ರಾಜ್ಯ ಕಾಂಗ್ರೆಸ್ ಸರ್ಕಾರವು ಕಳೆದ ಮೂರು ವರ್ಷಗಳಿಂದ ಜನತೆಗೆ ವಂಚನೆ ಹಾಗೂ ವಿಶ್ವಾಸದ್ರೋಹ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಕಿಡಿಕಾರಿದ್ದಾರೆ. ಭಾನುವಾರ ರಾಜ್ಯ ಬಿಜೆಪಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಒಳ ಜಗಳದಿಂದ ಜನಹಿತದ ಕೆಲಸಗಳನ್ನು ಕಾಂಗ್ರೆಸ್ ಕಡೆಗಣಿಸಿದೆ.
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಕಳೆದ ಮೂರು ವರ್ಷಗಳಿಂದ ಜನತೆಗೆ ವಂಚನೆ ಹಾಗೂ ವಿಶ್ವಾಸದ್ರೋಹ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಕಿಡಿಕಾರಿದ್ದಾರೆ.
ಭಾನುವಾರ ರಾಜ್ಯ ಬಿಜೆಪಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಒಳ ಜಗಳದಿಂದ ಜನಹಿತದ ಕೆಲಸಗಳನ್ನು ಕಾಂಗ್ರೆಸ್ ಕಡೆಗಣಿಸಿದೆ. ಜನಹಿತಕ್ಕೂ ಈ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲದಂತಾಗಿದೆ. ಸರ್ಕಾರ ನಡೆಸುತ್ತಿರುವ ನಾಯಕರು ಸರ್ಕಾರವನ್ನು ತಮಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಸರ್ಕಾರವು ದೆಹಲಿ ಕಾಂಗ್ರೆಸ್‌ನ ಎಟಿಎಂ ಆಗಿದೆ ಎಂದು ಟೀಕಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮ್ಮ ಪಕ್ಷದ ಜಿಲ್ಲಾ ತರಬೇತಿ ಶಿಬಿರಗಳು ನಡೆಯುತ್ತಿವೆ. ಅದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಕರ್ನಾಟಕದಲ್ಲಿ ಪಕ್ಷದ ಚಟುವಟಿಕೆ, ಸಕ್ರಿಯ ಸಂಘಟನೆ ಕುರಿತು ತಿಳಿದುಕೊಂಡಿದ್ದೇನೆ ಎಂದು ತಿಳಿಸಿದರು.ಈಗಿನ ಬಿಜೆಪಿ ಅಧ್ಯಕ್ಷ 2018ರಲ್ಲಿ ಶ್ರೀರಾಮುಲು ಪರ ದುಡಿದಿದ್ದರು:ಎಂಟು ವರ್ಷದ ಹಿಂದೆ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಲು ಬಂದಿದ್ದ ನಿತಿನ್ ನವೀನ್ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.ಇದು ಅಚ್ಚರಿ ಎನಿಸಿದರೂ ಸತ್ಯ.
2018ರ ವಿಧಾನಸಭಾ ಚುನಾವಣೆ ವೇಳೆ ಈ ನಿತಿನ್ ನವೀನ್ ಬಿಜೆಪಿ ಯುವ ಮೋರ್ಚಾದಲ್ಲಿ ಕೆಲಸ
ಕರ್ನಾಟಕದಲ್ಲಿ 2018ರ ವಿಧಾನಸಭಾ ಚುನಾವಣೆ ವೇಳೆ ಈ ನಿತಿನ್ ನವೀನ್ ಬಿಜೆಪಿ ಯುವ ಮೋರ್ಚಾದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಲು ನಿಯೋಜನೆಗೊಂಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಎರಡು ದಿನಗಳ ಪ್ರವಾಸಕ್ಕೆ ರಾಜ್ಯಕ್ಕೆ ಬಂದಿರುವ ನಿತಿನ್ ಅವರೇ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.ಭಾನುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಉಪಹಾರ ಸೇವಿಸಲು ಆಗಮಿಸಿದ ನಿತಿನ್ ಅವರ ಸ್ವಾಗತಕ್ಕೆ ರಾಜ್ಯ ನಾಯಕರು ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸಾಲಿನಲ್ಲಿ ನಿಂತಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಹಸ್ತಲಾಘವ ನೀಡಿದ ನಿತಿನ್ ನವೀನ್ ಅವರು, 2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ನಾನು ನಿಮ್ಮ ಚುನಾವಣೆಗೆ ಕೆಲಸ ಮಾಡಿದ್ದೇನೆ. ಮೊಳಕಾಲ್ಮೂರಿನಲ್ಲಿ ಮೂರು ದಿನ ಕೆಲಸ ಮಾಡಿದ್ದೇನೆ. ಆಗ ನನಗೆ ಯುವ ಮೋರ್ಚಾದ ಜವಾಬ್ದಾರಿ ಇತ್ತು ಎಂದು ನೆನಪು ಮಾಡಿಕೊಟ್ಟರು.
ಕಾಡ ಮಲ್ಲೇಶ್ವರನ ದರ್ಶನ ಪಡೆದ ನಿತಿನ್:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಭಾನುವಾರ ಬೆಳಗ್ಗೆ ಅವರು ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಅರ್ಚಕರು ನಿತಿನ್ ನವೀನ್ ಅವರಿಗೆ ದೇವರ ಹೂವಿನ ಹಾರ ಹಾಕಿ ಆಶೀರ್ವದಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮೊದಲಾದವರು ಸಾಥ್ ನೀಡಿದರು.