ಗಣೇಶನನ್ನು ನೆಮ್ಮದಿಯಾಗಿ ವಿಸರ್ಜನೆ ಮಾಡದ ಸ್ಥಿತಿಗೆ ತಂದ ಕಾಂಗ್ರೆಸ್ ಸರ್ಕಾರ: ಸಿ.ಎಸ್.ಪುಟ್ಟರಾಜು

| Published : Sep 12 2025, 12:06 AM IST

ಗಣೇಶನನ್ನು ನೆಮ್ಮದಿಯಾಗಿ ವಿಸರ್ಜನೆ ಮಾಡದ ಸ್ಥಿತಿಗೆ ತಂದ ಕಾಂಗ್ರೆಸ್ ಸರ್ಕಾರ: ಸಿ.ಎಸ್.ಪುಟ್ಟರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ-ಜೆಡಿಎಸ್‌ನವರಿಗೆ ಮಾಡಲು ಕೆಲಸವಿಲ್ಲ, ಕುತಂತ್ರ ಮಾಡ್ತಾರೆ ಎಂಬುದಾಗಿ ಹೇಳುತ್ತಾರೆ. ಶೇ.95ರಷ್ಟು ಹಿಂದುಗಳೇ ಇರುವ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ದೊಡ್ಡ ಅಪರಾಧ ಎಸಗಿದರು. ಕಳೆದ ವರ್ಷ ನಾಗಮಂಗಲದಲ್ಲಿ ಗಣಪತಿಯನ್ನು ಬಸ್‌ನಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡುವ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಿರ್ಮಾಣ ಮಾಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳು ನೆಮ್ಮದಿಯಾಗಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಸಾಧ್ಯವಾಗದ ಸ್ಥಿತಿಗೆ ಮಂಡ್ಯ ಜಿಲ್ಲೆಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ರೈಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಕಳೆದ ವರ್ಷ ನಾಗಮಂಗಲ, ಈಗ ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಗಲಭೆ ಉಂಟಾಗಿದ್ದು, ಕಾಂಗ್ರೆಸ್ಸಿನರು ಮಂಡ್ಯ ಜಿಲ್ಲೆಯನ್ನು ಹೀನಾಯ ಸ್ಥಿತಿಗೆ ತಳ್ಳುವ ಕೆಲಸ ಮಾಡಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್‌ನವರಿಗೆ ಮಾಡಲು ಕೆಲಸವಿಲ್ಲ, ಕುತಂತ್ರ ಮಾಡ್ತಾರೆ ಎಂಬುದಾಗಿ ಹೇಳುತ್ತಾರೆ. ಶೇ.95ರಷ್ಟು ಹಿಂದುಗಳೇ ಇರುವ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ದೊಡ್ಡ ಅಪರಾಧ ಎಸಗಿದರು. ಕಳೆದ ವರ್ಷ ನಾಗಮಂಗಲದಲ್ಲಿ ಗಣಪತಿಯನ್ನು ಬಸ್‌ನಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡುವ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಿರ್ಮಾಣ ಮಾಡಿದರು ಎಂದು ದೂರಿದರು.

ಚನ್ನಪಟ್ಟಣದಿಂದ ಬಂದ ಕಿಡಿಗೇಡಿಗಳು ಮೆರವಣಿಗೆ ವೇಳೆ ಗಣಪತಿಗೆ ಕಲ್ಲು ಎಸೆದು ಜಿಲ್ಲೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಇದನ್ನು ಮುಸ್ಲಿಂ ನಾಯಕರೇ ಒಪ್ಪಿಕೊಂಡಿದ್ದಾರೆ. ಈ ಬಾರಿ ಮದ್ದೂರಿನ ಜನ ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿದ್ದೀರಿ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಕೋಮುಗಲಭೆ ಹೆಚ್ಚಾಗಿವೆ. ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥನಿಗೆ ಕಳಂಕ ಬರುವಂತೆ ವರ್ತಿಸಿದರು. ಇದರಿಂದ ಕೆಲವರು ಜೈಲಿಗೆ ಹೋಗಿದ್ದಾರೆ. ಆ ಪರಿಸ್ಥಿತಿ ಕಾಂಗ್ರೆಸ್ಸಿಗರಿಗೂ ಬರಬಹುದು ಎಂದು ಎಚ್ಚರಿಸಿದರು.

