ಕಾಂಗ್ರೆಸ್ಸಿಗೆ ಧಾರವಾಡ ಕ್ಷೇತ್ರದಲ್ಲಿ ಬಂಡಾಯದ ಭೀತಿ

| Published : Apr 02 2024, 01:11 AM IST / Updated: Apr 02 2024, 07:50 AM IST

Congress flag

ಸಾರಾಂಶ

ಬಹುತೇಕ ಲಿಂಗಾಯತ ಸಮುದಾಯಕ್ಕೆ ಟಿಕೆಟ್‌ ಕೊಡುತ್ತಿದ್ದ ಕಾಂಗ್ರೆಸ್‌ ಈ ಸಲ ಒಬಿಸಿಗೆ ಟಿಕೆಟ್‌ ನೀಡಿದೆ. ಇದರಿಂದಾಗಿ ಇದೀಗ ಬಂಡಾಯದ ಭೀತಿ ಎದುರಾಗಿದೆ. ಕಾಂಗ್ರೆಸ್‌ ಮುಖಂಡ, ಮಾಜಿ ಸಂಸದ ಮಂಜುನಾಥ ಕುನ್ನೂರ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ಹುಬ್ಬಳ್ಳಿ:  ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಹುತೇಕ ಲಿಂಗಾಯತ ಸಮುದಾಯಕ್ಕೆ ಟಿಕೆಟ್‌ ಕೊಡುತ್ತಿದ್ದ ಕಾಂಗ್ರೆಸ್‌ ಈ ಸಲ ಒಬಿಸಿಗೆ ಟಿಕೆಟ್‌ ನೀಡಿದೆ. ಇದರಿಂದಾಗಿ ಇದೀಗ ಬಂಡಾಯದ ಭೀತಿ ಎದುರಾಗಿದೆ. ಕಾಂಗ್ರೆಸ್‌ ಮುಖಂಡ, ಮಾಜಿ ಸಂಸದ ಮಂಜುನಾಥ ಕುನ್ನೂರ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಅವರೇ ಈ ವಿಷಯವನ್ನು ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುನ್ನೂರ, ಲೋಕಸಭೆ ಕ್ಷೇತ್ರದಲ್ಲಿ ಬಹುಸಂಖ್ಯಾತ ಮತ್ತು ನಿರ್ಣಾಯಕ ಸ್ಥಾನದಲ್ಲಿರುವ ಲಿಂಗಾಯತ ಸಮುದಾಯವನ್ನು ಎರಡು ಪಕ್ಷಗಳು ಕಡೆಗಣಿಸಿವೆ. ಈ ಬಗ್ಗೆ ಸಮುದಾಯದವರಲ್ಲಿ ಅತೃಪ್ತಿ ಮನೆ ಮಾಡಿದೆ. ಸಮಾಜದ ಮುಖಂಡರು, ಹಿತೈಷಿಗಳು ಮತ್ತು ಅಭಿಮಾನಿಗಳು ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದೇನೆ ಎಂದು ತಿಳಿಸಿದರು.

ಏ.12ರಿಂದ 19ರ ವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಅಷ್ಟರಲ್ಲೇ ಇನ್ನೊಮ್ಮೆ ಹಿತೈಷಿಗಳ ಮತ್ತು ಸಮಾಜದ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಹಾವೇರಿ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಬಯಸಿ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದೇನು. ಆದರೆ, ಟಿಕೆಟ್‌ ಕೊಡದೇ ಕಾಂಗ್ರೆಸ್‌ ಅನ್ಯಾಯ ಮಾಡಿದೆ. ಧಾರವಾಡ ಸೇರಿದಂತೆ ರಾಜ್ಯದ ಇತರ ಕ್ಷೇತ್ರಗಳಲ್ಲಿ ಬಿಜೆಪಿ- ಕಾಂಗ್ರೆಸ್‌ ಪಕ್ಷಗಳು ಪರಸ್ಪರ ಹೊಂದಾಣಿಕೆ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಎರಡೂ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಮಿತಿಮೀರಿದೆ. ರಾಜಕಾರಣದಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಕಕ್ತಪಡಿಸಿದರು.

ಒಂದು ವೇಳೆ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು ಚುನಾವಣೆಗೆ ಸ್ಪರ್ಧಿಸಿದರೆ, ನಾನು ಕಣಕ್ಕಿಳಿಯದೇ ಅವರನ್ನು ಬೆಂಬಲಿಸುತ್ತೇನೆ ಎಂದು ಸ್ಪಷ್ಟಪಡಿಸಿದ ಕುನ್ನೂರ, ನಾನು ಸ್ಪರ್ಧಿಸಿದಲ್ಲಿ ಅವರ ಬೆಂಬಲ ಕೇಳುವುದಿಲ್ಲ. ಒಟ್ಟಾರೆ ಚುನಾವಣೆ ಪರಿಸ್ಥಿತಿ ಅವಲೋಕಿಸಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದರು.