ಗ್ಯಾರಂಟಿಗಳ ಭಜನೆಯಲ್ಲಿ ಅಭಿವೃದ್ಧಿ ಮರೆತ ಕಾಂಗ್ರೆಸ್: ನಿಖಿಲ್

| Published : Apr 02 2024, 01:02 AM IST

ಗ್ಯಾರಂಟಿಗಳ ಭಜನೆಯಲ್ಲಿ ಅಭಿವೃದ್ಧಿ ಮರೆತ ಕಾಂಗ್ರೆಸ್: ನಿಖಿಲ್
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಗ್ಯಾರಂಟಿಗಳ ಭಜನೆ ಮಾಡುತ್ತಿರುವ ರಾಜ್ಯ ಸರ್ಕಾರದಲ್ಲಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲೂ ಹಣವಿಲ್ಲ. ಹೀಗಿರುವಾಗ ಗ್ಯಾರಂಟಿಗಳ ವಾರಂಟಿ ಎಷ್ಟು ದಿನ ಎಂಬುದು ಗೊತ್ತಿಲ್ಲ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಲೇವಡಿ ಮಾಡಿದರು.

ದೊಡ್ಡಬಳ್ಳಾಪುರ: ಗ್ಯಾರಂಟಿಗಳ ಭಜನೆ ಮಾಡುತ್ತಿರುವ ರಾಜ್ಯ ಸರ್ಕಾರದಲ್ಲಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲೂ ಹಣವಿಲ್ಲ. ಹೀಗಿರುವಾಗ ಗ್ಯಾರಂಟಿಗಳ ವಾರಂಟಿ ಎಷ್ಟು ದಿನ ಎಂಬುದು ಗೊತ್ತಿಲ್ಲ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಲೇವಡಿ ಮಾಡಿದರು.

ಇಲ್ಲಿನ ಒಕ್ಕಲಿಗರ ಭವನದಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರ ಸಮನ್ವಯ ಸಭೆ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಎರಡೂ ಸಂದರ್ಭದಲ್ಲಿ ಬರಗಾಲ ಆವರಿಸಿದೆ. ಪ್ರಸ್ತುತ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಮುಖ್ಯಮಂತ್ರಿಗಳಿಗೆ ಸಂಕಷ್ಟದ ಸ್ಥಿತಿಯ ಅರಿವೇ ಇಲ್ಲ ಎಂದು ಟೀಕಿಸಿದರು.

ನಂಬಿಸಿ ಮೋಸ ಮಾಡಿದ ಕಾಂಗ್ರೆಸ್:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆದ ವೇಳೆ ಸ್ವಾರ್ಥ ಸಾಧನೆಗಾಗಿ ಜೆಡಿಎಸ್‌ ಬೆಂಬಲವನ್ನು ಪಡೆದ ಕಾಂಗ್ರೆಸ್ 5 ವರ್ಷ ಮುಖ್ಯಮಂತ್ರಿ ಮಾಡುವುದಾಗಿ ಕುಮಾರಸ್ವಾಮಿ ಅವರನ್ನು ನಂಬಿಸಿ, 16 ತಿಂಗಳಲ್ಲೇ ಅಧಿಕಾರ ಕಸಿದುಕೊಂಡು ವಂಚಿಸಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ತಮ್ಮ ಸೋಲಿಗೆ, ತುಮಕೂರಿನಲ್ಲಿ ದೇವೇಗೌಡರ ಸೋಲಿಗೆ ಕಾಂಗ್ರೆಸ್‌ ಮೈತ್ರಿಧರ್ಮಕ್ಕೆ ಎಸಗಿದ ದ್ರೋಹವೇ ಕಾರಣ ಎಂದರು.

ಜನಪರ ಯೋಜನೆಗಳನ್ನು ಬೆಂಬಲಿಸಿ:

ರಾಜ್ಯದಲ್ಲಿ ಅತ್ಯಂತ ಕಡಿಮೆ ಅಧಿಕಾರಾವಧಿಯಲ್ಲಿ ಎಲ್ಲ ವರ್ಗಗಳ ಅಭ್ಯುದಯಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ನಾಯಕ ಕುಮಾರಸ್ವಾಮಿ. ಅವರ ಪಂಚರತ್ನ ಯೋಜನೆಯ ಪರಿಕಲ್ಪನೆ ಕೃಷಿ, ಶಿಕ್ಷಣ, ಉದ್ಯೋಗ, ನೀರಾವರಿ ಮತ್ತು ಕೈಗಾರಿಕಾ ಅಭಿವೃದ್ದಿಯ ಸಂಕೇತವಾಗಿತ್ತು. ಅದೇ ಮಾದರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪರ ಇಚ್ಛಾಶಕ್ತಿಯನ್ನು ಮೆಚ್ಚಿ ದೇವೇಗೌಡರು ಜೆಡಿಎಸ್‌ ಅನ್ನು ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಮಾಡಿದ್ದಾರೆ. ಹೆಚ್ಚಿನ ಜನಾಶೀರ್ವಾದ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್‌ ಮಿಲನೋತ್ಸವ!

ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಬಿಜೆಪಿ-ಜೆಡಿಎಸ್‌ ಮಿಲನ ಮಹೋತ್ಸವ ಸಂಭ್ರಮದಿಂದ ನಡೆದಿದ್ದು, ಲೋಕಸಭೆ ಚುನಾವಣೆ ಗೆಲವು ಎಂಬ ಶಿಶುವಿಗೆ ಉಭಯ ಪಕ್ಷಗಳು ಪೋಷಕರಾಗಬೇಕಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಮೋದಿ ಹಾಗೂ ದೇವೇಗೌಡರ ಆಶಯಗಳಿಗೆ ಪೂರಕವಾಗಿ ಕೆಲಸ ಮಾಡಿ ಗೆಲವಿನ ಸಂಕಲ್ಪ ಮಾಡಬೇಕಿದೆ ಎಂದರು.

ವಿಕಸಿತ ಭಾರತಕ್ಕಾಗಿ ಎನ್‌ಡಿಎ:

ದೊಡ್ಡಬಳ್ಳಾಪುರ ಶಾಸಕ ಧೀರಜ್‌ ಮುನಿರಾಜ್‌ ಮಾತನಾಡಿ, ವಿಕಸಿತ ಭಾರತದ ಸಾಕಾರಕ್ಕಾಗಿ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ. ಬಿಜೆಪಿ ಹಾಗೂ ಜೆಡಿಎಸ್‌ಗೆ ಕಾಂಗ್ರೆಸ್‌ ಸಮಾನ ವಿರೋಧ ಪಕ್ಷವಾಗಿದ್ದು, ಇದೊಂದು ಚುನಾವಣೆ ಮಾತ್ರವಾಗದೆ ಸದೃಢ ಭಾರತ ನಿರ್ಮಾಣದ ಪ್ರಕ್ರಿಯೆಯಲ್ಲಿ ಮಹತ್ವದ ಸಂದರ್ಭವಾಗಿದೆ. ಹೀಗಾಗಿ ಹೆಚ್ಚಿನ ಬಹುಮತದ ಮೂಲಕ ಸುಧಾಕರ್ ಅವರನ್ನು ಗೆಲ್ಲಿಸುವ ಅಗತ್ಯವಿದೆ ಎಂದರು.

ಜ್ವಲಂತ ಸಮಸ್ಯೆಗಳಿಗೆ ದನಿಯಾಗಿ:

ಜೆಡಿಎಸ್‌ ಮುಖಂಡ ಹರೀಶ್‌ಗೌಡ ಮಾತನಾಡಿ, ದೊಡ್ಡಬಳ್ಳಾಪುರ ಬೆಂಗಳೂರಿನ ಕಸದ ತೊಟ್ಟಿಯಾಗಿದೆ. ಅವೈಜ್ಞಾನಿಕ ಕಸ ವಿಲೇವಾರಿ, ಕೆರೆಗಳ ಉಳಿವು, ಕೆಐಎಡಿಬಿ ಭೂಸ್ವಾಧೀನ, ನೀರಿನ ಸಮಸ್ಯೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ನಿವಾರಣೆಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾಗುವ ಮತ ಪರಿಹಾರವಾಗಬೇಕು ಎಂದು ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ರಾಜಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಜಿಪಂ ಮಾಜಿ ಸದಸ್ಯ ಎ.ನರಸಿಂಹಯ್ಯ, ಎಚ್.ಅಪ್ಪಯ್ಯಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸೇರಿದಂತೆ ಜೆಡಿಎಸ್‌-ಬಿಜೆಪಿ ವಿವಿಧ ಘಟಕಗಳ ಮುಖಂಡರು ಉಪಸ್ಥಿತರಿದ್ದರು.

ಫೋಟೋ-1ಕೆಡಿಬಿಪಿ2-

ದೊಡ್ಡಬಳ್ಳಾಪುರದಲ್ಲಿ ಸೋಮವಾರ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಭೆಯಲ್ಲಿ ನಿಖಿಲ್‌ ಕುಮಾರಸ್ವಾಮಿ, ಡಾ.ಕೆ.ಸುಧಾಕರ್, ಧೀರಜ್ ಮುನಿರಾಜ್ ಮತ್ತಿತರರು ಭಾಗಿಯಾದರು.

1ಕೆಡಿಬಿಪಿ3-

ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್‌-ಬಿಜೆಪಿ ಸಮನ್ವಯ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.