ಕಾಂಗ್ರೆಸ್‌ ಸರ್ಕಾರ ಪಾಪರ್ ಆಗಿದೆ: ಕೆಎಸ್‌ಈ

| Published : Oct 19 2025, 01:00 AM IST

ಸಾರಾಂಶ

ನೀರು ಗಂಟಿಗೆಗಳಿಗೆ ಸಂಬಳ ನೀಡಲು ಆಗದಿರುವ ಮಟ್ಟಿಗೆ ಕಾಂಗ್ರೆಸ್‌ ಸರ್ಕಾರ ಪಾಪರ್‌ ಆಗಿದೆ. ಸಂಬಳ ಸಿಗದೆ ನೌಕರರು ಆತ್ಮಹತ್ಯೆಯೂ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಉದ್ಯಮಿ ಕಿರಣ್ ಮುಜಮ್ದಾರ್ ಬೆಂಗಳೂರಿನ 15 ರಸ್ತೆಗಳ ಗುಂಡಿಯನ್ನು ತಮ್ಮ ಸಂಸ್ಥೆಯಿಂದ ಮುಚ್ಚುವುದಾಗಿ ಹೇಳಿದ್ದಾರೆ. ಇದು ಗತಿಗೆಟ್ಟ ಸರ್ಕಾರದ ನಿದರ್ಶನ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಶಿವಮೊಗ್ಗ: ನೀರು ಗಂಟಿಗೆಗಳಿಗೆ ಸಂಬಳ ನೀಡಲು ಆಗದಿರುವ ಮಟ್ಟಿಗೆ ಕಾಂಗ್ರೆಸ್‌ ಸರ್ಕಾರ ಪಾಪರ್‌ ಆಗಿದೆ. ಸಂಬಳ ಸಿಗದೆ ನೌಕರರು ಆತ್ಮಹತ್ಯೆಯೂ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಉದ್ಯಮಿ ಕಿರಣ್ ಮುಜಮ್ದಾರ್ ಬೆಂಗಳೂರಿನ 15 ರಸ್ತೆಗಳ ಗುಂಡಿಯನ್ನು ತಮ್ಮ ಸಂಸ್ಥೆಯಿಂದ ಮುಚ್ಚುವುದಾಗಿ ಹೇಳಿದ್ದಾರೆ. ಇದು ಗತಿಗೆಟ್ಟ ಸರ್ಕಾರದ ನಿದರ್ಶನ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈ ಸರ್ಕಾರ ಲಜ್ಜೆಗೆಟ್ಟ ಸರ್ಕಾರವಾಗಿದ್ದು, ಗುತ್ತಿಗೆದಾರರಿಗೆ 33 ಸಾವಿರ ಕೋಟಿ ರು. ಹಣ ಬಾಕಿ ಇಟ್ಟುಕೊಂಡಿದೆ. ಅನೇಕ ಗುತ್ತಿಗೆದಾರರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರು ಹಣ ಕೇಳಿದರೆ ರಾಜ್ಯದ ಮುಖ್ಯಮಂತ್ರಿ ಕೋರ್ಟಿಗೆ ಹೋಗಲಿ ಎಂದು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು. ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ನೈತಿಕತೆ, ಕಾಂಗ್ರೆಸ್ಸಿಗೆ ಇಲ್ಲ. ಕುನ್ನಿಗಳು ಬೊಗಳುತ್ತಿವೆ ಆರೆಸ್ಸೆಸ್ ಅದನ್ನು ಲೆಕ್ಕದಲ್ಲಿಟ್ಟುಕೊಳ್ಳುವುದಿಲ್ಲ. ಮುಸ್ಲಿಮರ ಬಗ್ಗೆ ಮಾತನಾಡಿದರೆ ಸರ್ಕಾರ ಸುಮ್ಮನಿರುತ್ತದೆ. ಆರ್‌ಎಸ್‌ಎಸ್ ಬ್ಯಾನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಆರ್‌ಎಸ್‌ಎಸ್ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ ಬರೆದರು. ಆದರೆ ಆರ್‌ಎಸ್‌ಎಸ್ ಹೆಸರು ಹೇಳಲಿಕ್ಕೂ ಈ ಸರ್ಕಾರಕ್ಕೆ ಧೈರ್ಯ ಇಲ್ಲ. ಹಿಂದೆ ಮೂರು ಬಾರಿ ಕೇಂದ್ರ ಸರ್ಕಾರ ಆರ್‌ಎಸ್‌ಎಸ್ ನಿಷೇಧ ಮಾಡಿತ್ತು. ದೇಶದಲ್ಲಿ ಅವರೇ ನಾಶ ಆದ್ರೂ. ಆರ್‌ಎಸ್‌ಎಸ್ ಬಗ್ಗೆ ವಿರೋಧ ಬಂದಾಗೆಲ್ಲ ಆರ್‌ಎಸ್‌ಎಸ್ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆದು ನಿಂತಿದೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಈ ಬೊಗಳುವ ಕುನ್ನಿಗಳಿಲ್ಲ ಎಂದು ಹರಿಹಾಯ್ದರು.

