ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಮಲೆನಾಡಿನ ಜೀವನಾಡಿ ಆಗಿರುವ ಅಡಕೆಯ ಬೆಲೆ ದಿಢೀರ್ ಕುಸಿತ ಹಾಗೂ ಅಡಕೆ ಕಳ್ಳ ಸಾಗಣೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸಾಗರ ತಾಲೂಕಿನ ಅಡಕೆ ಪರಿಷ್ಕರಣ ಹಾಗೂ ಮಾರಾಟ ಸಹಕಾರ ಸಂಘ (APSCOS)ದ ನಿಯೋಗ ಶಿಕಾರಿಪುರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಯ ಧಾರಣೆ ಈ ತಿಂಗಳಲ್ಲಿ ಏಕಾಏಕಿ ಐದಾರು ಸಾವಿರ ರೂ.ಗಳಷ್ಟು ಕುಸಿತ ಕಂಡಿದೆ. ಇನ್ನೂ ಆರೆಂಟು ಸಾವಿರ ರೂ. ಇಳಿತವಾದರೂ ಅಚ್ಚರಿಯಿಲ್ಲ ಎಂದು ವ್ಯಾಪಾರೀ ವಲಯವೇ ಅಂದಾಜು ಮಾಡುತ್ತಿದೆ. ಇದು ಅಡಕೆ ಬೆಳೆಗಾರ ವಲಯ ಹಾಗೂ ಅವಲಂಬಿತ ಕ್ಷೇತ್ರಗಳ ಜನರನ್ನು ಆತಂಕಿತರನ್ನಾಗಿ ಮಾಡಿದೆ. ಕ್ಷೇತ್ರತಜ್ಞರ ಅಧ್ಯಯನ ಪ್ರಕಾರ ಭಾರತಕ್ಕೆ ಬರ್ಮಾ ದೇಶದಿಂದ ತೆರಿಗೆ ಪಾವತಿಸದೆ ಕಳ್ಳ ಸಾಗಾಣಿಕೆ ರೂಪದಲ್ಲಿ ಅಡಕೆ ಬರುತ್ತಿರುವುದೇ ದೇಸಿ ಅಡಕೆ ದರ ಕುಸಿತಕ್ಕೆ ಮುಖ್ಯ ಕಾರಣ ಎಂದು ಆಕ್ಸ್‌ಕೋಸ್ ನಿಯೋಗ ವಿವರಿಸಿತು.
ಚಾಲಿ ಅಡಕೆ ಅಜಮಾಸು ₹೨೫ ಸಾವಿರದಲ್ಲಿ ಭಾರತದ ಮಾರುಕಟ್ಟೆಗೆ ಬರ್ಮಾದಿಂದ ಬಿಕರಿ ಆಗುತ್ತಿದೆ. ಇದರಿಂದ ₹೩೭ ಸಾವಿರದ ಸರಾಸರಿಯಲ್ಲಿದ್ದ ಚಾಲಿ ಅಡಕೆ ಕ್ವಿಂಟಲ್ ಬೆಲೆ ₹೩೦ ಸಾವಿರದ ಆಜುಬಾಜಿಗೆ ಕುಸಿದಿದೆ. ಕೆಂಪಡಿಕೆ ದರದಲ್ಲಿಯೂ ಕುಸಿತ ಕಾಣಿಸಿದ್ದು, ಈವರೆಗೆ ₹೪೯-₹೫೦ ಸಾವಿರಗಳ ದರ ಹೊಂದಿದ ಕೆಂಪಡಿಕೆ ಬೆಲೆ ಈಗ ₹೪೨-೪೩ ಸಾವಿರಕ್ಕೆ ಬಂದಿದೆ. ಜಿಲ್ಲೆಯಲ್ಲಿರುವ ಸಾಂಪ್ರದಾಯಿಕ ಅಡಕೆ ಬೆಳೆಗಾರರಲ್ಲಿ ಶೇ.೮೦ರಷ್ಟು ಮಂದಿ ಸಣ್ಣ ಬೆಳೆಗಾರರಾಗಿದ್ದು, ದರ ಕುಸಿತರ ನೇರ ಪರಿಣಾಮ ಅವರ ಬದುಕಿನ ಮೇಲಾಗುತ್ತಿದೆ. ಜೊತೆಗೆ ಅಡಕೆ ಅವಲಂಬಿಸಿದ ಇತರ ವಲಯಗಳ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.