ಸಾರಾಂಶ
ಹಿಂದುಳಿದ ವರ್ಗಗಳ ಜಾತಿ ಗಣತಿ ಹೆಸರಲ್ಲಿ ರಾಜ್ಯ ಸರ್ಕಾರವು ಕ್ರೈಸ್ತ ಉಪ್ಪಾರ, ಕ್ರೈಸ್ತ ಭೋವಿ ಎನ್ನುವ ಕಾಲಂ ಸೃಷ್ಟಿಸಿ, ಜಾತಿಗಳನ್ನು ಒಡೆಯುವ ಹುನ್ನಾರ ನಡೆಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು
ಶಿವಮೊಗ್ಗ: ಹಿಂದುಳಿದ ವರ್ಗಗಳ ಜಾತಿ ಗಣತಿ ಹೆಸರಲ್ಲಿ ರಾಜ್ಯ ಸರ್ಕಾರವು ಕ್ರೈಸ್ತ ಉಪ್ಪಾರ, ಕ್ರೈಸ್ತ ಭೋವಿ ಎನ್ನುವ ಕಾಲಂ ಸೃಷ್ಟಿಸಿ, ಜಾತಿಗಳನ್ನು ಒಡೆಯುವ ಹುನ್ನಾರ ನಡೆಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂಗಳ ವಿರೋಧಿಯಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಮಿತಿಮೀರಿದೆ. ಈಗ ಅದು ಜಾತಿಗಳನ್ನು ಒಡೆಯುವ ಕೆಲಸಕ್ಕೆ ಕೈಹಾಕಿರುವುದು ದೌರ್ಭಾಗ್ಯ ಎಂದು ವಿಷಾಧಿಸಿದರು.ಭದ್ರಾವತಿಯಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ ಘಟನೆ, ತರೀಕೆರೆ, ಮದ್ದೂರು ಘಟನೆಗಳು, ಸಾಗರದ ಘಟನೆ ಸೇರಿದಂತೆ ರಾಜ್ಯದ ವಿವಿದೆಢೆಗಳಲ್ಲಿನ ಗಣೇಶೋತ್ಸವದ ಮೆರವಣಿಗೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆಗೆ ಪ್ರತಿಕ್ರಿಯಿಸಿದ ಅವರು, ಈ ದೇಶದ ಅನ್ನ, ನೀರು ತಿಂದು ಈ ದೇಶದ ವಿರುದ್ಧವೇ ಘೋಷಣೆ ಕೂಗುವ ಅವರ ಮನಸ್ಥಿತಿಗೆ ಏನು ಹೇಳಬೇಕೋಗೊತ್ತಿಲ್ಲ, ಸರ್ಕಾರ ತಕ್ಷಣವೇ ಅವರನ್ನು ಒದ್ದು ಒಳಹಾಕಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರು ಅಸಹಾಯಕರಾಗಿದ್ದಾರೆ. ಇಡೀ ಸರ್ಕಾರವೇ ನಿಷ್ಕ್ರಿಯವಾಗಿರುವಾಗ ಒಬ್ಬ ಮಂತ್ರಿಯಾದರೂ ಏನು ಮಾಡುವುದಕ್ಕೆ ಸಾಧ್ಯ? ಸರ್ಕಾರದ ಒಲೈಕೆ ರಾಜಕಾರಣದ ಪರಿಣಾಮ, ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಹಿಂದೂಗಳ ಮೇಲೆ ಇನ್ನೊಂದು ಸಮಾಜವನ್ನು ಎತ್ತಿಕಟ್ಟುವ ಕೆಲಸ ನಡೆದಿದೆ ಇದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಗುಡುಗಿದರು.ಮದ್ದೂರಿನ ಘಟನೆ ಸಂಬಂಧದ ಕುರಿತ ಹೇಳಿಕೆ ವಿಚಾರದಲ್ಲಿ ಸಿ.ಟಿ.ರವಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದರ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರ ಹಿಂದೂಗಳ ವಿರೋಧಿ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಗಣೇಶ ಮೆರವಣಿಗೆ ಮೇಲೆ ಕಲ್ಲುತೂರಿದವರ ಮೇಲೆ ಕಠಿಣ ಶಿಕ್ಷೆ ವಿಧಿಸಬೇಕಾದ ಈ ಸರ್ಕಾರ, ಘಟನೆ ಖಂಡಿಸಿ ಪ್ರತಿಭಟನೆ ಮಾಡುವವರ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತದೆ. ಹೇಳಿಕೆ ನೀಡಿದ ಹಿಂದೂ ನಾಯಕರ ಮೇಲೆ ಎಫ್‌ಐಆರ್ ದಾಖಲು ಮಾಡುತ್ತದೆ ಎಂದರೆ ಇದು ಹಿಂದೂ ವಿರೋಧಿ ಸರ್ಕಾರ ಎಂದು ಆರೋಪಿಸಿದರು.ಕೇಂದ್ರದಲ್ಲಿ ವಿಪಕ್ಷಗಳಿಗೆ ಕೆಲಸವಿಲ್ಲ, ಜನಪರ ಆಡಳಿತವೇ ಅವರಿಗೆ ಬೇಕಾಗಿಲ್ಲ. ಮತಗಳ್ಳತನದ ಆರೋಪದ ಮೂಲಕ ಚುನಾವಣಾ ಆಯೋಗವನ್ನು ದೂಷಿಸಿ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಲಾಗುತ್ತಿದೆ. ಆಡಳಿತ ವ್ಯವಸ್ಥೆಯನ್ನೇ ಅಸ್ಥಿರಗೊಳಿಸುವ ಹುನ್ನಾರವನ್ನು ಕಾಂಗ್ರೆಸ್ ನಡೆಸಿದೆ ಎಂದು ದೂರಿದರು.ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನುಮುಷ್ತಾಕ್ ಅವರಿಗೆ ಆಹ್ವಾನ ನೀಡಿದ್ದರ ವಿರುದ್ಧ ಕೋರ್ಟ್‌ಗೆ ಮತ್ತೆ ಅರ್ಜಿ ದಾಖಲಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲೇಖಕಿ ಬಾನುಮುಸ್ತಾಕ್ ಅವರ ಬಗ್ಗೆ ನನಗೆ ಗೌರವವಿದೆ. ಆದರೆ ತಾಯಿ ಭುವನೇಶ್ವರಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಾನುಮುಷ್ತಾಕ್ ಅವರು ನಾಡಹಬ್ಬ ದಸರಾ ಉದ್ಘಾಟನೆ ಮಾಡಬಾರದು. ಕನ್ನಡ ಪರ ಹೋರಾಟಗಾರರು ಇದನ್ನು ಪ್ರಶ್ನಿಸಬೇಕು ಎಂದರು.