ಕನ್ನೇರಿ ಶ್ರೀಗೆ ತಡೆ ಖಂಡನೀಯ

ಉತ್ತರ ಕರ್ನಾಟಕದ ಪ್ರಸಿದ್ಧ ಕನ್ನೇರಿ ಸ್ವಾಮೀಜಿಗೆ ಬಾಗಲಕೋಟೆಗೆ ಹೋಗದಂತೆ ಜಿಲ್ಲಾಡಳಿತ ತಡೆ ಒಡ್ಡಿದೆ. ಇದು ಖಂಡನೀಯ. ಆ ಭಾಗದಲ್ಲಿ ಗೋಶಾಲೆ, ವಿದ್ಯಾ ಕೇಂದ್ರಗಳು ಮತ್ತು ಬಡವರಿಗೆ ನಿರಂತರ ದಾಸೋಹ ಏರ್ಪಡಿಸಿದ ಈ ಶ್ರೀಗಳನ್ನು ನಗರ ಪ್ರವೇಶಿಸಿದಂತೆ ಈ ಸರ್ಕಾರ ನೀಡಿದ ಆದೇಶ ಹಿಂದೂ ಸಮಾಜದ ಸಾಧು-ಸಂತರ ಮೇಲಿನ ದೌರ್ಜನ್ಯ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಇದನ್ನು ಖಂಡಿಸಿ ನಾನು ಅ.24ರಂದು ಬಿಜಾಪುರಕ್ಕೆ ಹೋಗುತ್ತಿದ್ದೇನೆ. ಸ್ಥಳೀಯ ಮುಖಂಡರುಗಳು ಮತ್ತು ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ತಕ್ಷಣ ಕನ್ನೇರಿ ಸ್ವಾಮೀಜಿ ಮೇಲಿನ ನಗರ ಪ್ರವೇಶ ತಡೆ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇನೆ ಎಂದರು.ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಲ್ಲ:

ಯತ್ನಾಳ್ ಅವರು ಹೊಸಪಕ್ಷ ಕಟ್ಟುತ್ತಾರಂತೆ ಎಂಬ ಪ್ರಶ್ನೆಗೆ ಆ ಬಗ್ಗೆ ನನಗೆ ಗೊತ್ತಿಲ್ಲ. ನಾನಂತೂ ಪ್ರಾಣ ಇರುವವರೆಗೆ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲ್ಲ. ನಾನೆಂದು ಬಿಜೆಪಿಯನ್ನು ಬಿಟ್ಟು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಹೋದರೆ ಬಿಜೆಪಿಗೆ ಮಾತ್ರ ಹೋಗುತ್ತೇನೆ. ಅದು ಬಿಜೆಪಿಯಲ್ಲಿ ಶುದ್ಧೀಕರಣವಾದ ಬಳಿಕ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.