ಜೈಲಿಗೆ ಕಳುಹಿಸಲು ಹುನ್ನಾರ:

ಮುಡಾ ಸೈಟ್ ಪ್ರಕರಣದಲ್ಲಿ ನನನ್ನು ಸಿಲುಕಿಸಿ ಜೈಲಿಗೆ ಕಳುಹಿಸಬೇಕು ಎಂಬ ಹುನ್ನಾರ ನಡೆದಿತ್ತು. ಈ ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲ. ಮುಡಾ ಹಂಚಿಕೆ ಮಾಡಿದ್ದ ನಿವೇಶನಗಳು ಮನೆ ಕಟ್ಟಲು ಯೋಗ್ಯವಿಲ್ಲ ಎಂದು ಕೆಲವರು ಸೈಟ್‌ಗಳನ್ನು ವಾಪಸ್‌ ಮಾಡಿದರು. ಹೀಗಾಗಿ, ಮುಡಾದ ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸೈಟ್ ಮಾರಾಟ ಮಾಡಿ ಬ್ಯಾಂಕ್ ಸಾಲ ತೀರಿಸುವ ವಿಚಾರ ಮಂಡಿಸಿದರು. ಅದನ್ನು ಸಮ್ಮತಿಸದ ನಾನು, ನಿವೇಶನ ಪಡೆಯಲು ಮತ್ತೊಮ್ಮೆ ಅರ್ಜಿ ಅಹ್ವಾನಿಸುವಂತೆ ಸಲಹೆ ನೀಡಿದೆ ಎಂದರು.

ಆದರೆ, ಈ ಪ್ರಕರಣದಲ್ಲಿ ನನ್ನ ವಿರುದ್ಧ ಸಂಚು ಮಾಡಿ ಸಿಲುಕಿಸುವ ಸಲುವಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ನನಗೆ ನಿರಪರಾಧಿ ಎಂದು ನ್ಯಾಯ ಸಿಕ್ಕಿದೆ. ಮುಂದೆಯೂ ಕೊನೆಯ ಉಸಿರು ಇರುವ ತನಕ ನನ್ನ ಜನತೆ ಪರವಾಗಿ ಕೆಲಸ ಮಾಡಿ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.

ಕ್ಷೇತ್ರ ಮರುವಿಂಗಡಣೆ ಬಳಿಕ ಮೇಲುಕೋಟೆ ಕ್ಷೇತ್ರದ ಪ್ರಥಮ ಶಾಸಕ ನಾನೇ. ಅದಕ್ಕೂ ಮೊದಲಿನ ಪಾಂಡವಪುರ ಕ್ಷೇತ್ರದ ಕೊನೆಯ ಶಾಸಕನೂ ನಾನೇ. ಪಾಂಡವಪುರ ಯಾರೊಬ್ಬರು ಸಂಸದ ಮತ್ತು ಸಚಿವರಾಗಿ ಕೆಲಸ ಮಾಡಿಲ್ಲ. ಈ ಕ್ಷೇತ್ರದ ಜನರ ಆಶೀರ್ವಾದದಿಂದ ಸಂಸದ ಮತ್ತು ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದರು.

2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ 82 ಸಾವಿರ ಮತದಾರರ ಆಶೀರ್ವಾದ ಮಾಡಿದರಿಗಾಗಿ ಬದುಕುತ್ತೇನೆ. ನಿಖಿಲ್ ಕುಮಾರಸ್ವಾಮಿ ಅವರು 8 ವಿಧಾನಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಪಾಂಡವಪುರದಲ್ಲಿ ಆಯೋಜಿಸಲು ನಿಖಿಲ್ ಕುಮಾರಸ್ವಾಮಿ ಅವರ ಬಳಿ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದರು.