ಸಾರಾಂಶ
-11 ಸಾವಿರ ಕೋಟಿ ಅಭಿವೃದ್ಧಿಗೆ ಅನುದಾನ, ಮೂಗಿಗೆ ತುಪ್ಪ ಸವರುವ ಕಾರ್ಯ ನಾರಾಯಣಸ್ವಾಮಿ ಲೇವಡಿ
----ಕನ್ನಡಪ್ರಭ ವಾರ್ತೆ ಮುದಗಲ್
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಆರೋಪಿಸಿದರು.ಪಟ್ಟಣದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹಿಡಿದು ಎಲ್ಲ ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅಭಿವೃದ್ಧಿಗೆ ಸರ್ಕಾರ ಗಮನ ಹರಿಸದೇ ಭ್ರಷ್ಠಾಚಾರ, ದಲಿತರ ಮೇಲೆ ಹಲ್ಲೆ, ರೈತರ ಆತ್ಮಹತ್ಯೆ, ದಲಿತರ ಕೊಲೆ ಪ್ರಕರಣ ನಿರಂತರ ನಡೆಯುತ್ತಿವೆ. ತಮ್ಮ ಮೇಲಿನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ದಿನಕ್ಕೊಂದು ನಾಟಕೀಯ ಬೆಳವಣಿಗೆ ಸೃಷ್ಟಿಸಿ ವಿರೋಧ ಪಕ್ಷದವರ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಲು ಮುಂದಾಗಿದ್ದಾರೆ ಎಂದರು.
ಜವಾಬ್ಧಾರಿಯುತ ವಿರೋಧಪಕ್ಷವಾದ ನಾವುಗಳು ಸರ್ಕಾರದ ಜನ ವಿರೋಧಿ ನೀತಿ ವಿರೋಧಿಸುತ್ತ ಹೋರಾಟಕ್ಕೆ ಬೀದಿಗಿಳಿದಿದ್ದೇವೆ. ಕಲಬುರಗಿಯಲ್ಲಿ ಸಚಿವ ಸಂಪುಟ ನಡೆಸಿ 11 ಸಾವಿರ ಕೋಟಿ ಅಭಿವೃದ್ಧಿಗೆ ಅನುದಾನ ನೀಡುತ್ತೇವೆ ಎನ್ನುವ ತೀರ್ಮಾನ ಜನತೆಯ ಮೂಗಿಗೆ ತುಪ್ಪ ಸವರುವ ಕಾರ್ಯ ನಿರ್ವಹಿಸಿದ್ದಾರೆ ಎಂದು ಲೇವಡಿ ಮಾಡಿದರು.ಸರ್ಕಾರ ಬಿಜೆಪಿ ಶಾಸಕರನ್ನು ಟಾರ್ಗೆಟ್ ಮಾಡಿ ಬಂಧನ ಮಾಡುತ್ತಿದೆ. ಯಾವದೇ ಪ್ರಕರಣದಲ್ಲಿ ಸರ್ಕಾರ ನಿಜಾಂಶ ತಿಳಿಯದೇ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವುದೇ ದ್ವೇಷ ರಾಜಕಾರಣ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಆದರೆ, ಯಾದಗಿರಿ ಶಾಸಕರ ಮೇಲೆ ಪಿಎಸ್ಐ ಸಾವಿನ ಪ್ರಕರಣದ ಎಫ್ಐಆರ್ ದಾಖಲಾಗಿದ್ದರೂ ಅವರನ್ನು ಸಿಎಂ ಸಿದ್ಧರಾಮಯ್ಯ ಅವರೇ ರಕ್ಷಣೆ ನೀಡಿ ಇಲ್ಲಿಯವರೆಗೆ ಶಾಸಕ ಚೆನ್ನಾರಡ್ಡಿ, ಅವರ ಸುಪುತ್ರನನ್ನು ಬಂಧಿಸದೇ ಇರುವದು ಸರ್ಕಾರದ ತಾರತಮ್ಯವಲ್ಲದೇ ಇನ್ನೇನು ಎಂದರು.ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಮೀಸಲಾತಿಯ ನೆಪದಲ್ಲಿ ದಲಿತರನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿದ್ದು, ಪ್ರಧಾನಿಗಳಾದ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ ಗಾಂಧಿ ಇವರೆಲ್ಲರೂ ಮೀಸಲಾತಿ ವಿರೋಧಿಗಳಾಗಿದ್ದಾರೆ ಎಂದು ದೂರಿದರು.
ಈ ವೇಳೆ ಪಕ್ಷದ ಮುಖಂಡರಾದ ಆರ್.ರುದ್ರಯ್ಯ, ವೀರನಗೌಡ ಲೆಕ್ಕಿಹಾಳ, ಹುಲ್ಲೆಶ ಸಾಹುಕಾರ, ಕರಿಯಪ್ಪ ಯಾದವ ಸೇರಿ ಅನೇಕರಿದ್ದರು.