ಕಾಂಗ್ರೆಸ್‌ದು ಗಬ್ಬರ್‌ಸಿಂಗ್ ಟ್ಯಾಕ್ಸ್: ವಿಪಕ್ಷ ನಾಯಕ ಆರ್.ಅಶೋಕ್

| Published : Sep 23 2025, 01:03 AM IST

ಕಾಂಗ್ರೆಸ್‌ದು ಗಬ್ಬರ್‌ಸಿಂಗ್ ಟ್ಯಾಕ್ಸ್: ವಿಪಕ್ಷ ನಾಯಕ ಆರ್.ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಡಿಎ ಸರ್ಕಾರ ಜನಸ್ನೇಹಿ ಸರ್ಕಾರ. ಜನರ ಮೇಲೆ ವಿಧಿಸಿದ್ದ ಜಿಎಸ್‌ಟಿಯನ್ನು ಇಳಿಸಿದೆ. ಇದರಿಂದ ಬಹುತೇಕ ದಿನಬಳಕೆ ವಸ್ತುಗಳ ಬೆಲೆ ಕಡಿಮೆಯಾಗಿದೆ. ಬಡವರು, ಮಧ್ಯಮ ವರ್ಗದವರು ಈಗ ನಿರಾಳರಾಗಿದ್ದಾರೆ. ಜಿಎಸ್‌ಟಿ ಭಾರ ಕಡಿಮೆ ಮಾಡಿರುವ ಯುಪಿಎ ಸರ್ಕಾರ ನುಡಿದಂತೆ ನಡೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಜನರ ಮೇಲೆ ಗಬ್ಬರ್‌ಸಿಂಗ್ ಟ್ಯಾಕ್ಸ್ ವಿಧಿಸಿದೆ. ೨೫ ವಸ್ತುಗಳ ಮೇಲೆ ತೆರಿಗೆ ಏರಿಕೆ ಮಾಡಿದರೂ ಯಾವುದಕ್ಕೂ ನಿಖರ ಕಾರಣ ಕೊಡಲಿಲ್ಲ. ಸರ್ಕಾರ ದಿವಾಳಿಯಾಗಿರುವುದಕ್ಕೆ ಇದೇ ಸಾಕ್ಷಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಎನ್‌ಡಿಎ ಸರ್ಕಾರ ಜನಸ್ನೇಹಿ ಸರ್ಕಾರ. ಜನರ ಮೇಲೆ ವಿಧಿಸಿದ್ದ ಜಿಎಸ್‌ಟಿಯನ್ನು ಇಳಿಸಿದೆ. ಇದರಿಂದ ಬಹುತೇಕ ದಿನಬಳಕೆ ವಸ್ತುಗಳ ಬೆಲೆ ಕಡಿಮೆಯಾಗಿದೆ. ಬಡವರು, ಮಧ್ಯಮ ವರ್ಗದವರು ಈಗ ನಿರಾಳರಾಗಿದ್ದಾರೆ. ಜಿಎಸ್‌ಟಿ ಭಾರ ಕಡಿಮೆ ಮಾಡಿರುವ ಎನ್‌ಡಿಎ ಸರ್ಕಾರ ನುಡಿದಂತೆ ನಡೆದಿದೆ ಎಂದು ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇ.೧೫ ರಿಂದ ಶೇ.೫ಕ್ಕೆ ಮತ್ತೆ ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಶೇ.೧೨ರಿಂದ ಶೇ.೫ಕಕೆ ಇಳಿಸಿದೆ. ಇದು ಸಾಮಾನ್ಯ ಜನರಿಗೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಯಾಗಿದೆ. ಇದನ್ನು ಸಹಿಸದ ಕಾಂಗ್ರೆಸ್ ಸರ್ಕಾರ ಮೊಸರಲ್ಲಿ ಕಲ್ಲು ಹುಡುಕುತ್ತಿದೆ. ತೆರಿಗೆ ಇಳಿಸಿದ್ದನ್ನು ಸ್ವಾಗತಿಸಬೇಕಾದ ಸರ್ಕಾರ ತೆರಿಗೆಯನ್ನು ಕಡಿತಗೊಳಿಸಿದ್ದೇಕೆ ಎಂದು ಪ್ರಶ್ನಿಸುತ್ತಿದೆ. ಆ ಮೂಲಕ ಜಿಎಸ್‌ಟಿ ಇಳಿಸಿದ್ದನ್ನು ಪ್ರಶ್ನಿಸಿದ ದೇಶದ ಯಾರಾದರೂ ಮುಖ್ಯಮಂತ್ರಿ ಇದ್ದರೆ ಅದು ಕರ್ನಾಟಕದ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು.

