ಸಂಡೂರಿನಲ್ಲಿ ಮತ್ತೆ ಕಾಂಗ್ರೆಸ್ ಪ್ರಾಬಲ್ಯ

| Published : Nov 24 2024, 01:45 AM IST

ಸಾರಾಂಶ

ಅಖಾಡದಲ್ಲಿ ಗೆದ್ದು ಹೊಸದೊಂದು ರಾಜಕೀಯ ಇತಿಹಾಸ ಸೃಷ್ಟಿಯ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಬಳ್ಳಾರಿ: ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಅಖಾಡದಲ್ಲಿ ಗೆದ್ದು ಹೊಸದೊಂದು ರಾಜಕೀಯ ಇತಿಹಾಸ ಸೃಷ್ಟಿಯ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ತೀವ್ರ

ಮುಖಭಂಗವಾಗಿದೆ. ಈ ಉಪ ಚುನಾವಣೆ ಸೇರಿದಂತೆ ಸಂಡೂರಿನಲ್ಲಿ ಸತತ ಐದು ಬಾರಿ ಗೆದ್ದು ಬೀಗುವ ಮೂಲಕ ಕಾಂಗ್ರೆಸ್‌ ಗೆಲುವಿನ ಓಟ ಮುಂದುವರಿಸಿದೆ.

ಕಾಂಗ್ರೆಸ್ಸಿನ ಈ.ಅನ್ನಪೂರ್ಣ 93,616 ಮತಗಳನ್ನು ಪಡೆದು 9649 ಮತಗಳ ಅಂತರದ ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು 83,967 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದು ಸದ್ದು ಮಾಡುವ ನಿರೀಕ್ಷೆ ಹೊತ್ತಿದ್ದ ಬಳ್ಳಾರಿಯ ಕಮಲ ನಾಯಕರು ಗಣಿ ಊರಿನ ಮತದಾರರ ಆದೇಶಕ್ಕೆ ಅಕ್ಷರಶಃ ಕಂಗಾಲಾಗಿದ್ದಾರೆ. ಮತ್ತೊಮ್ಮೆ ಕೈ ಪಕ್ಷವನ್ನು ಚುನಾಯಿಸುವ ಮೂಲಕ ಗಣಿನಾಡಿಗೆ ಕಮಲ ಪಕ್ಷಕ್ಕೆ "ನೋ ಎಂಟ್ರಿ " ಎಂದಿದ್ದಾರೆ.

ಕೈ ಗೆಲುವು ಸುಲಭವಲ್ಲ:

ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಹೆಸರಾಗಿದ್ದ ಸಂಡೂರು ಉಪ ಚುನಾವಣೆಯಲ್ಲಿ ಕೈ ಪಕ್ಷದ ಗೆಲುವು ಸುಲಭದ ತುತ್ತಾಗಲಿಲ್ಲ. ಮೊದಲ ಸುತ್ತಿನ ಎಣಿಕೆಯಿಂದಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತಾದರೂ ಮತಗಳ ಅಂತರ ದೊಡ್ಡ ಪ್ರಮಾಣದಲ್ಲಿರಲಿಲ್ಲ. ಮೊದಲ ಸುತ್ತಿನಲ್ಲಿ 2586 ಮತಗಳ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ, 2ನೇ ಸುತ್ತಿನಲ್ಲಿ 2715 ಮತಗಳ ಮುನ್ನಡೆ ಕಾಯ್ದುಕೊಂಡರು. 3ನೇ ಸುತ್ತಿನಲ್ಲಿ 1973 ಮತಗಳ ಅಂತರವಷ್ಟೇ ಮುನ್ನಡೆಯಿತ್ತು. 4ನೇ ಸುತ್ತಿನಲ್ಲಿ ಕೈ ಪಕ್ಷದ ಅಭ್ಯರ್ಥಿ ಮುನ್ನಡೆಯ ಅಂತರ 1 ಸಾವಿರ ಮತಗಳಿಗೆ ಕುಗ್ಗಿತು. 5ನೇ ಸುತ್ತಿನ ಮತಗಳ ಎಣಿಕೆ ಮುಗಿದಾಗ ಕಾಂಗ್ರೆಸ್ ಬರೀ 205 ಮತಗಳ ಅಂತರದಲ್ಲಷ್ಟೇ ಮುಂದಿತ್ತು. ಇದು ಕೈ ಪಕ್ಷದ ನಾಯಕರಲ್ಲಿ ಆತಂಕ ಮೂಡಿಸಿತ್ತು.

ಬಿಜೆಪಿಯ ಬಂಗಾರು ಹನುಮಂತು 6ನೇ ಸುತ್ತಿನಲ್ಲಿ 253 ಮತ ಮತ್ತು ಏಳನೇ ಸುತ್ತಿನಲ್ಲಿ 867 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡರು. ಇದರಿಂದ ಬಿಜೆಪಿಯ ಗೆಲುವಿನ ಆಸೆ ಜೀವಂತವಿಟ್ಟುಕೊಂಡಿತ್ತಾದರೂ ಮುಂದುವರಿದ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಸೋಲಿನ ಅಂತರ ಹಿಗ್ಗಿಸಿಕೊಂಡಿತು. 15ನೇ ಸುತ್ತು ಎಣಿಕೆ ಪೂರ್ಣಗೊಳ್ಳುತ್ತಿದ್ದಂತೆಯೇ ಕೈ ಪಕ್ಷದ ಗೆಲುವು ಖಾತ್ರಿಯಾದಂತಾಯಿತು. 15ನೇ ಸುತ್ತಿನಲ್ಲಿ ಕಾಂಗ್ರೆಸ್ 8,239 ಹಾಗೂ 16ನೇ ಸುತ್ತಿನಲ್ಲಿ 8,881 ಮತಗಳ ಮುನ್ನಡೆ ಸಾಧಿಸುತ್ತಿದ್ದಂತೆಯೇ ಬಿಜೆಪಿ ನಾಯಕರ ಮುಖ ಕಪ್ಪಿಟ್ಟಿತು. 17ನೇ ಸುತ್ತಿನ ಮತ ಎಣಿಕೆ ಪೂರ್ಣಗೊಳ್ಳುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗಿ ವಿಜಯೋತ್ಸವ ಆಚರಿಸಿದರು.

ಗಮನ ಸೆಳೆಯದ ಪಕ್ಷೇತರರು:

ಜಿದ್ದಾಜಿದ್ದಿನ ಕಣವಾಗಿದ್ದ ಸಂಡೂರು ಉಪ ಚುನಾವಣೆಯಲ್ಲಿ ಕೈ-ಕಮಲ ಪಕ್ಷಗಳ ನಡುವೆ ನೇರ ಹಣಾಹಣಿ ಇತ್ತು. ಜೆಡಿಎಸ್ ಬಿಜೆಪಿಗೆ ಬೆಂಬಲಿಸಿದ್ದರಿಂದ ಮತಗಳ ವಿಭಜನೆಗೆ ಅವಕಾಶವಾಗಲಿಲ್ಲ. ಪಕ್ಷೇತರರಾಗಿ ಅಖಾಡದಲ್ಲಿದ್ದ ನಾಲ್ವರು ಅಭ್ಯರ್ಥಿಗಳು ನೋಟಾದಷ್ಟು ಸಹ ಮತಗಳನ್ನು ಪಡೆಯಲಿಲ್ಲ. ಕರ್ನಾಟಕ ಜನತಾ ಪಕ್ಷದ ಎನ್.ಆಂಜಿನಪ್ಪ 632, ಟಿಎಂ ಮಾರುತಿ 211, ಟಿ.ಎರಿಸ್ವಾಮಿ 278, ಎನ್.ವೆಂಕಣ್ಣ 461 ಮತಗಳನ್ನು ಪಡೆದರು. 1040 ನೋಟಾ ಮತಗಳು ದಾಖಲಾಗಿವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.51.95ರಷ್ಟು ಮತಗಳನ್ನು ಪಡೆದರೆ, ಬಿಜೆಪಿ ಶೇ.46.6ರಷ್ಟು ಮತಗಳನ್ನು ಪಡೆಯಿತು. ಅಂಚೆ ಮತಗಳಲ್ಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತು. ಒಟ್ಟು 20 ಅಂಚೆಮತಗಳು ಚಲಾವಣೆಯಾಗಿದ್ದು, ಈ ಪೈಕಿ ಕಾಂಗ್ರೆಸ್‌ನ ಈ.ಅನ್ನಪೂರ್ಣ ಅವರಿಗೆ 10 ಹಾಗೂ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗೆ 6 ಮತಗಳು ಬಂದಿವೆ. 4 ಅಂಚೆ ಮತಗಳು ತಿರಸ್ಕೃತಗೊಂಡಿವೆ.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಜರುಗಿತು. 253 ಮತಗಟ್ಟೆಗಳಲ್ಲಿನ ಮತಗಳನ್ನು ಎಣಿಕೆಗೆ ಒಟ್ಟು 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿತ್ತು. 19 ಸುತ್ತುಗಳಲ್ಲಿ ಮತಗಳ ಎಣಿಕೆ ನಡೆಯಿತು. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿತು. 11.30ರ ವೇಳೆ 19 ಸುತ್ತುಗಳ ಮತ ಎಣಿಕೆ ಕಾರ್ಯ ಮುಗಿದಿತ್ತು. ಬಳಿಕ ಸಂಡೂರು ವಿಧಾನಸಭೆಯ ಉಪಚುನಾವಣೆಯ ಚುನಾವಣಾಧಿಕಾರಿ ಅವರು ಫಲಿತಾಂಶ ಪ್ರಕಟಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ ಅವರಿಗೆ ಪ್ರಮಾಣಪತ್ರ ವಿತರಿಸಿದರು. ಸಂಸದ ಈ.ತುಕಾರಾಂ ಅವರು ಪತ್ನಿಗೆ ಸಿಹಿತಿನ್ನಿಸಿ ಸಂಭ್ರಮಿಸಿದರು.

ಉಪ ಚುನಾವಣೆಯ ಫಲಿತಾಂಶ-ಮತಗಳ ವಿವರ

ಈ.ಅನ್ನಪೂರ್ಣ (ಕಾಂಗ್ರೆಸ್‌) 93616 (ಶೇ.51.95)

ಬಂಗಾರು ಹನುಮಂತು (ಬಿಜೆಪಿ) 83967 (ಶೇ.46.6)

2023ರ ಚುನಾವಣೆ ಫಲಿತಾಂಶ-ಮತಗಳ ವಿವರ

ಈ.ತುಕಾರಾಂ (ಕಾಂಗ್ರೆಸ್‌) 85223 (ಶೇ.49.31)

ಶಿಲ್ಪಾ ರಾಘವೇಂದ್ರ (ಬಿಜೆಪಿ) 49701 (ಶೇ.28.76)

ಕೆ.ಎಸ್.ದಿವಾಕರ (ಕೆಆರ್‌ಪಿಪಿ) 31,375 (ಶೇ.18.15)