ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಆರೋಪಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ರೈತ, ದಲಿತ ವಿರೋಧಿ ಸರ್ಕಾರವಾಗಿದೆ. ದಲಿತರಿಗೆ ಮೀಸಲಿದ್ದ 11 ಸಾವಿರ ಕೋಟಿ ರು.ಗಳನ್ನು ಅನ್ಯಉದ್ದೇಶಕ್ಕೆ ಬಳಸಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿದೆ. ರಾಜ್ಯದಲ್ಲಿ ಬರ ಆವರಿಸಿದ್ದರೂ ರೈತರಿಗೆ ಬರ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಸರಕಾರ ರೈತ ವಿರೋಧಿ ನಿಲುವು ತಾಳಿದೆ ಎಂದು ಟೀಕಿಸಿದರು. ಕಾಂಗ್ರೆಸ್ ದೆಹಲಿ ತಿಜೋರಿ ತುಂಬಲು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಅಧಿಕಾರಿಗಳಿಗೆ ಇಂತಿಷ್ಟು ನೀಡಬೇಕು ಎಂದು ಟಾಸ್ಕ್ ನೀಡಲಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗ್ಯಾರಂಟಿಗಳ ಸಲುವಾಗಿ ಕ್ಷೇತ್ರದಲ್ಲಿ ಯಾವೊಂದು ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿದಿರುವ ಕಾರಣ ಇತ್ತೀಚೆಗೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ದೂರಿದರು. ಕೇಂದ್ರದಿಂದ ಸಾಕಷ್ಟು ಅನುದಾನವನ್ನು ನೀಡಿದ್ದರೂ ಮತ್ತೆ ಕೇಂದ್ರದತ್ತ ಬೊಟ್ಟು ಮಾಡುವುದನ್ನು ಸಿದ್ದರಾಮಯ್ಯ ಮುಂದುವರಿಸಿದ್ದಾರೆ. ಪ್ರಧಾನಿ ಮೋದಿ 9 ವರ್ಷದಲ್ಲಿ ಮಾಡಿದ್ದನ್ನು ಕಾಂಗ್ರೆಸ್ 70 ವರ್ಷದ ಆಡಳಿತದಲ್ಲಿ ಮಾಡಲಿಲ್ಲ ಎಂದು ಹೇಳಿದರು. ಮನೆಮನೆಗೆ ಶುದ್ದ ಕುಡಿವ ನೀರು, ಜನ್‌ಧನ್, ಜಲ್‌ಜೀವನ್ ಮಿಷನ್ ಇವೆಲ್ಲವೂ ಪ್ರಧಾನಿ ಮೋದಿಯ ಕೊಡುಗೆ. ಭಾರತ್ ಬ್ರಾಂಡ್ ಹೆಸರಲ್ಲಿ 29 ರೂ. ಗೆ ಒದು ಕಿಲೋ ಅಕ್ಕಿ ನೀಡುತ್ತಿದೆ ಕೇಂದ್ರ. 27 ರೂ.ಗೆ 1 ಕಿಲೋ ಗೋದಿ ಹಿಟ್ಟು ನೀಡಲಾಗುತ್ತಿದೆ. ಭಾರತ್‌ದಾಲ್ ಸಹ ನೀಡಲಾಗಿದೆ. ವಿಕಸಿತ ಭಾರತದ ಕಲ್ಪನೆ ಪ್ರಧಾನಿ ಮೋದಿ ಅವರದ್ದಾಗಿದೆ ಎಂದು ತಿಳಿಸಿದರು. ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳುಹಿಸುತ್ತಿದೆ. ಹಿಂದೂ ದೇವಸ್ಥಾನಗಳ ಹುಂಡಿ ಹಣವನ್ನು ಕಿತ್ತು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ಸಿ.ಎಚ್.ಲೋಕೇಶ್, ಹಿರೇಮಗಳೂರು ಪುಟ್ಟಸ್ವಾಮಿ, ನಗರಾಧ್ಯಕ್ಷ ಪುಷ್ಪರಾಜ್, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್ ಉಪಸ್ಥಿತರಿದ್ದರು.
1 ಕೆಸಿಕೆಎಂ 5