ತೆರಿಗೆ ಕಡಿಮೆ ಮಾಡಿದ್ದನ್ನು ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು. ನಾವು ಕಾಂಗ್ರೆಸ್ ಸರ್ಕಾರದಂತೆ ಜನರ ಮೇಲೆ ಗಬ್ಬರ್‌ಸಿಂಗ್ ಟ್ಯಾಕ್ಸ್ ಹೇರಿಲ್ಲ. ಗ್ಯಾರಂಟಿ ಯೋಜನೆಗಳನ್ನೂ ಸರಿಯಾಗಿ ಜಾರಿಗೊಳಿಸದೆ ಅವುಗಳ ಹೆಸರಿನಲ್ಲಿ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ. ಇದೊಂದು ಪಾಪರ್ ಸರ್ಕಾರ. ಮದ್ಯ, ವಿದ್ಯುತ್, ಹಾಲು, ನೋಂದಣಿ ಶುಲ್ಕ, ಬಸ್ ಟಿಕೆಟ್ ಹೀಗೆ ಸಿಕ್ಕದ್ದನ್ನೆಲ್ಲಾ ಏರಿಕೆ ಮಾಡಿ ಜನರ ಮೇಲೆ ತೆರಿಗೆ ಹೊರೆ ಹಾಕಿತು. ಇದರ ಪರಿಣಾಮ ಜನರು ಮೈಕ್ರೋ ಫೈನಾನ್ಸ್‌ಗಳ ಸಾಲದ ಸುಳಿಗೆ ಸಿಲುಕುವಂತಯಿತು ಎಂದು ದೂಷಿಸಿದರು.

ಎನ್‌ಡಿಎ ಸರ್ಕಾರ ಜಿಎಸ್‌ಟಿ ಇಳಿಸುವ ಸಮಯದಲ್ಲೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಹಾಗೂ ದೇಶದ ಆರ್ಥಿಕತೆಗೆ ಧಕ್ಕೆಯಾಗದ ರೀತಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿ ತೆರಿಗೆ ಮಿತಿಯನ್ನು ಕಡಿಮೆ ಮಾಡಿದೆ. ದೇಶದ ಜನರಿಗೆ ದಸರಾ ಕೊಡುಗೆ ನೀಡಿರುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಡಾ.ಸಿದ್ದರಾಮಯ್ಯ, ಡಾ.ಎನ್.ಎಸ್.ಇಂದ್ರೇಶ್, ಎಸ್.ಸಚ್ಚಿದಾನಂದ, ಎಸ್.ಪಿ.ಸ್ವಾಮಿ, ವಸಂತಕುಮಾರ್, ಅಶೋಕ್ ಜಯರಾಂ, ಬಸವರಾಜು, ಸಿ.ಟಿ.ಮಂಜುನಾಥ್ ಇದ್ದರು.ಜಾತಿ ಸಮೀಕ್ಷೆ ಹಿಂದೆ ಮತಾಂತರ ಹುನ್ನಾರ

