ಸಾರಾಂಶ
- ಮುಸ್ಲಿಮರಿಗೆ ಆರ್ಥಿಕ ದಿಗ್ಬಂಧನ ವಿಧಿಸುವ ಕರೆ ಸಲ್ಲದು: ಡಿ.ಬಸವರಾಜ ಅಸಮಾಧಾನ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆಯಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ತರುವವರು ಯಾವುದೇ ಜಾತಿ, ಧರ್ಮೀಯರಾಗಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸಾಮರಸ್ಯ ಕದಡುವವರ ಬಗ್ಗೆ ಜನರೂ ಜಾಗೃತರಾಗಿರಬೇಕು. ಗಲಭೆಯಿಂದ ನಲುಗಿದ ಕಾರ್ಲ್ ಮಾರ್ಕ್ಸ್ ನಗರಕ್ಕೆ ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಮಿತಿ ಮಾಡಿಕೊಂಡು, ನಾವು ಹೋಗಿ ಪರಿಶೀಲಿಸುತ್ತೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಹೇಳಿದರು.
ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳು ಜನರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕೋಮು ಅಸ್ತ್ರವನ್ನು ಬಳಸುತ್ತಿದ್ದಾರೆ. ಪ್ರಾದೇಶಿಕ ಪಕ್ಷದ ಭದ್ರಕೋಟೆಯಾಗಿದ್ದ ಮಂಡ್ಯವನ್ನು ಕೋಮುವಾದೀಕರಿಸಲು ಬಿಜೆಪಿ ತಂತ್ರ ರೂಪಿಸಿ, ಕೆರೆಗೋಡು, ನಾಗಮಂಗಲ, ಮದ್ದೂರಿನಲ್ಲಿ ಕೋಮು ಅಶಾಂತಿ ಸೃಷ್ಟಿಸಿದೆ. ಅದೇ ಕೆಲಸ ದಾವಣಗೆರೆಯಲ್ಲೂ ಮಾಡುತ್ತಿದೆ ಎಂದು ಆರೋಪಿಸಿದರು.ಹೇಗಾದರೂ ಮಾಡಿ ದಾವಣಗೆರೆಯಲ್ಲಿ ಕೋಮುವಾದಿ ವಿಷಬೀಜ ಬಿತ್ತಲು, ಹಿಂದು-ಮುಸ್ಲಿಮರ ಮಧ್ಯೆ ಜಗಳ ಮಾಡಿಸಲು ಸಂಘ ಪರಿವಾರ, ಬಿಜೆಪಿಯವರು ಮುಂದಡಿ ಇಟ್ಟಿದ್ದಾರೆ. ಮುಸ್ಲಿಮರಿಗೆ ಆರ್ಥಿಕ ದಿಗ್ಬಂಧನ ಹೇರುವಂತೆ ಕಾರ್ಕಳದ ಆದರ್ಶ ಗೋಖಲೆ ಮನ್ನೆ ಹೇಳಿಕೆ ನೀಡಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಮೈಸೂರಿನಲ್ಲಿ ತಿರಸ್ಕೃತ ಸರಕಾಗಿರುವ ಪ್ರತಾಪಸಿಂಹ, ರೇಣುಕಾಚಾರ್ಯರಂತಹ ಗಲಭೆ ಎಬ್ಬಿಸುವಂತಹ ಹೇಳಿಕೆ ನೀಡಿದ್ದು ಖಂಡನೀಯ ಎಂದರು.
35 ವರ್ಷದಿಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜಿಲ್ಲೆಯಲ್ಲಿ ಸಾಮರಸ್ಯ ಸೃಷ್ಟಿಸಿದ್ದಾರೆ. ದಾವಣಗೆರೆಯಲ್ಲಿ 90ರ ದಶಕದಲ್ಲಿ ಆದ ಕೋಮುಗಲಭೆಯಿಂದ ಇಡೀ ಊರು ಆರ್ಥಿಕವಾಗಿ ಕುಸಿದಿತ್ತು. ಇಲ್ಲಿನ ಮಾರುಕಟ್ಟೆ ರಾಣೆಬೆನ್ನೂರು, ಚಳ್ಳಕೆರೆ, ಚಿತ್ರದುರ್ಗ, ಹಾವೇರಿ ಪಾಲಾಯಿತು. ಇಂದಿಗೂ ಹಳೆಯ ಲಯಕ್ಕೆ ಬರಲಾಗಿಲ್ಲ. ಮುಸ್ಲಿಮರೊಂದಿಗೆ ವ್ಯವಹರಿಸದಂತೆ, ಆರ್ಥಿಕ ದಿಗ್ಬಂಧನ ಹೇರುವಂತೆ ಕರೆ ನೀಡಿದ್ದು ಒಳ್ಳೆಯದಲ್ಲ ಎಂದರು.ಕಾಂಗ್ರೆಸ್ ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್.ನಾಗಭೂಷಣ್, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸದಸ್ಯ ಎಂ.ಕೆ.ಲಿಯಾಖತ್ ಅಲಿ, ಡಿ.ಶಿವಕುಮಾರ, ಸುರೇಶ, ರಮೇಶ ಇತರರು ಇದ್ದರು.
- - -(ಕೋಟ್) ಉತ್ತರ ಕರ್ನಾಟಕ ಅನೇಕ ಜಿಲ್ಲೆಗಳು ನೆರೆ ಪೀಡಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ಮಾಡಿ, ನೆರೆ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು, ಅಭಿವೃದ್ಧಿ ಕಾರ್ಯ, ಜನರ ಸಂಕಷ್ಟಕ್ಕೆ ನೆರವಾಗಲು ಪ್ಯಾಕೇಜ್ ಘೋಷಣೆ ಮಾಡಬೇಕು. ಇಷ್ಟು ದಿನವಾದರೂ ಮೋದಿಗೆ ರಾಜ್ಯದ ನೆರೆ ಬಗ್ಗೆ ಅರಿವು ಇಲ್ಲವೇ?
- ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ.- - -