ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನ್‌ರೇಗ) ಕಾಯ್ದೆಯನ್ನು ಕೇಂದ್ರ ಸರ್ಕಾರ ಬದಲಿಸಿದ್ದನ್ನು ಖಂಡಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ಮಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು.
ಮಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನ್‌ರೇಗ) ಕಾಯ್ದೆಯನ್ನು ಕೇಂದ್ರ ಸರ್ಕಾರ ಬದಲಿಸಿದ್ದನ್ನು ಖಂಡಿಸಿ ಹಾಗೂ ಕಾಯ್ದೆಯ ಮರುಜಾರಿಗೆ ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ನಗರದ ಕುದ್ಮುಲ್ ರಂಗರಾವ್ ಪುರಭವನದ ಬಳಿಯ ರಾಜಾಜಿ ಪಾರ್ಕ್‌ನ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಯಿತು.ಬೆಳಗ್ಗೆ 10.30ರಿಂದ ಸಂಜೆ 4 ಗಂಟೆವರೆಗೆ ನಡೆದ ಸತ್ಯಾಗ್ರಹದಲ್ಲಿ ನೂರಕ್ಕೂ ಅಧಿಕ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾಯ್ದೆ ಬದಲಾವಣೆ ಮಾಡಿದ ಕುರಿತು ಭಿತ್ತಿಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಮನ್‌ರೇಗ ಯುಪಿಎ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಬಡ ಜನರ ಬದುಕಿಗೆ ಆಧಾರವಾಗಿತ್ತು. ಆ ಕಾಯ್ದೆಯನ್ನು ಮರು ಸ್ಥಾಪನೆ ಮಾಡಲೇಬೇಕು. ಈ ಆಂದೋಲನದ ಭಾಗವಾಗಿ, ಮುಂಬರುವ ದಿನಗಳಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 5 ಕಿ.ಮೀ. ಪಾದಯಾತ್ರೆ ಆಯೋಜಿಸಿದ್ದೇವೆ. ಫೆ.9ರಿಂದ 12ರವರೆಗೆ ಸುಳ್ಯದಿಂದ ಮೂಲ್ಕಿವರೆಗೆ 100 ಕಿ.ಮೀ. ಉದ್ದದ ಪಾದಯಾತ್ರೆ ಆಯೋಜಿಸಲಿದ್ದೇವೆ ಎಂದು ಹೇಳಿದರು.ಮನ್‌ರೇಗ ಮರುನಾಮಕರಣ ಮಾಡಿ ವಿಬಿ- ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿರುವುದು ಬಡ ಕಾರ್ಮಿಕರ ಮೇಲಿನ ನೇರ ದಾಳಿ. ಮನ್‌ರೇಗ ಕಾಯ್ದೆಯಡಿ ಕಾರ್ಮಿಕರಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗದ ಕಾನೂನುಬದ್ಧ ಖಾತರಿ ಇತ್ತು ಮತ್ತು ಕೈಗೊಳ್ಳಬೇಕಾದ ಕೆಲಸಗಳ ಸ್ವರೂಪವನ್ನು ನಿರ್ಧರಿಸುವ ಅಧಿಕಾರವನ್ನು ಗ್ರಾಪಂಗಳು ಹೊಂದಿದ್ದವು. ಹೊಸ ಕಾನೂನು ಈ ಹಕ್ಕನ್ನು ತೆಗೆದುಹಾಕುತ್ತದೆ. ಕಾರ್ಮಿಕರಿಗೆ ಇನ್ನು ಮುಂದೆ ಯಾವುದೇ ಕಾನೂನುಬದ್ಧ ಉದ್ಯೋಗ ಖಾತರಿ ಇರುವುದಿಲ್ಲ ಎಂದು ಹರೀಶ್ ಕುಮಾರ್ ಆರೋಪಿಸಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಹೊಸ ಕಾನೂನು ಗ್ರಾಮ ಪಂಚಾಯ್ತಿಗಳ ಸ್ವಾಯತ್ತತೆಯನ್ನು ಕಸಿದುಕೊಂಡಿದೆ. ಕೇಂದ್ರ ಸರ್ಕಾರ ಈಗ ಕರ್ನಾಟಕಕ್ಕೆ ಸಿಗಬೇಕಾದ ಜಿಎಸ್‌ಟಿಯ ನ್ಯಾಯಯುತ ಪಾಲನ್ನೂ ನೀಡುತ್ತಿಲ್ಲ. ಅದರ ಮೇಲೆ ಜಿ ರಾಮ್ ಜಿ ಕಾಯ್ದೆಯಲ್ಲಿ ಶೇ.40ರಷ್ಟು ಪಾಲನ್ನು ರಾಜ್ಯಗಳೇ ಭರಿಸಬೇಕು ಎಂದು ಹೇಳಿದೆ. ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರ ವಿರೂಪಗೊಳಿಸಿದೆ ಎಂದರು.ಬೇಕಾದರೆ ಗೋಡ್ಸೆ ಹೆಸರಿಡಿ:ಎಂಎಲ್ಸಿ ಐವನ್ ಡಿಸೋಜ ಮಾತನಾಡಿ, ಈ ಕಾನೂನನ್ನು ತೆಗೆದು ಹೊಸ ಕಾಯ್ದೆ ಜಾರಿಗೆ ತರುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಮಹಾತ್ಮ ಗಾಂಧಿ ಅವರ ಹೆಸರನ್ನು ಬಿಜೆಪಿಯವರಿಗೆ ಸಹಿಸಲು ಆಗದೆ ರಾಷ್ಟ್ರಪಿತನ ಹೆಸರನ್ನೇ ಯೋಜನೆಯಿಂದ ತೆಗೆದುಹಾಕಿದೆ. ಬೇಕಾದರೆ ನೀವು ಪೂಜಿಸುವ ನಾಥೂರಾಮ್ ಗೋಡ್ಸೆ ಹೆಸರನ್ನು ಇಟ್ಕೊಳ್ಳಿ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡರಾದ ಜೆ.ಆರ್. ಲೋಬೊ, ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ್, ಪದ್ಮರಾಜ್ ಪೂಜಾರಿ, ಅಪ್ಪಿ, ಎಂ.ಎಸ್. ಮಹಮ್ಮದ್, ಶಾಹುಲ್ ಹಮೀದ್, ವಿಶ್ವಾಸ್‌ಕುಮಾರ್ ದಾಸ್, ಪ್ರವೀಣ್‌ಚಂದ್ರ ಆಳ್ವ, ಸಂತೋಷ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.