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆ ಹಿಂದೆ ಮತಾಂತರದ ಹುನ್ನಾರ ಅಡಗಿದೆ. ಜಾತಿಯ ಹೆಸರಿನಲ್ಲಿ ಹಿಂದೂಗಳನ್ನು ಒಡೆದುಹಾಕಿ ಮತಾಂತರಕ್ಕೆ ಸಿಎಂ ಸಿದ್ದರಾಮಯ್ಯ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಹಿಂದೂಗಳಲ್ಲಿ ಮಾತ್ರ ಜಾತಿ, ಉಪಜಾತಿಯನ್ನು ಹುಡುಕುವ ಸಿದ್ದರಾಮಯ್ಯ, ಮುಸ್ಲಿಂ,ಕ್ರಿಶ್ಚಿಯನ್ ಸಮುದಾಯದಲ್ಲೂ ಜಾತಿಗಳಿದ್ದರೂ ಅವುಗಳನ್ನು ಏಕೆ ಉಲ್ಲೇಖ ಮಾಡಿಲ್ಲ. ಜಾತಿ ನಮೂನೆ ಸಿದ್ದರಾಮಯ್ಯ ನಿರ್ದೇಶನದಂತೆ ರಚನೆಯಾಗಿದೆ. ಸಿದ್ದರಾಮಯ್ಯ ಮತಾಂತರದ ರಾಯಭಾರಿಯಾಗಿದ್ದಾರೆ ಎಂದು ಮೂದಲಿಸಿದರು.

ಹಿಂದೂಗಳನ್ನು ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವುದೇ ಸಿದ್ದರಾಮಯ್ಯ ಉದ್ದೇಶ. ಈಗ ನಡೆಯುತ್ತಿರುವ ಧರ್ಮಸ್ಥಳ ಪ್ರಕರಣ, ಮದ್ದೂರು ಗಣೇಶನ ಗಲಾಟೆ, ಭಾನುಮುಷ್ಕಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ ಇವೆಲ್ಲವೂ ಅದರ ಪ್ರತೀಕವಾಗಿರುವಂತೆ ಕಂಡುಬರುತ್ತಿದೆ.

ತೆಲಂಗಾಣದಲ್ಲಿರುವ ೩ ಕೋಟಿ ಜನರ ಜಾತಿ ಸಮೀಕ್ಷೆಗೆ ೬ ತಿಂಗಳು ಕಾಲಾವಕಾಶ ಕೇಳಲಾಗಿದೆ. ರಾಜ್ಯದಲ್ಲಿ ೭ ಕೋಟಿ ಜನರ ಸಮೀಕ್ಷೆಗೆ ೧೫ ದಿನಗಳು ಸಾಲುವುದೇ. ಮೊನ್ನೆ ನಡೆದ ಒಕ್ಕಲಿಗ ಸಮುದಾಯ ಮುಖಂಡರ ಸಭೆಯಲ್ಲೂ ಸಮೀಕ್ಷೆ ದಿನಗಳನ್ನು ವಿಸ್ತರಿಸುವಂತೆ ನಿರ್ಣಯ ಮಾಡಿ ಕಳುಹಿಸಲಾಗಿದೆ. ಆದರೂ ಕಾಂಗ್ರೆಸ್ ಸರ್ಕಾರ ಆತುರಾತುರವಾಗಿ ಸಮೀಕ್ಷೆ ಮುಗಿಸಲು ಹೊರಟಿದೆ. ಅಕ್ಟೋಬರ್‌ಗೆ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಅವಧಿ ಮುಗಿಯಲಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಎಲ್ಲೆಡೆ ಓಡಾಡುತ್ತಿದ್ದಾರೆ. ಅಷ್ಟರೊಳಗೆ ಜಾತಿ ಸಮೀಕ್ಷೆ ಮುಗಿಸಬೇಕೆಂಬ ಹಠಕ್ಕೆ ಸಿದ್ದರಾಮಯ್ಯ ಬಿದ್ದಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರಕ್ಕೆ ಜಾತಿ ಸಮೀಕ್ಷೆ ನಡೆಸುವ ಸಾಂವಿಧಾನಿಕ ಅಧಿಕಾರವಿಲ್ಲ. ಅದಿರುವುದು ಕೇಂದ್ರಸರ್ಕಾರಕ್ಕೆ ಮಾತ್ರ. ಹಾಗಿದ್ದರೂ ವಿನಾಕಾರಣ ಜಾತಿ ಸಮೀಕ್ಷೆ ನಡೆಸಿ ವರದಿ ಪಡೆದುಕೊಳ್ಳಲು ಮುಂದಾಗಿದೆ. ವಿವಿಧ ಜಾತಿಗಳನ್ನು ಒಡೆದು ದೊಡ್ಡ ಸಂಖ್ಯಾಬಲವಿರುವ ಸಮುದಾಯಗಳನ್ನು ಚಿಕ್ಕದು ಮಾಡಿ ಚಿಕ್ಕ ಸಮುದಾಯಗಳನ್ನು ದೊಡ್ಡ ಸಂಖ್ಯೆಯಲ್ಲಿ ಬಿಂಬಿಸುವುದು. ಜೊತೆಗೆ ಅರ್ಜಿಯಲ್ಲಿ ಸ್ವತಂತ್ರವಾಗಿ ಏನನ್ನಾದರೂ ಬರೆಸುವ ಅವಕಾಶವನ್ನು ಒದಗಿಸಿರುವುದು ಜಾತಿಗಳನ್ನು ಮತ್ತಷ್ಟು ಒಡೆಯುವುದಕ್ಕೆ ಹೂಡಿರುವ ಸಂಚಾಗಿದೆ ಎಂದು ನುಡಿದರು.ಮಂಡ್ಯವನ್ನು ಮಂಗಳೂರು ಮಾಡ್ತಿರೋರೇ ಕಾಂಗ್ರೆಸ್ಸಿಗರು

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯವನ್ನು ಮಂಗಳೂರು ಮಾಡುತ್ತಿರುವವರು ಕಾಂಗ್ರೆಸ್ಸಿಗರೇ ಹೊರತು ನಾವಲ್ಲ. ಶಾಂತಿಯನ್ನು ಕದಡಿ ಅಶಾಂತಿ ಸೃಷ್ಟಿಸುವವರೇ ಕಾಂಗ್ರೆಸ್ಸಿಗರು. ಅವರ ಕಾಲದಲ್ಲೇ ಹಿಂದೂ-ಮುಸ್ಲಿಂ ಗಲಾಟೆಗಳು ಹೆಚ್ಚು ನಡೆದಿವೆ. ಗಣೇಶ ಪ್ರತಿಷ್ಠಾಪನೆ ಮಾಡಿದ್ದರ ಮುಂದೆಯೇ ಈದ್‌ ಮಿಲಾದ್ ಮೆರವಣಿಗೆ ಹಾದುಹೋಯಿತು. ಗಣೇಶನನ್ನು ಪ್ರತಿಷ್ಠಾಪಿಸಿದ್ದ ಹಿಂದೂಗಳಿಂದ ಮೆರವಣಿಗೆ ಮೇಲೆ ಯಾವ ಕಲ್ಲೂ ಬೀಳಲಿಲ್ಲ. ಏಕೆಂದರೆ ನಾವು ಶಾಂತಿಪ್ರಿಯರು. ಆದರೆ, ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲೆಸೆದರು. ಶಾಂತಿ ಕದಡುವವರು ನಾವೋ, ಅವರೋ. ಅವರನ್ನು ಕಾಂಗ್ರೆಸ್‌ನವರು ಬ್ರದರ್ಸ್‌, ಶಾಂತಿಪ್ರಿಯರು ಎನ್ನುತ್ತಾರೆ. ಅವರ ಮೇಲಿನ ಕೇಸುಗಳನ್ನು ವಾಪಸ್ ಪಡೆಯುತ್ತಾರೆ ಎಂದು ಅಶೋಕ್ ಕಿಡಿಕಾರಿದರು.