ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಕೇವಲ ವೋಟ್ ಬ್ಯಾಂಕ್‌ಗಾಗಿ ಜಾರಿಗೆ ತಂದಿರುವ ಯೋಜನೆಗಳಾಗಿವೆ. ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುತ್ತೇವೆಂದು ಹೇಳಿ ಈಗ ಒಂದೇ ಸಮುದಾಯವನ್ನು ಓಲೈಸುವುದಕ್ಕಾಗಿ ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆಂಬ ಡಿ.ಕೆ.ಶಿವಕುಮಾರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಾಜಿ ಶಾಸಕ ಮಹೇಶ ಕುಮಟಳ್ಳಿ ಹೇಳಿದರು.ಪಟ್ಟಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಧರ್ಮಾಧಾರಿತ ಮಿಸಲಾತಿ ಇಲ್ಲ, ಜಾತಿ ಆಧಾರಿತ ಮೀಸಲಾತಿ ಇದೆ. ಅಂತದರಲ್ಲಿ ಒಂದು ಕೋಮಿನ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರದ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇ.04 ರಷ್ಟು ಮೀಸಲಾತಿ ನೀಡಿರುವುದು ಬೇರೆ ಸಮುದಾಯದವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಜೈನ ಸೇರಿದಂತೆ ಅನೇಕ ಹಲವಾರು ಧರ್ಮಗಳಿಗೆ ಅವುಗಳಿಗೆ ಇಲ್ಲದ ಮೀಸಲಾತಿ ಮುಸ್ಲಿಂ ಸಮುದಾಯಕ್ಕೆ ಮಾತ್ರ ಏಕೆ ಎಂದು ಪ್ರಶ್ನಿಸಿದರು.ಬಿಜೆಪಿಯವರು ಅಧಿಕಾರಕ್ಕೆ ಬಂದರೇ ಸಂವಿಧಾನ ಬದಲಾವಣೆ ಮಾಡುತ್ತಾರೆಂದು ಅಪ್ರಚಾರ ಮಾಡುತ್ತ ಬಂದಿದ್ದಾರೆ. ಕೇಂದ್ರದಲ್ಲಿ ಅನೇಕ ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಸರ್ಕಾರ ಡಾ.ಅಂಬೇಡ್ಕರ್ ಅವರಿಗೆ ಸಿಗಬೇಕಾದ ಗೌರವವನ್ನು ಒದಗಿಸಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಅವರಿಗೆ ಸಿಗಬೇಕಾದ ಗೌರವಗಳನ್ನು ನೀಡಿದ್ದಾರೆ ಎಂದರು.ಈ ವೇಳೆ ಅಥಣಿ ಮಂಡಲ ಬಿಜೆಪಿ ಅಧ್ಯಕ್ಷ ಡಾ.ರವಿ ಸಂಕ, ಜಿಲ್ಲಾ ಉಪಾಧ್ಯಕ್ಷ ನಿಂಗಪ್ಪ ನಂದೇಶ್ವರ, ಎಸ್ಸಿ ಮೋರ್ಚಾ ಅಧ್ಯಕ್ಷ ಗೌತಮ ಪರಾಂಜಿಪೆ, ಹಿರಿಯ ಮುಖಂಡರಾದ ಉಮೇಶರಾವ ಬಂಟೋಡ್ಕರ, ಸಿದ್ದಪ್ಪ ಮುದಕಣ್ಣವರ, ಶಶಿಕಾಂತ ಸಾಳ್ವೆ, ರಾಜೇಂದ್ರ ಐಹೋಳೆ, ಗಿರೀಶ ಬುಟಾಳಿ, ಸಿದ್ದು ಪಾಟೀಲ, ಮಲ್ಲಪ್ಪ ಹಂಚಿನಾಳ, ಸಂತೋಷ ಕಕಮರಿ, ನಿಶಾಂತ ದಳವಾಯಿ, ಮಹೇಶ ಪಾಟೀಲ, ಸಂಗಮೇಶ ಇಂಗಳಿ, ಶ್ರೀಶೈಲ ಅಂದಾನಿ ಸೇರಿದಂತೆ ಉಪಸ್ಥಿತರಿದ್ದರು.ಯತ್ನಾಳ ಉಚ್ಚಾಟಣೆಯಿಂದ ನೋವಾಗಿದೆ: ಮಾಜಿ ಶಾಸಕ ಕುಮಠಳ್ಳಿ
ಅಥಣಿ: ಉತ್ತರ ಕರ್ನಾಟಕದ ಗಟ್ಟಿ ಧ್ವನಿಯ ನಾಯಕ ಬಸನಗೌಡ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದು ನೋವಾಗಿದ್ದು, ಉತ್ತರ ಕರ್ನಾಟಕ ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಅವರಿಗೆ ಸಾಕಷ್ಟು ಬೆಂಬಲಿಗರು ಇದ್ದಾರೆ ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರ ಉಚ್ಚಾಟಣೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದೆ. ಅವರು ಉತ್ತರ ಕರ್ನಾಟಕದ ಗಟ್ಟಿ ನಾಯಕರು ಅವರನ್ನ ಉಚ್ಚಾಟಿಸುವುದರಿಂದ ಕೇವಲ ಪಂಚಮಸಾಲಿ ಸಮುದಾಯದ ಮತಗಳು ಮಾತ್ರವಲ್ಲದೇ ಎಲ್ಲ ಸಮುದಾಯ ಮತಗಳು ಬಿಜೆಪಿಯಿಂದ ದೂರವಾಗುವ ಸಾದ್ಯತೆಗಳಿವೆ. ಅವರು ಹಿಂದುತ್ವದ ಆಧಾರದಲ್ಲಿ ರಾಜಕೀಯ ಮಾಡಿದವರು. ರಾಷ್ಟ್ರೀಯ ನಾಯಕರ ಆದೇಶಕ್ಕೆ ಆಕ್ಷೇಪಣೆ ಮಾಡಲಾಗದು. ಆದರೆ, ಬಿಜೆಪಿ ಹಿತದೃಷ್ಟಿಯಿಂದ ರಾಷ್ಟ್ರೀಯ ನಾಯಕರ ತಾವು ನೀಡಿರುವ ಆದೇಶವನ್ನ ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎಂದು ಕೋರಿದರು.ಎಲ್ಲ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗಿ, ಎಲ್ಲ ನಾಯಕರು ಒಗ್ಗಟ್ಟಿನಿಂದ ೨೦೨೮ರಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ತರುತ್ತಾರೆ. ಯತ್ನಾಳ ಅವರ ರಕ್ತದಲ್ಲಿ ಬಿಜೆಪಿಯ ತತ್ವ ಸಿದ್ಧಾಂತಗಳು ಇವೆ. ಅದಕ್ಕೆ ಆದೇಶವನ್ನು ಮರು ಪರಿಶೀಲನೆ ಮಾಡಬೇಕು. ರಾಷ್ಟ್ರೀಯ ನಾಯಕರು ಸಾಕಷ್ಟು ಬಾರಿ ಅವಕಾಶ ನೀಡಿದ್ದಾರೆ. ಆದರೂ ಇನ್ನೊಮ್ಮೆ ಅವಕಾಶ ನೀಡಬೇಕೆಂಬ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.