ಅಡಕೆ ಮಾರುಕಟ್ಟೆಗೆ ಬರುವಂತಹ ಈ ಕಾಲಘಟ್ಟದಲ್ಲಿ ಆಗಿರುವ ತೀವ್ರ ದರ ಕುಸಿತ ಅಡಕೆ ಬೆಳೆಗಾರರ ಬದುಕಲ್ಲಿ ಆಘಾತ ಉಂಟುಮಾಡಿದೆ. ಈ ಹಿನ್ನೆಲೆ ಅಡಕೆ ಕಳ್ಳ ಸಾಗಾಣಿಕೆ ನಡೆಯುತ್ತಿರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತಾಗಬೇಕು. ತೆರಿಗೆ ರಹಿತವಾಗಿ ಒಳನುಗ್ಗುತ್ತಿರುವ ಅಡಕೆಗೆ ಪ್ರತಿಬಂಧಕ ಕ್ರಮವನ್ನು ಅಧಿಕಾರಿ ವರ್ಗ ಕೈಗೊಳ್ಳುವಂತೆ ಮಾಡಬೇಕು. ಬೇನಾಮಿಯಾಗಿ ಬಂದ ಅಡಕೆ ಮಾಲನ್ನು ಬಳಕೆಯಿಂದ ಹೊರಗಿಡಬೇಕು. ಆ ಮೂಲಕ ಅಡಕೆಯ ಬೆಲೆಯ ಹಿಂಜರಿಕೆ ತಡೆದು, ಬೆಳೆಗಾರರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕೇಂದ್ರದ ಗಮನಕ್ಕೆ ತರುವ ಭರವಸೆ:ಯಡಿಯೂರಪ್ಪ ಅವರು ಮನವಿ ಸ್ವೀಕರಿಸಿ ಮಾತನಾಡಿ, ದರ ಕುಸಿತ ಹಾಗೂ ಕಳ್ಳ ಸಾಗಾಣಿಕೆ ಅಡಕೆ ಕುರಿತು ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸುತ್ತೇನೆ. ತಕ್ಷಣವೇ ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಕೇಂದ್ರದ ಸಚಿವರೊಂದಿಗೆ ಮಾತನಾಡಿ, ವಶಪಡಿಸಿಕೊಳ್ಳಲಾದ ಕಳ್ಳ ಸಾಗಾಣಿಕೆ ಅಡಕೆಯನ್ನು ಬಳಕೆಗೆ ಸಿಗದಂತೆ ಮಾಡಬೇಕು ಎಂಬ ವಾದವನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಅಡಕೆ ಪರಿಷ್ಕರಣ ಹಾಗೂ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಿ.ಎ. ಇಂದೂಧರ, ಉಪಾಧ್ಯಕ್ಷ ಕೆ.ಎಸ್.ಸುಬ್ರಾವ್, ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ಎಂ. ಸೂರ್ಯನಾರಾಯಣ, ನಿರ್ದೇಶಕರಾದ ಎಚ್.ಕೆ. ರಾಘವೇಂದ್ರ, ಎಚ್.ಎಂ. ಓಮಕೇಶ, ಎಚ್.ಬಿ. ಕಲ್ಯಾಣಪ್ಪಗೌಡ, ಕೆ.ಎಸ್. ಭಾಸ್ಕರ ಭಟ್, ವೈ.ಎನ್. ಸುರೇಶ ಇನ್ನಿತರರು ಇದ್ದರು.- - - -೨೯ಕೆ.ಎಸ್.ಎ.ಜಿ.೧:
ಅಡಕೆ ಬೆಲೆ ದಿಢೀರ್ ಕುಸಿತ ಹಾಗೂ ಅಡಕೆ ಕಳ್ಳ ಸಾಗಣೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾಗರ ತಾಲೂಕಿನ ಅಡಕೆ ಪರಿಷ್ಕರಣ ಹಾಗೂ ಮಾರಾಟ ಸಹಕಾರ ಸಂಘದ ನಿಯೋಗ ಶಿಕಾರಿಪುರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು.