ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಕೇಂದ್ರ ಸರ್ಕಾರದಿಂದ ಅತೀ ಹೆಚ್ಚು ಅನುದಾನ ತಂದು ಶಕ್ತಿ ಮೀರಿ ಅನೇಕ ಅಭಿವೃದ್ಧಿ ಕೆಲಸ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಪಟ್ಟಣ ಸಮೀಪದ ಸನ್ಯಾಸಿಕೋಡಮಗ್ಗೆ ಗ್ರಾಮದಲ್ಲಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದ ನೂತನ ಕಟ್ಟಡದ ಉದ್ಘಾಟನೆಯನ್ನು ಶುಕ್ರವಾರ ನೆರೆವೇರಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಅಗತ್ಯ ಇರುವ ಕಡೆ ಅನುದಾನ ನೀಡಲಾಗಿದೆ. ಕೇಂದ್ರ ಸರಕಾರದ ಜನಪರ ಯೋಜನೆಗಳಿಂದ ಭಾರತದ ದೇಶೀಯ ಉತ್ಪನ್ನ ಹೆಚ್ಚಳವಾಗಿ ತಲಾದಾಯ ವೃದ್ಧಿಸಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಗತಿಪರ ಪಕ್ಷಕ್ಕೆ ಸಂಪೂರ್ಣ ಸಹಕಾರ ನೀಡಿ ಎಂದರು.ಶಾಸಕಿ ಶಾರದ ಪೂರ್ಯಾನಾಯ್ಕ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.90ರಷ್ಟು ಕಾಂಕ್ರೀಟ್ ರಸ್ತೆ ಆಗಿದೆ. ಆದರೆ, ಜಮೀನುಗಳಿಗೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅರ್ಜಿ ಬಂದಿವೆ. ಆದರೆ, ಎಲ್ಲ ರಸ್ತೆಗೆ ಅನುದಾನ ಕೊರತೆ ಇದೆ. ತೀರಾ ಆಗತ್ಯ ಇರುವ ಎರಡು ರಸ್ತೆ ಕಾಮಗಾರಿ ಕೈತ್ತಿಕೊಳ್ಳಲಾಗುತ್ತದೆ. ಇನ್ನುಳಿದ ಕೆಲಸ ಲೋಕಸಭೆ ಚುನಾವಣೆ ನಂತರ ಹಂತಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ತಲಾ ₹3 ಲಕ್ಷ ಹಾಗೂ ₹2 ಲಕ್ಷ ದುರಸ್ತಿಗಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.
- - - ಬಾಕ್ಸ್ ಗ್ರಾಮಸ್ಥರು - ಸದಸ್ಯರ ಜಟಾಪಟಿ ಶುಕ್ರವಾರ ನಡೆದ ಗ್ರಾಪಂ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಗ್ರಾಮಸ್ಥರು ಹಾಜರಿದ್ದರು. ಇದಕ್ಕೆ ಕಾರಣ ಕಟ್ಟಡ ನಿರ್ಮಾಣದ ಜಾಗದ ವಿಷಯ!ಹೌದು. ಕಳೆದ 6 ವರ್ಷಗಳಿಂದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ನಡೆಯುತ್ತಿದ್ದ ಕಾರಣ ಶಾಲೆ ಕಾರ್ಯ ಚಟುವಟಿಕೆಗಳಿಗೆ ಹೇಳಲಾಗದಷ್ಟು ತೊಂದರೆ ಆಗುತ್ತಿತು. ಹೊಸ ಗ್ರಾಮ ಪಂಚಾಯಿತಿ ಕಟ್ಟಡವನ್ನು ಶಾಲೆಯಿಂದ ದೂರದಲ್ಲಿ ನಿರ್ಮಾಣ ಮಾಡಲು ಗ್ರಾಮಸ್ಥರು ತಿರ್ಮಾನಿಸಿದ್ದರು. ಈಗ ಗ್ರಾಮಸ್ಥರು ಗುರುತು ಮಾಡಿದ್ದ ಜಾಗ ವಿವಾದಕ್ಕೆ ಸಿಲುಕಿ, ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಗಿತ್ತು.
ಕೆಲ ಸದಸ್ಯರು ಶಾಲಾ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಜಾಗ ಗುರತು ಮಾಡಿದರು. ಶಾಲಾ ಆವರಣದಲ್ಲಿ ಗ್ರಾಮ ಪಂಚಾಯಿತಿ ಬೇಡವೆಂದು ಶಾಲೆ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಇದ್ದ ಅಡೆತಡೆಗಳನ್ನು ನಿವಾರಿಸಿಕೊಂಡ ಕೆಲ ಸದಸ್ಯರು, ಶಾಲಾ ಆವರಣದಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ, ಬಾಜಿಗೆ ಬಿದ್ದವರಂತೆ ಶಾಲಾ ಆವರಣದಲ್ಲೆ ಕಟ್ಟಡ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದಾರೆ.ಹೀಗಾಗಿ, ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆಗೆ ಬಹುತೇಕ ಗ್ರಾಮ ಮುಖಂಡರು ಹಾಜರಾಗದೆ ಮೌನವಾಗಿ ಪ್ರತಿಭಟನೆ ನಡೆಸಿದ್ದಾರೆ.
- - - -1ಎಚ್‌ಎಚ್‌ಆರ್01:ಹೊಳೆಹೊನ್ನೂರು ಸಮೀಪದ ಸನ್ಯಾಸಿ ಕೋಡಮಗ್ಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.