ರೈತರನ್ನು ಬದುಕಿಸಲು ಕಾಂಗ್ರೆಸ್‌ ಸರ್ಕಾರ ಬದ್ಧ

| Published : Sep 13 2025, 02:04 AM IST

ರೈತರನ್ನು ಬದುಕಿಸಲು ಕಾಂಗ್ರೆಸ್‌ ಸರ್ಕಾರ ಬದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ತುಂಬಿದ ಭದ್ರಾ ಜಲಾಯಶ ರೈತರ ಜೀವನಕ್ಕೆ ಸುಭದ್ರತೆ ನೀಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಾಡಿಗೆ ಬರ ಎನ್ನುತ್ತಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ರೈತರನ್ನು ಬದುಕಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಶಿವಮೊಗ್ಗ: ತುಂಬಿದ ಭದ್ರಾ ಜಲಾಯಶ ರೈತರ ಜೀವನಕ್ಕೆ ಸುಭದ್ರತೆ ನೀಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಾಡಿಗೆ ಬರ ಎನ್ನುತ್ತಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ರೈತರನ್ನು ಬದುಕಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದ ಸಹಯೋಗದಲ್ಲಿ ಶುಕ್ರವಾರ ಬಿ.ಆರ್.ಪ್ರಾಜೆಕ್ಟ್‌ನಲ್ಲಿ ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿ, ಬಳಿಕ ನೂತನ ಪ್ರವಾಸಿ ಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭದ್ರಾ ಜಲಾಶಯ ಐದು ಜಿಲ್ಲೆಗಳ ಜೀವನಾಡಿಯಾಗಿದೆ. ಈ ಜಲಾಶಯ ತುಂಬಿದರೆ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎಂದರು.

ಕನ್ನಂಬಾಡಿ ಜಲಾಶಯ ಎಂಬುದೊಂದು ಜನರ ಬದುಕಿನ ಸಂಜೀವಿನಿ. ಈ ಜಲಾಶಯಕ್ಕೆ ನಾನು ಸಿದ್ದರಾಮಯ್ಯ ಹೋಗಿ ಬಾಗಿನ ಅರ್ಪಣೆ ಮಾಡಿ ಬಂದಿದ್ದೇವೆ. ಜೊತೆಗೆ ಆಲಮಟ್ಟಿ ಜಲಾಶಯ, ಭದ್ರಾ ಜಲಾಶಯಕ್ಕೂ ಬಾಗಿನ ಅರ್ಪಿಸಿದ್ದೇವೆ. ಟೀಕೆಗಳು ಸಾಯುತ್ತವೆ ಮತ್ತು ನಮ್ಮ ಕೆಲಸ ಉಳಿಯುತ್ತದೆ ಎಂದರು.

ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ನಾಲೆಗಳ ಹೂಳೆತ್ತಲು 100 ಕೋಟಿ ರು. ಯೋಜನೆಯ ಪ್ರಸ್ತಾಪನೆ ಸಲ್ಲಿಸಿದ್ದರು. ಈಗಾಗಲೇ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರ ಕೋರಿಕೆಯಂತೆ ನಾಲೆಗಳನ್ನು ಅಭಿವೃದ್ಧಿ ಪಡಿಸಲು 100 ಕೋಟಿ ರು. ಅನುದಾನ ನೀಡಲಾಗಿದೆ. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್‌ ಅವರಿಗೂ 150 ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಸಾಗರ ಮತ್ತು ಸೊರಬ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡಿದ್ದೇವೆ. ವಿಧಾನ ಪರಿಷತ್‌ ಸದಸ್ಯೆ ಬಲ್ಕೀಶ್ ಬಾನು ಕೂಡ ಭದ್ರಾವತಿ ಕ್ಷೇತ್ರಕ್ಕೆ ವಿಶೇಷ ಅನುದಾನ ಪಡೆದಿದ್ದಾರೆ ಎಂದು ತಿಳಿಸಿದರು.

ರೈತನಿಗೆ ಸರ್ಕಾರಿ ನೌಕರರಂತೆ ಸಂಬಳ, ಪಿಂಚಣಿ, ನಿವೃತ್ತಿ ಯಾವುದು ಇಲ್ಲ. ಇಂತಹ ರೈತರನ್ನು ಬದುಕಿಸುವ, ಬೆನ್ನಿಗೆ ನಿಲ್ಲುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಈ ಮೂಲಕ ರಾಜ್ಯದ ಎಲ್ಲ ಶಾಸಕರು ಜನರ ಹಾಗೂ ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವಕಾಶ ಸಿಕ್ಕಾಗ ಪುಣ್ಯದ ಕೆಲಸ ಮಾಬೇಕಾಗುತ್ತದೆ. ಅದರಂತೆ ಈಗಾಗಲೇ ನಮ್ಮ ಸರ್ಕಾರ ನೀರಾವರಿ ಯೋಜನೆಗೆ 11 ಸಾವಿರ ಕೋಟಿ ರು. ಖರ್ಚು ಮಾಡಿದ್ದು, ಚನ್ನಗಿರಿ ವ್ಯಾಪ್ತಿಯ ನೀರಾವರಿಗೆ 362 ಕೋಟಿ ರು. ಕೊಟ್ಟಿದ್ದೇವೆ. ಹಾಗೂ ಸರ್ವರಿಗೂ ಸಮಪಾಲು-ಸಮಬಾಳು ಆಶಯದಂತೆ ರಾಜ್ಯ ಜನರ ಏಳಿಗಾಗಿ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ್ದೇವೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5500 ಕೋಟಿ ರು. ಕೊಡುವುದಾಗಿ ಹೇಳಿತ್ತು. ಇದೀಗ ರಾಜ್ಯ ಸರ್ಕಾರ 10,000 ಕೋಟಿ ರು. ಖರ್ಚು ಮಾಡಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಅಡಿಗೆ ಏರಿಸಲು ಗೆಜೆಟ್ ನೋಟಿಫಿಕೇಶನ್ ಆಗಿಬೇಕಿದೆ. ಆದರೆ ಅದರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ತಾವು ಅನುದಾನ ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಇದುವರೆಗೂ ಭದ್ರಾ ನೀರಾವರಿ ಯೋಜನೆಗೆ ಒಂದು ರುಪಾಯಿ ಕೂಡ ಬಂದಿಲ್ಲ. ನಿಮಗೆ ವೋಟು ಕೊಟ್ಟಿದ್ದೇವೆ, ಹಣ ಯಾಕೆ ಬಿಡುಗಡೆ ಆಗಿಲ್ಲ ಎಂದು ಬಿಜೆಪಿ ಸಂಸದರಿಗೆ ನೀವೆಲ್ಲ ಕೇಳಬೇಕು ಎಂದು ಜನರಿಗೆ ಕರೆ ನೀಡಿದರು.

ಚನ್ನಗಿರಿ ತಾಲೂಕಿನಲ್ಲಿ 367 ಕೋಟಿ ರು. ವೆಚ್ಚದಲ್ಲಿ ಕೆರೆಗಳ ಪುನಶ್ಚೇತನ ಕಾರ್ಯ ನಡೆಯಲಿದೆ. ಆಲಮಟ್ಟಿ ಜಲಾಶಯದ ಏರಿಕೆಗೆ ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆ ಕಾರ್ಯಗತಗೊಳಿಸಲಿಲ್ಲ ಎಂದು ದೂರಿದ ಅವರು, ಕಳಸ ಬಂಡೂರಿ, ಮೇಕೆದಾಟು, ಆಲಮಟ್ಟಿ ಯೋಜನೆಗಳಿಗೆ ಕೇಂದ್ರದಿಂದ ಅನುಮತಿ ಕೊಡಿಸಬೇಕು. ಇಲ್ಲದಿದ್ದರೆ ಬಿಜೆಪಿ ಸಂಸದರು ರಾಜೀನಾಮೆ ಕೊಡಬೇಕು ಎಂದು ಹರಿಹಾಯ್ದರು.

ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ನಾನು ಹೇಳಿದ್ದೆ. ಅದರಂತೆ 2028 ಕ್ಕೆ ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನಿಮ್ಮ ಪ್ರೀತಿ ವಿಶ್ವಾಸ ಯಾವಾಗಲು ಈ ಸರ್ಕಾರದ ಮೇಲಿರಲಿ ಎಂದು ಕೋರಿದರು.

ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಮಾತನಾಡಿ, ಭದ್ರಾ ಜಲಾಶಯದಿಂದ ಮೂರು ಜಿಲ್ಲೆಗೆ ನೀರನ್ನು ಒದಗಿಸುವ ಕೆಲಸ ಮಾಡಲಾಗಿದ್ದು, ಆ ಭಾಗದ ಜನರಿಗೆ ಭದ್ರಾ ಜಲಾಶಯ ಜೀವನಾಡಿ ಆಗಿದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗಾಗಿ 300 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಇದರಿಂದ ಹೊಸಪೇಟೆಯ ಒಂದು ತಾಲೂಕು, ದಾವಣಗೆರೆಯ 3 ತಾಲ್ಲೂಕಿಗೆ ಅನುಕೂಲವಾಯಿತು ಹಾಗೂ ಭದ್ರ ಬಲದಂಡೆಯಿಂದ ಭದ್ರಾವತಿ, ಮಾಯಕೊಂಡ, ಹರಪ್ಪನಹಳ್ಳಿ, ದಾವಣಗೆರೆ ತಾಲೂಕುಗಳಿಗೆ 1.46 ಲಕ್ಷ ಕ್ಯೂಸೆಕ್ಸ್ ನೀರು ಹರಿಯುತ್ತಿದೆ ಎಂದರು.

ಎಲ್ಲರಿಗೂ ಕುಡಿಯುವ ನೀರನ್ನು ಕೊಡಬೇಕು. ಇದರ ಬಗ್ಗೆ ಒಂದು ಸೂಕ್ತವಾದ ನಿರ್ಧಾರವನ್ನು ಕೂಡ ಮಾಡಲಾಗಿದೆ. ಆ ನಿಟ್ಟಿನಲ್ಲಿ ಭದ್ರಾ ಜಲಾಶಯದ ನೀರಾವರಿ ಯೋಜನೆಗೆ ಹೆಚ್ಚು ಅನುದಾನ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ತರಿಕೇರೆ ಶಾಸಕ ಜಿ.ಎಚ್.ಶ್ರೀನಿವಾಸ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಹರಪ್ಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಹೊನ್ನಳ್ಳಿ ಶಾಸಕ ಶಾಂತನಗೌಡ, ಗುಬ್ಬಿ ಶಾಸಕ ಶ್ರೀನಿವಾಸ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಜಿ.ಪಲ್ಲವಿ, ಎಚ್.ಎಸ್.ಸುಂದರೇಶ್ ಮತ್ತಿತರರು ಇದ್ದರು.

ಪಡ್ನವೀಸ್‌ಗೆ ಎಚ್ಚರಿಕೆ ನೀಡಿದ ಡಿಕೆಶಿ

ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ರಾಜಕಾರಣ ಮಾಡಿದರೆ ಅದೇ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ ಧೂಳಪಟವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಪಡ್ನವೀಸ್‌ಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡ್ನವೀಸ್ ಅವರೇ ನೀನೇನು ಜಡ್ಜ್ ಅಲ್ಲ, ನಮ್ಮ ನೀರು ನಮ್ಮ ಹಕ್ಕು. ನಮಗೆ 524 ವರೆಗೂ ಕೂಡ ನೋಟಿಫಿಕೇಶನ್ ಆಗಿದೆ. ಗೆಜೆಟ್ ಆಗಬೇಕಿದೆ. ನೀವು ರಾಜಕಾರಣ ಮಾಡಬಹುದು. ಆದರೆ, ಕರ್ನಾಟಕದಲ್ಲಿ ನಿಮ್ಮ ಪಕ್ಷ ಬಿಜೆಪಿ ಧೂಳೀಪಟ ಆಗುತ್ತದೆ. ರೈತರ ಪರ ವಿಚಾರದಲ್ಲಿ ನಾವು ತೀರ್ಮಾನ ಮಾಡುತ್ತೇವೆ ಎಂದರು.

ಕುಡಿಯುವ ನೀರಿಗೆ ರಾಜಕಾರಣ ಮಾಡಲು ಹೋಗುವುದಿಲ್ಲ. ಮಹದಾಯಿ ಯೋಜನಿಗೆ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು ಕೊಡುತ್ತಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸಿದೆ. ವನ್ಯಜೀವಿ ಇಲಾಖೆ ಕೊಟ್ಟರೆ ನಾವು ಮಹದಾಯಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.