸೊರಬ ಪಟ್ಟಣದಲ್ಲಿ ಪುರಸಭೆ ಸದಸ್ಯ ಪ್ರಸನ್ನಕುಮಾರ ದೊಡ್ಮನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.