ಕಾಂಗ್ರೆಸ್ ಸರ್ಕಾರ ಇನ್ನು ಟೇಕಫ್ ಆಗಿಲ್ಲ: ಕೆ.ಸುರೇಶ್‌ಗೌಡ

| Published : Nov 11 2023, 01:15 AM IST

ಕಾಂಗ್ರೆಸ್ ಸರ್ಕಾರ ಇನ್ನು ಟೇಕಫ್ ಆಗಿಲ್ಲ: ಕೆ.ಸುರೇಶ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಕ್ಕೆ ಬಂದು 6 ತಿಂಗಳಾದ್ರು ಇನ್ನು ಕಾಂಗ್ರೆಸ್ ಸರ್ಕಾರ ಟೇಕಾಫ್ ಆಗಿಲ್ಲ. ಚೀಪ್ ಪಾಪುಲರಿಟಿ ಸ್ಕೀಂಗಳನ್ನು ಮಾಡಿಕೊಂಡು ಅದರ ಸುಳಿಯಲ್ಲಿ ಒದ್ದಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಸುರೇಶ್‌ಗೌಡ ಆರೋಪಿಸಿದರು.

ಮದ್ದೂರು: ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾದ್ರು ಇನ್ನು ಸಿದ್ದರಾಮಯ್ಯ ಸರ್ಕಾರ ಟೇಕಾಫ್ ಆಗಿಲ್ಲ. ಚೀಪ್ ಪಾಪುಲರಿಟಿ ಸ್ಕೀಂಗಳನ್ನು ಮಾಡಿಕೊಂಡು ಅದರ ಸುಳಿಯಲ್ಲಿ ಒದ್ದಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಸುರೇಶ್‌ಗೌಡ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರ ಎಂದು ಹೆಸರು ತೆಗೆದುಕೊಂಡಿದ್ದಾರೆ. ಗೊತ್ತಿದ್ದೂ ಗೊತ್ತಿದ್ದೂ ಈ ಕೂಪಕ್ಕೆ ಬಿದ್ದಿದ್ದಾರೆ. ಈ ರಾಜ್ಯವನ್ನು 25 ವರ್ಷದ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಮುಂದೆ ಅಭಿವೃದ್ಧಿ ಮಾಡಲು ಕಷ್ಟವಾಗಲಿದೆ. ಸುಳ್ಳು ಹೇಳಿಕೊಂಡು ತಿರುಗಾಡುತ್ತಾ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ನವರು ಕೊಟ್ಟಿರುವ ಯೋಜನೆ ಶೇ.20ರಷ್ಟು ಜನರಿಗೆ ತಲುಪಿಲ್ಲ. ಅಕ್ಕಿ ಕೊಡ್ತಿದ್ದೀವಿ ಅಂತಾರೆ. ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಮಹಿಳೆಯರಿಗೆ 2 ಸಾವಿರ ರು. ಹಣವನ್ನು ನೂರರಷ್ಟು ಕೊಡುತ್ತಿಲ್ಲ. ಯುವನಿಧಿ ಕೊಟ್ಟಿಲ್ಲ, ವಿದ್ಯುತ್ ಉತ್ಪಾದನೆಯೇ ಇಲ್ಲ. ಕರೆಂಟ್ ಎಲ್ಲಿಂದ ಕೊಡ್ತಾರೆ. ಕೃತಕ ಅಭಾವ ಸೃಷ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಏನೂ ನಡೆಯುತ್ತಿಲ್ಲ ಎಂದು ನೇರವಾಗಿ ಹೇಳುತ್ತೇನೆ ಎಂದರು.

ಬಿಜೆಪಿ ಸರ್ಕಾರದ ಕಾಮಗಾರಿಗಳಿಗೆ ಹೀಗಿರುವ ಶಾಸಕರು, ಮಂತ್ರಿಗಳು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಕೊಡುವುದಕ್ಕೆ ಆಗುವುದಿಲ್ಲ. ಗುತ್ತಿಗೆದಾರರ ಬಳಿ ಕೇಳಿದರೆ ಗೊತ್ತಾಗುತ್ತೆ ಎಂದು ಹೇಳಿದರು.

ನಮ್ಮ ಗುರಿ ಲೋಕಸಭಾ ಚುನಾವಣೆ ಗೆಲ್ಲುವುದು. ನಮ್ಮ ಹೈಕಮಾಂಡ್ ಯಾರಿಗೇ ಟಿಕೆಟ್ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡಲು ನಾವು ಬದ್ದ ಎಂದು ತಿಳಿಸಿದರು.

ಆಪರೇಷನ್ ಹಸ್ತ ವಿಚಾರದ ಬಗ್ಗೆ ಕೇಳಿದಾಗ, ಕೆಲವರಿಗೆ ಅವರದ್ದೇ ಆದ ರಾಜಕೀಯ ಲೆಕ್ಕಾಚಾರಗಳಿರುತ್ತವೆ. ಅದರ ಮೇಲೆ ಕೆಲವರು ಪಕ್ಷದಿಂದ ಪಕ್ಷಕ್ಕೆ ಜಂಪ್ ಆಗುತ್ತಾರೆ. ನಮ್ಮ ಪಕ್ಷದಿಂದ ಯಾರು ಹೋಗುತ್ತಾರೆ ಅಂತ ಗೊತ್ತಿಲ್ಲ, ಡಿ.ಕೆ. ಶಿವಕುಮಾರ್ ಯಾರನ್ನು ಸಂಪರ್ಕ ಮಾಡಿದ್ದಾರೆ ಅನ್ನೋದನ್ನ ಅವರೇ ಹೇಳಬೇಕು‌ ಎಂದರು.