ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟರ ₹11 ಸಾವಿರ ಕೋಟಿಗೂ ಅಧಿಕ ಹಣ ಗ್ಯಾರಂಟಿಗೆ ಬಳಕೆ, ರಾಜ್ಯದಲ್ಲಿ 875ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿದರೂ ರೈತ ಪರ ಕಾಳಜಿ ತೋರದ, ಎಲ್ಲಾ ರಂಗದಲ್ಲೂ ವೈಫಲ್ಯಗಳ ದೊಡ್ಡ ಸರಮಾಲೆಯನ್ನೇ ಹಾಸು ಹೊದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಕ್ಷಣ ಅಧಿಕಾರದಿಂದ ಕೆಳಗಿಳಿಯಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಒತ್ತಾಯಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರೂ ಬರ ಪರಿಹಾರ ಕಾರ್ಯ ಕೈಗೊಳ್ಳಲು ವಿಫಲವಾದ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ಸರ್ಕಾರ ಪರಿಹಾರದ ಮೊತ್ತದ ಆಸೆಗೆ ರೈತರ ಆತ್ಮಹತ್ಯೆಯಾಗುತ್ತಿವೆಯೆನ್ನುವ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ರೈತ ವಿರೋಧಿಯಾಗಿದೆ. ಕಾವೇರಿ ನೀರನ್ನು ಹರಿಯಲು ಬಿಟ್ಟು, ಕಾವೇರಿ ಕೊಳ್ಳದ ಬದುಕನ್ನೇ ದುರ್ಬರಗೊಳಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ದೂರಿದರು.
ರಾಜ್ಯಾದ್ಯಂತ ಕುಡಿಯುವ ನೀರಿನ ಘಟಕಗಳು ಮುಚ್ಚುತ್ತಿವೆ. ಟ್ಯಾಂಕರ್ ನೀರಿನ ಮಾಫಿಯಾಗೆ ಜೊತೆಯಾಗಿ ನೀರಿನ ಬೆಲೆ ದುಪ್ಪಟ್ಟು ಮಾಡಿದ್ದು ಕಾಂಗ್ರೆಸ್ ಸರ್ಕಾರ. ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸದೇ, ಉದ್ಯಮಗಳು ಬಾಗಿಲು ಮುಚ್ಚಿ, ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಶೋಷಿತ, ಪೀಡಿತ, ವಂಚಿತ ತಳ ಸಮುದಾಯಗಳ ಮೇಲಿನ ನಿರಂತರ ಅನ್ಯಾಯ ಮುಂದುವರಿದಿದ್ದು, ಇದೊಂದು ದಲಿತ ವಿರೋಧಿ ಸರ್ಕಾರ ಎಂದು ಆರೋಪಿಸಿದರು.ಕಾಂಗ್ರೆಸ್‌ನ ಸಚಿವರು, ಶಾಸಕರು ರಾಜ್ಯ, ಕ್ಷೇತ್ರ ಪ್ರವಾಸ ಮಾಡುತ್ತಿಲ್ಲ. ಒಂದೇ ಒಂದು ಕಡೆ ಚರಂಡಿ, ರಸ್ತೆ ಸೇರಿ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುತ್ತಿಲ್ಲ. ಇದೊಂದು ಅಭಿವೃದ್ಧಿ ಶೂನ್ಯ ಸರ್ಕಾರ. ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆ. ಅಬಕಾರಿ ಸುಂಕ, ಆಸ್ತಿ ನೋಂದಣಿ, ವಾಹನ ನೋಂದಣಿ ದರಹೆಚ್ಚಿಸಿದೆ. ನರೇಂದ್ರ ಮೋದಿಯವರನ್ನೇ ಸೋಲಿಸಲೆಂದೇ ಐಎನ್‌ಡಿ ಮೈತ್ರಿಕೂಟ ರಚಿಸಿಕೊಂಡ ಕಾಂಗ್ರೆಸ್‌ಗೆ ಚುನಾವಣೆ ಮುನ್ನವೇ ಮೈತ್ರಿಕೂಟ ಛಿದ್ರವಾಗಿ ಮುಖಭಂಗವಾಗಿದೆ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲಕುಮಾರ ನಾಯ್ಕ, ಶಿವರಾಜ ಪಾಟೀಲ, ಕೊಟ್ರೇಶಗೌಡ, ಶಶಿಕುಮಾರ, ಎಚ್.ಪಿ.ವಿಶ್ವಾಸ, ಐಗೂರು ಲಿಂಗರಾಜ ಇತರರಿದ್ದರು.....................
ಭದ್ರಾ ಅಚ್ಚುಕಟ್ಟು ರೈತರ ಬದುಕು ಬಲಿ ಕೊಡದಿರಿರೈತ ಮೋರ್ಚಾ ಹಿರಿಯ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಭದ್ರಾ ಜಲಾಶಯದ ಶೇ.70 ಅಚ್ಚುಕಟ್ಟು ಪ್ರದೇಶ ದಾವಣಗೆರೆ ಜಿಲ್ಲೆಯಲ್ಲಿದೆ. ಅಚ್ಚುಕಟ್ಟಿನ ಶೇ.30ರಷ್ಟಿರುವ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಾಗಿ ಅಚ್ಚುಕಟ್ಟು ರೈತರ ಬದುಕನ್ನೇ ಶಿವಮೊಗ್ಗ ಉಸ್ತುವಾರಿ ಸಚಿವರು ಬಲಿ ಕೊಟ್ಟಿದ್ದಾರೆ ಎಂದರು. ಜಿಲ್ಲೆಯಲ್ಲಿ ಶೇ.80ರಷ್ಟು ಗ್ರಾಮಗಳ ಕುಡಿಯುವ ನೀರಿಗೆ ಕೊಳವೆ ಬಾವಿಗಳೇ ಆಸರೆ. ಆದರೆ, ಅಂತರ್ಜಲ ಬತ್ತಿದ್ದು, ತೋಟಗಳ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕಬ್ಬು ಬೆಳೆದ ರೈತರು, ತೋಟದ ಬೆಳೆಗಳ ಉಳಿಸಿಕೊಳ್ಳಲು, ಕುಡಿಯುವ ನೀರಿಗಾಗಿ ನಾಲೆಗೆ ತುರ್ತಾಗಿ ನೀರು ಬಿಡಬೇಕಿದೆ. ಆದರೆ, ನಾಲೆಯ ಮೇಲ್ಭಾಗದಿಂದಲೇ ನೀರು ಕಡಿಮೆಯಾಗಿ, ಕೊನೆಯ ಭಾಗಕ್ಕೆ ನೀರೇ ತಲುಪುತ್ತಿಲ್ಲ. ಜೀವ ಉಳಿಸಿಕೊಳ್ಳುವುದಕ್ಕಾದರೂ ನೀರು ಕೊಡಬೇಕೆಂಬ ಕಾಳಜಿ ಸರ್ಕಾರ ಪ್ರದರ್ಶಿಸಲಿ ಎಂದು ತಾಕೀತು ಮಾಡಿದರು.
ಕನಿಷ್ಟ ಬೆಂಬಲ ಬೆಲೆ ಸೇರಿ ದೆಹಲಿ ಸುತ್ತಮುತ್ತ ರೈತರು ಹೋರಾಟ ನಡೆಸಿದ್ದು, ದೇಶದ ಬಜೆಟ್ ಗಾತ್ರವೇ ₹47 ಲಕ್ಷ ಕೋಟಿ ಇದೆ. ಒಂದು ವೇಳೆ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನಿಗದಿಪಡಿಸಿದರೆ ಅದಕ್ಕೆ ₹40 ಲಕ್ಷ ಕೋಟಿ ರು. ಬೇಕಾಗುತ್ತದೆ. ಇದು ಕಾರ್ಯ ಸಾಧುವೆ? ಹಿಂದೆ ಯುಪಿಎ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇರಲಿಲ್ಲ. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರ ಬದುಕು ಹಸನಾಗಿಸಲು ಪ್ರಯತ್ನಿಸುತ್ತಿದೆ. ಈ ಮಧ್ಯೆ ಹೋರಾಟದ ಹೆಸರಿನಲ್ಲಿ ರೈತರನ್ನು ದಾರಿ ತಪ್ಪಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಬಿ.ಎಂ.ಸತೀಶ ಕೊಳೇನಹಳ್ಳಿ, ಬಿಜೆಪಿ ರೈತ ಮೋರ್ಚಾ ಮುಖಂಡ.