ಸಾರಾಂಶ
ಮುಂಡರಗಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಈ ಮತಗಳ್ಳತನದ ವಿರುದ್ಧ ಅಭಿಯಾನ ಪ್ರಾರಂಭವಾಗಿದ್ದು, ಇದಕ್ಕೆ ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಚುನಾವಣಾ ಆಯೋಗ ಸರಿಯಾಗುವವರೆಗೂ, ನ್ಯಾಯ ಸಮ್ಮತವಾದ ಚುನಾವಣೆಗಳು ನಡೆಯುವವರೆಗೂ ಕಾಂಗ್ರೆಸ್ ಹೋರಾಟ ನಿಲ್ಲಿಸುವುದಿಲ್ಲ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಎನ್ನುವ ಘೋಷ ವಾಕ್ಯದೊಂದಿಗೆ ವಿಶೇಷ ಅಭಿಯಾನ ಕೈಗೊಂಡ ಹಿನ್ನೆಲೆಯಲ್ಲಿ, ಗಾಂಧಿ ವೃತ್ತದಲ್ಲಿ 79ನೇ ಸ್ವಾತಂತ್ರ್ಯ ದಿನೋತ್ಸವದ ಧ್ವಜಾರೋಹಣ ನೆರವೇರಿಸಿದ ನಂತರ ಮುಂಡರಗಿ ಪಟ್ಟಣದಲ್ಲಿ ಪಥ ಸಂಚನದ ಮೂಲಕ ಪುರಸಭೆ ಆವರಣಕ್ಕೆ ಆಗಮಿಸಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದರು.ಮೋದಿಯವರು ಲೋಕಸಭ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣವನ್ನು ಹಾಕುವ ಭರವಸೆ ನೀಡಿದ್ದರು ಹಾಕಲಿಲ್ಲ, ಪೆಟ್ರೋಲ್, ಡಿಸೇಲ್, ರಸಗೊಬ್ಬರ ಹಾಗೂ ಅಡುಗೆ ಅನಿಲದ ದರ ಅತ್ಯಂತ ಕಡಿಮೆ ಮಾಡಿ ಜನತೆಗೆ ಅನುಕೂಲ ಮಾಡುವುದಾಗಿ ಮತದಾರರಿಗೆ ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಾ ಅಧಿಕಾರಕ್ಕೆ ಬಂದು ಬಂಡವಾಳ ಶಾಹಿಗಳ ಕೈಗೊಂಬೆಯಾಗಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಅದರ ವಿರುದ್ಧವಾಗಿ ರಾಹುಲ್ ಗಾಂಧಿಯವರು ಎಲ್ಲ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಜಾಪ್ರಭುತ್ವಕ್ಕೆ ಬಹಳಷ್ಟು ಗಂಭೀರ ಪರಿಸ್ಥಿತಿ ಬಂದಿದೆ. ಅದಕ್ಕೆ ಕಾರಣವೇನೆಂದರೆ ಪ್ರಜಾಪ್ರಭುತ್ವದ ಅಡಿಯಲ್ಲಿ ಯಾವುದೇ ಚುನಾವಣೆಗಳು ನಡೆಯುತ್ತಿಲ್ಲ. ಒಬ್ಬ ವ್ಯಕ್ತಿ ಐದು ಕಡೆಗಳಲ್ಲಿ ಮತದಾನ ಮಾಡಿದ ಉದಾಹರಣೆಗಳಿವೆ. ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಹಾದೇವಪುರ ಕ್ಷೇತ್ರದಲ್ಲಿ ಸುಮಾರು ಹತ್ತು ಹತ್ತು ಅಡಿ ಸೈಜಿನ ಒಂದೇ ಮನೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ಮತದಾನ ಮಾಡಿದ್ದಾರೆ.ಹತ್ತು ಹತ್ತು ಅಡಿ ಮನೆಯಲ್ಲಿ 80 ಜನ ವಾಸಿಸಲು ಹೇಗೆ ಸಾಧ್ಯವಾಗುತ್ತದೆ. ಅಲ್ಲದೇ ಅನೇಕ ಜನ ಮರಣ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿ ಮತದಾನವಾಗಿರುವುದನ್ನು ನಾವು ಕಂಡಿದ್ದೇವೆ. 124 ವರ್ಷದ ವ್ಯಕ್ತಿಯೊಬ್ಬರು ಮತದಾನ ಮಾಡಿದ್ದಾರೆಂದು, 78-80 ವರ್ಷ ವಯಸ್ಸಿನವರು ಪ್ರಪ್ರಥಮ ಮತದಾರರು ಎಂದು ಮತದಾನ ಮಾಡಿಸುವ ಮೂಲಕ ಅಕ್ರಮ ಮತದಾನ ಮಾಡಿಸಿದ್ದಾರೆ ಎನ್ನುವುದು ಕಂಡು ಬರುತ್ತಿದೆ. ಅದಕ್ಕಾಗಿಯೇ ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರು ಹೋರಾಟ ಕೈಗೊಂಡಿದ್ದಾರೆ. ಅಕ್ರಮ ಹಾಗೂ ಖೊಟ್ಟಿ ಮತದಾನ ಅಂತಿಮ ಘಟ್ಟಕ್ಕೆ ತಲುಪುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಶೋಭಾ ಮೇಟಿ, ನಾಗರಾಜ ಹೊಂಬಳಗಟ್ಟಿ, ರಾಜಾಭಕ್ಷಿ ಬೆಟಗೇರಿ, ಮಹ್ಮದರಫೀಕ ಮುಲ್ಲಾ, ರಾಮಚಂದ್ರ ಕಲಾಲ, ಬಸವಂತಪ್ಪ ಹೊಸಮನಿ, ರಾಮು ಭಜಂತ್ರಿ, ನಬಿಸಾಬ್ ಕೆಲೂರ, ಶೇಖರಾಜ ಹೊಸಮನಿ, ಎ.ಪಿ. ದಂಡಿನ, ಮೌಲಾಸಾಬ್ ಬಾಗವಾನ್, ವಿಶ್ವನಾಥ ಪಾಟೀಲ, ಲಕ್ಷ್ಮಣ ತಗಡಿನಮನಿ, ಅಡಿವೆಪ್ಪ ಛಲವಾದಿ, ವಿನೋದ ವಡ್ಡರ, ರಫೀಕ್ ಕನಕವಾಡ, ರೋಹಿತ್ ಲಮಾಣಿ, ಭಿಮರಾಜ್ ಮುಂಡವಾಡ, ಮಂಜುನಾಥ ಹರಿಜನ್, ಅನ್ವರ್ ಜಾತಿಗೇರ, ಉಮೇಶ ಕಲಾಲ್, ರಾಘವೇಂದ್ರ ನೆರೆಗಲ್, ಮಂಜುನಾಥ ಕಟ್ಟೀಮನಿ, ಸುರೇಶ ಬಣಗಾರ ಉಪಸ್ಥಿತರಿದ್ದರು.