ಸಾರಾಂಶ
- ದೆಹಲಿಯಿಂದ ವೀಕ್ಷಕರ ಆಗಮನ- ಸಿದ್ದು, ಡಿಕೆಶಿ ಜತೆ ಸಂಭಾವ್ಯ ಅಭ್ಯರ್ಥಿಗಳ ಕುರಿತು ಚರ್ಚೆಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಸಮಿತಿಯ ಮೊದಲ ಸಭೆ ಶುಕ್ರವಾರ ನಗರದಲ್ಲಿ ನಡೆಯಲಿದ್ದು, ದೆಹಲಿಯಿಂದ ಆಗಮಿಸಲಿರುವ ವೀಕ್ಷಕರು ಸಂಭಾವ್ಯ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಲಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಮಾಹಿತಿ ನೀಡಿದರು. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಶುಕ್ರವಾರ ಸಂಜೆ ಲೋಕಸಭಾ ಚುನಾವಣಾ ಸಿದ್ಧತೆ ಕುರಿತು ಸಮಿತಿಯ ಸಭೆ ನಡೆಯಲಿದೆ. ಈಗಾಗಲೇ ರಾಜ್ಯಕ್ಕೆ ದೆಹಲಿಯಿಂದ ವೀಕ್ಷಕರ ಪಟ್ಟಿ ನೀಡಲಾಗಿದೆ. ಅವರೊಂದಿಗೆ ಈ ಸಭೆ ನಡೆಯಲಿದ್ದು, ಸಂಭಾವ್ಯ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಯಲಿದೆ. ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಪ್ರಧಾನಿ ಮೋದಿ ಅವರು ಶುಕ್ರವಾರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ವೇಳೆ ಮುಖ್ಯಮಂತ್ರಿಗಳು ಇರಬೇಕಾಗುತ್ತದೆ. ಹಾಗಾಗಿ ಪ್ರಧಾನಿ ಬಂದುಹೋದ ಬಳಿಕ ಸಂಜೆ 4.30ರ ನಂತರ ಪಕ್ಷದ ಸಮಿತಿ ಸಭೆ ನಡೆಯಲಿದೆ. ವೀಕ್ಷಕರು ಜಿಲ್ಲಾ ಸಚಿವರು ಅಭ್ಯರ್ಥಿ ಆಯ್ಕೆ ವಿಚಾರವಾಗಿ ನೀಡಿರುವ ವರದಿ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದರು. ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಹರೀಶ್ ಚೌಧರಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಚುನಾವಣಾ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ.----ಪಕ್ಷ ಹೇಳಿದರೆ ಸಚಿವರೂ ಸ್ಪರ್ಧಿಸಬೇಕುಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಪಕ್ಷ ಯಾರಿಗೆ ಹೇಳಿದರೂ ಎಲ್ಲರೂ ಕೇಳಬೇಕಾಗುತ್ತದೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಸಚಿವರ ಸ್ಪರ್ಧೆಯ ಸುಳಿವು ನೀಡಿದ್ದಾರೆ. ಲೋಕಸಭಾ ಚುನಾವಣೆ ಸ್ಪರ್ಧೆಗೆ ಕೆಲ ಸಚಿವರನ್ನು ಕಣಕ್ಕಳಿಸಲು ಪಕ್ಷ ಆಸಕ್ತಿ ತೋರಿದ್ದರೂ ಸಚಿವರೇ ಹಿಂದೇಟು ಹಾಕುತ್ತಿದ್ದಾರಂತಲ್ಲ ಎಂಬ ಪ್ರಶ್ನೆಗೆ, ಪಕ್ಷ ಹೇಳಿದರೆ ಎಲ್ಲರೂ ಕೇಳಬೇಕು. ಯಾರೂ ಇಲ್ಲ ಎನ್ನುವಂತಿಲ್ಲ ಎಂದರು.